
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮೇ.22): ‘ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರ ಕೇಂದ್ರಿತ ತನಿಖೆ ಹಾಗೂ ಸಮುದಾಯ ಪೊಲೀಸ್ ವ್ಯವಸ್ಥೆ’ ಯನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವುದಾಗಿ ನೂತನ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹೇಳಿದ್ದಾರೆ. ಬುಧವಾರ ಸಂಜೆ ಕರುನಾಡಿನ ಅರಕ್ಷಕ ಪಡೆಯ ಹಂಗಾಮಿ ಮಹಾದಂಡನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ತಮ್ಮ ಮುಂದಿನ ಆಡಳಿತದ ಆಶೋತ್ತರಗಳ ಕುರಿತು ಮಾತನಾಡಿದರು. ಸಂದರ್ಶನ ಪೂರ್ಣ ವಿವರ ಹೀಗಿದೆ.
* ನಿಮ್ಮ ಆಡಳಿತದಲ್ಲಿ ಮೊದಲ ಆದ್ಯತೆಗಳೇನು?
ಪೊಲೀಸ್ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಅಪರಾಧ ತನಿಖೆಗಳಲ್ಲಿ ನೊಂದ ವ್ಯಕ್ತಿ ಕೇಂದ್ರಿತ ವ್ಯವಸ್ಥೆ, ಪೊಲೀಸರ ಕೆಲಸಗಳಲ್ಲಿ ಜನ ಸಮುದಾಯದ ಸಹಭಾಗಿತ್ವ, ಕಾನೂನು ಮತ್ತು ಸುವ್ಯವಸ್ಥೆ ಉತ್ತಮಗೊಳಿಸಿ ಸೌಹಾರ್ದತೆ ಖಾತ್ರಿಪಡಿಸುವುದಾಗಿದೆ. ಅಲ್ಲದೆ ರಾಷ್ಟ್ರ ವಿರೋಧಿ, ಸಮಾಜಘಾತುಕ ಚಟುವಟಿಕೆಗಳು, ಡ್ರಗ್ಸ್ ಮಾರಾಟ, ರೌಡಿಸಂ ಹಾಗೂ ಸುಳ್ಳು ಸುದ್ದಿ ಹರಡುವಿಕೆಯನ್ನು ಸಂಪೂರ್ಣ ಬಂದ್ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಕದಂಬ ನೌಕಾನೆಲೆಯಲ್ಲಿ 5ನೇ ಶತಮಾನ ಮಾದರಿಯ ಕೌಂಡಿನ್ಯ ಹಡಗು ಲೋಕಾರ್ಪಣೆ
* ಏನಿದು ನೊಂದ ವ್ಯಕ್ತಿ ಕೇಂದ್ರಿತ ವ್ಯವಸ್ಥೆ?
ಪ್ರಸುತ್ತ ಅಪರಾಧ ಪ್ರಕರಣಗಳಲ್ಲಿ ತನಿಖೆಯೂ ಆರೋಪಿ ಕೇಂದ್ರಿತವಾಗಿದೆ. ಈ ವ್ಯವಸ್ಥೆ ಬದಲಾಗಬೇಕಿದ್ದು, ಅಪರಾಧ ಕೃತ್ಯಗಳಲ್ಲಿ ನೊಂದವರಿಗೆ ನ್ಯಾಯ ಸಿಗುವಂತಾಗಬೇಕು. ಹೀಗಾಗಿ ನೊಂದ ವ್ಯಕ್ತಿ ಕೇಂದ್ರೀತ ತನಿಖಾ ವ್ಯವಸ್ಥೆ ತರಲಾಗುತ್ತದೆ. ಆಗ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಸಂತ್ರಸ್ತರೇ ತನಿಖೆಗೆ ಪ್ರಮುಖವಾಗಿತ್ತಾರೆ.
* ನೀವು ನೇರವಾಗಿ ಜನ ಸಂಪರ್ಕ ಸಭೆ ನಡೆಸುತ್ತೀರಾ?
ಪೊಲೀಸರು ಜನರ ಮಧ್ಯೆ ಕೆಲಸ ಮಾಡಬೇಕಿದೆ. ಇದಕ್ಕೆ ನಾನೂ ಹೊರತಾಗಿಲ್ಲ. ಜಿಲ್ಲೆಗಳ ಪ್ರವಾಸದ ವೇಳೆ ಜನರಿಂದ ಅಹವಾಲು ಆಲಿಸುತ್ತೇನೆ. ನನ್ನ ಕಚೇರಿಯಲ್ಲಿ ಸಹ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವಿರುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೂಡ ಜನರೊಂದಿಗೆ ಸಂವಹನ ನಡೆಸುತ್ತೇನೆ.
* ಸೈಬರ್ ಕ್ರೈಂ ಕೇಸ್‌ಗಳ ತಡೆ ಹೇಗೆ?
ಪ್ರಸುತ್ತ ಒಟ್ಟು ಅಪರಾಧ ಪ್ರಕರಣಗಳಲ್ಲಿ ಶೇ.12 ರಷ್ಟು ಸೈಬರ್ ಪ್ರಕರಣಗಳಾಗಿವೆ. ಸ್ಥಳೀಯ ಠಾಣೆಗಳಲ್ಲಿ ಸಹ ಸೈಬರ್ ಕ್ರೈಂ ಬಗ್ಗೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಸಿಐಡಿ ಸೈಬರ್ ವಿಭಾಗದಿಂದ ಒಂದು ಲಕ್ಷ ಪೊಲೀಸರ ಪೈಕಿ 40 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಹೊಸ ವಿಭಾಗ ಸಹ ರಚಿಸಲಾಗಿದೆ.
* ನಿಮ್ಮ ಆಡಳಿತದಲ್ಲಿ ಹೊಸ ನೇಮಕಾತಿ ನಡೆಯಲಿದೆಯೇ?
ಮೂರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ ನಡೆದಿಲ್ಲ ಎಂಬುದು ಗೊತ್ತಿದೆ. ಸದ್ಯ ಹಿಂದಿನ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ನೇಮಕಾತಿ ನಡೆಸಲಾಗುತ್ತದೆ.
ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್ ಸಭೆ
* ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಹೇಳುವ ಮಾತು?
ಅಧಿಕಾರಿ ಮತ್ತು ಸಿಬ್ಬಂದಿಗೆ ಉತ್ತಮ ಕೆಲಸದ ವಾತಾವರಣ ನಿರ್ಮಿಸಿ ಕೊಡಲಾಗುತ್ತದೆ. ಅವರ ಕ್ಷೇಮಾಭಿವೃದ್ಧಿಗೆ ಸಹ ಒತ್ತು ಕೊಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ