ಸಿ.ಟಿ. ರವಿ ವಿರುದ್ಧ ಮಾನನಷ್ಟ ಮೊಕದ್ದಮೆ!

By Suvarna News  |  First Published Jan 11, 2020, 1:17 PM IST

ವಿರೋಧದ ಮಧ್ಯೆಯೂ ಶೃಂಗೇರಿಯಲ್ಲಿ ಸಾಹಿತ್ಯ ಸಮ್ಮೇಳನ| ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವಿರೋಧಿಸಿ ಶೃಂಗೇರಿ ಬಂದ್‌| ಸಿ.ಟಿ. ರವಿ ವಿರುದ್ಧ ಮಾನನಷ್ಟ ಮೊಕದ್ದಮೆ!


ಚಿಕ್ಕಮಗಳೂರು[ಜ.11]: ಆಡಳಿತ ಪಕ್ಷದ ವಿರೋಧ, ಪೊಲೀಸರ ನಿರ್ಬಂಧ, ಕೆಲ ಸಂಘಟನೆಗಳ ವಿರೋಧ, ಪಟ್ಟಣ ಬಂದ್‌ ಇತ್ಯಾದಿ ಅಡೆತಡೆಗಳ ನಡುವೆಯೂ ಶೃಂಗೇರಿಯಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿತು.

ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್‌ ಹೆಗ್ಡೆ ಅವರು ನಕ್ಸಲ್‌ ಪರವಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅನೇಕ ಸಂಘಟನೆಗಳಿಂದ ಈ ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರೊಂದಿಗೆ ಜಿಲ್ಲೆಯವರೇ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಜನಪ್ರತಿನಿಧಿಗಳೂ ಸಮ್ಮೇಳನದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಮಾತ್ರವಲ್ಲದೆ ಸಮ್ಮೇಳನಕ್ಕೆ ಅನುಮತಿ ಸಿಗದ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡಬೇಕಾಗಿದ್ದ .5 ಲಕ್ಷ ಅನುದಾನವನ್ನು ನೀಡುವುದಿಲ್ಲ ಎಂದು ತಿಳಿಸಿತ್ತು.

Tap to resize

Latest Videos

ಶೃಂಗೇರಿ ಬಂದ್ : ಭಕ್ತರು ಆಗಮಿಸದಂತೆ ಮನವಿ

ಈ ಎಲ್ಲ ಗೊಂದಲ, ಗದ್ದಲಗಳ ನಡುವೆಯೇ ಕೆಲ ಸಂಘಟನೆಗಳು ಸಮ್ಮೇಳನ ವಿರೋಧಿಸಿ ಬಂದ್‌ಗೆ ಕರೆ ಕೊಟ್ಟಿದ್ದರಿಂದ ಶೃಂಗೇರಿ ಪಟ್ಟಣದಲ್ಲಿ ಬಿಕೋ ವಾತಾವರಣ ಇತ್ತು. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ಎಲ್ಲಿ ನೋಡಿದರಲ್ಲಿ ಪೊಲೀಸರ ಸರ್ಪಗಾವಲು ಇತ್ತು. ಹೀಗಾಗಿ ಬೆಳಗ್ಗೆ 10 ಗಂಟೆಯಾದರೂ ಜನರ ಓಡಾಟ ವಿರಳವಾಗಿದ್ದರಿಂದ ಸಮ್ಮೇಳನ ನಡೆಯುತ್ತದೆಯೋ, ಇಲ್ಲವೋ ಅನುಮಾನ ನಡುವೆಯೇ ಸಮ್ಮೇಳನ ಮೊದಲನೇ ದಿನ ಪೂರೈಸಿತು.

ಸಿ.ಟಿ. ರವಿ ವಿರುದ್ಧ ಮಾನನಷ್ಟ ಮೊಕದ್ದಮೆ!

ನನ್ನ ಬಗ್ಗೆ ಆಧಾರ ರಹಿತ ಆರೋಪ ಮಾಡಿರುವ ಈ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಟಿ. ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್‌ ಹೆಗ್ಡೆ ಹೇಳಿದರು.

ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಲ್ಲೋ ನನ್ನ ಬಗ್ಗೆ ಸಿ.ಟಿ.ರವಿ ಹಗುರವಾಗಿ ಮಾತನಾಡಿರುವುದು ಪತ್ರಿಕೆಗಳಲ್ಲಿ ಬಂದಿದೆ. ಸ್ಥಾನದಲ್ಲಿದ್ದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅವರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಲಾಗುವುದು ಎಂದರು. ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಬಾವುಟ ಹಾರಿಸಬಾರದೆಂದು ಹೇಳಿರುವವರು ಕನ್ನಡ ಸಂಸ್ಕೃತಿಯ ಸಚಿವರು ಎಂದು ಹಾಸ್ಯವಾಗಿ ನುಡಿದರು.

ಗುಂಪು ಗುಂಪಾಗಿ ಪ್ರತಿಭಟನೆ

ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಸಮಿತಿ ಹಾಗೂ ನಕ್ಸಲ್‌ ವಿರೋಧಿ ಹೋರಾಟ ಸಮಿತಿ ಗುಂಪು ಗುಂಪಾಗಿ ಹೋರಾಟ ನಡೆಸಿತು. ಸಮ್ಮೇಳನದ ಹೊರ ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ರೀತಿ ಭಿನ್ನವಾಗಿತ್ತು. ಒಂದೇ ಬಾರಿಗೆ ಪ್ರತಿಭಟನೆ ನಡೆಸಿದರೆ ಪೊಲೀಸರು ವಶಕ್ಕೆ ತೆಗೆದುಕೊಂಡರೆ ಪ್ರತಿಭಟನೆ ಮುಕ್ತಾಯವಾಗುತ್ತದೆ ಎಂದು ಪ್ಲಾನ್‌ ಮಾಡಿಕೊಂಡ ಪ್ರತಿಭಟನಾಕಾರರು 10-20 ಮಂದಿ ಗುಂಪು ಗುಂಪಾಗಿ ಬಂದು ಪ್ರತಿಭಟನೆ ವ್ಯಕ್ತಪಡಿಸಿದರು. ಹೀಗೆ ಬಂದವರೆಲ್ಲರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಬಿಜೆಪಿ ಜನಪ್ರತಿನಿಧಿಗಳು ಗೈರು

ಸಮ್ಮೇಳನದ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠಲ್‌ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದರಿಂದ ಸಮ್ಮೇಳನಕ್ಕೆ ಗೈರಾಗುವುದಿಲ್ಲ ಎಂದು ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ನುಡಿದಂತೆ ನಡೆದುಕೊಂಡಿದ್ದಾರೆ.

ಸಚಿವ ಸಿ.ಟಿ. ರವಿ ಸಮ್ಮೇಳನ ಉದ್ಘಾಟಿಸಬೇಕಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯನ್ನು ಉದ್ಘಾಟಿಸಬೇಕಾಗಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸಮ್ಮೇಳನಾಧ್ಯಕ್ಷರ ಭಾಷಣದ ಹಸ್ತಾಪ್ರತಿ ಬಿಡುಗಡೆ ಮಾಡಬೇಕಾಗಿದ್ದ ವಿಧಾನಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಜಿಪಂ ಉಪಾಧ್ಯಕ್ಷ ವಿಜಯಕುಮಾರ್‌ ಗೈರು ಹಾಜರಿಯಾಗಿದ್ದರು.

ಜನಪ್ರತಿನಿಧಿಗಳು ಮಾತ್ರವಲ್ಲ, ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಕಾರ್ಯಕ್ರಮದ ವೇದಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.

ಸಚಿವ ಸಿಟಿ ರವಿ ವಿರುದ್ಧ ಅಸಮಾಧಾನ : ರಾಜೀನಾಮೆಗೆ ಆಗ್ರಹ

ಬಿಗಿ ಬಂದೋಬಸ್ತ್

ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗಿದ್ದರ ಹಿನ್ನಲೆಯಲ್ಲಿ ಶೃಂಗೇರಿ ಪಟ್ಟಣದಲ್ಲಿ ಸುಮಾರು 900 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಮ್ಮೇಳನದ ಹೊರ ಭಾಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು.

click me!