
ಬೆಂಗಳೂರು[ಜ.11]: ನನಗೆ ಹಂಚಿಕೆಯಾಗಿರುವ ಸರ್ಕಾರಿ ಅಧಿಕೃತ ನಿವಾಸವನ್ನು ಲೋಕೋಪಯೋಗಿ ಇಲಾಖೆಯು ದುರಸ್ತಿ ಕಾಮಗಾರಿ ಕಾರಣದಿಂದಾಗಿ ನನಗಿನ್ನೂ ಹಸ್ತಾಂತರ ಮಾಡಿಲ್ಲ. ಹೀಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾವೇರಿ ನಿವಾಸದಲ್ಲಿಯೇ ಉಳಿದುಕೊಂಡಿದ್ದೇನೆ. ಆದರೆ, ಸತ್ಯ ಅರಿಯದ ಬಿಜೆಪಿಯವರು ಸುಳ್ಳು ಸೃಷ್ಟಿಸಿ ವಿಕೃತಾನಂದ ಅನುಭವಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಶಿಷ್ಟಾಚಾರದ ಪ್ರಕಾರ ಕಾವೇರಿ ನಿವಾಸ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಂಚಿಕೆಯಾಗಬೇಕು. ಸತತವಾಗಿ ಸೂಚನೆ ನೀಡುತ್ತಿದ್ದರೂ ಮಜಾವಾದಿ ಸಿದ್ದರಾಮಯ್ಯ ಖಾಲಿ ಮಾಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿತ್ತು.
ಇದಕ್ಕೆ ಟ್ವೀಟರ್‌ನಲ್ಲಿಯೇ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಹಂಚಿಕೆಯಾಗಿದ್ದ ಮನೆಯು ನನಗೆ ಹಂಚಿಕೆಯಾಗಿದೆ. ಆದರೆ, ಎಚ್.ಡಿ. ರೇವಣ್ಣ ಅವರು ಡಿ.15ರಂದು ಮನೆ ಖಾಲಿ ಮಾಡಿದ್ದಾರೆ. ಹೀಗಾಗಿ ಲೋಕೋಪಯೋಗಿ ಇಲಾಖೆಯು ಮನೆಯ ದುರಸ್ತಿಯನ್ನು ಜ.15ರ ಒಳಗಾಗಿ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಡಿ.15ರವರೆಗೆ ಎಚ್.ಡಿ. ರೇವಣ್ಣ ಮನೆ ಬಿಟ್ಟುಕೊಡದಿದ್ದರಿಂದ ದುರಸ್ತಿ ಕಾರ್ಯ ವಿಳಂಬವಾಗಿದೆ. ಇದರಿಂದ ಅನಿವಾರ್ಯವಾಗಿ ಕಾವೇರಿ ನಿವಾಸದಲ್ಲಿಯೇ ಉಳಿಯಬೇಕಾಗಿದೆಯೇ ಹೊರತು ಬೇರೆ ಕಾರಣಗಳಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಲೋಕೋಪಯೋಗಿ ಇಲಾಖೆಯೇ ಮಾಹಿತಿ ನೀಡಿದೆ. ಹೀಗಿದ್ದರೂ ರಾಜ್ಯ ಬಿಜೆಪಿಯವರು ಸುಳ್ಳು ಸುದ್ದಿ ಸೃಷ್ಟಿಸುತ್ತಾ ವಿಕೃತಾನಂದ ಅನುಭವಿಸುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ