ತಾಳ್ಮೆ ಪರೀಕ್ಷಿಸಬೇಡಿ: ಬಿಜೆಪಿ ನಾಯಕನಿಗೆ ಸ್ಪೀಕರ್‌ ಎಚ್ಚರಿಕೆ!

By Web DeskFirst Published Dec 20, 2018, 12:03 PM IST
Highlights

‘ಸದನ ನಡೆಸೋದು ಹೇಗೆ ಎಂಬುದು ನನಗೆ ಗೊತ್ತು. ನನ್ನನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ..!’- ರಮೇಶ್ ಕುಮಾರ್ ಎಚ್ಚರಿಕೆ.

‘ಸದನ ನಡೆಸೋದು ಹೇಗೆ ಎಂಬುದು ನನಗೆ ಗೊತ್ತು. ನನ್ನನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ..!’

ಇದು ಬಿಜೆಪಿ ಸದಸ್ಯ ರೇಣುಕಾಚಾರ್ಯಗೆ ಸ್ಪೀಕರ್‌ ರಮೇಶ್‌ಕುಮಾರ್‌ ನೀಡಿದ ಖಡಕ್‌ ಎಚ್ಚರಿಕೆ

ಬರದ ಕುರಿತು ಚರ್ಚೆ ನಡೆಯುತ್ತಿದ್ದಾಗ ರೇಣುಕಾಚಾರ್ಯ ಎದ್ದು ನಿಂತು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಲು ಆರಂಭಿಸಿದರು. ಅದಕ್ಕೆ ಸ್ಪೀಕರ್‌, ನೀವು ಬರೀ ಸಚಿವರು ಹೇಳಿದ ಉತ್ತರಕ್ಕೆ ಸ್ಪಷ್ಟನೆ ಕೇಳುವುದಿದ್ದರೆ ಮಾತ್ರ ಕೇಳಿ. ಅದು ಬಿಟ್ಟು ಭಾಷಣ ಮಾಡಬೇಡಿ ಎಂದು ಎರಡ್ಮೂರು ಬಾರಿ ಹೇಳಿದರು. ಆದರೂ ರೇಣುಕಾಚಾರ್ಯ ಮಾತ್ರ ತಮ್ಮ ಮಾತನ್ನು ಮುಂದುವರಿಸಿದರು.

ಇದರಿಂದ ಗರಂ ಆದ ಸ್ಪೀಕರ್‌ ರಮೇಶಕುಮಾರ್‌, ಈ ಸದನದಲ್ಲಿ ಎಲ್ಲ ಸದಸ್ಯರು ಸಮಾನರು. ಸಂದೇಹಗಳಿದ್ದರೆ ಸ್ಪಷ್ಟನೆ ಕೇಳಿ ಎಂದರೆ ಭಾಷಣ ಮಾಡುತ್ತೀರಾ? ಈ ಸದನವನ್ನು ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ಪ್ರಯತ್ನವನ್ನು ಮಾಡಬೇಡಿ. ನನ್ನ ತಾಳ್ಮೆ ಪರೀಕ್ಷಿಸಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಬಳಿಕ ರೇಣುಕಾಚಾರ್ಯ, ನನಗೆ ಅನುಭವ ಕಡಿಮೆ. ನೀವು ಮಾರ್ಗದರ್ಶನ ಮಾಡಿ. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡಿ. ಮುಜುಗರ ಮಾಡಬೇಡಿ ಎಂದು ಕೇಳಿಕೊಂಡರು.

click me!