ಉತ್ತಮ ಜನಪ್ರತಿನಿಧಿಗಳನ್ನು ರೂಪಿಸಲು ರಾಜಕೀಯ ಕಾಲೇಜು ಆರಂಭಿಸುವ ಚಿಂತನೆ ಇದ ಹೊರಟ್ಟಿ

Kannadaprabha News   | Kannada Prabha
Published : Apr 22, 2026, 10:04 AM IST
 Speaker Basavaraj horatti Proposal to establish Political College for future leaders

ಸಾರಾಂಶ

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜಕೀಯಕ್ಕೆ ಬರುವ ಹೊಸಬರಿಗೆ ತರಬೇತಿ ನೀಡಲು ರಾಜಕೀಯ ಕಾಲೇಜು ಆರಂಭಿಸುವ ಚಿಂತನೆ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಏ.22): ರಾಜಕೀಯಕ್ಕೆ ಬರುವ ಹೊಸಬರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಉದ್ದೇಶದೊಂದಿಗೆ ರಾಜಕೀಯ ಕಾಲೇಜು ಆರಂಭಿಸುವ ಚಿಂತನೆಯಿದೆ. ಅದರ ಮೂಲಕ ನಾಡಿಗೆ ಜನರ ಕಷ್ಟಗಳನ್ನರಿತು ಕೆಲಸ ಮಾಡುವಂಥ ಉತ್ತಮ ಜನಪ್ರನಿಧಿಗಳನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ, ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಬಿ. ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ನಿರಂತರವಾಗಿ ಶ್ರಮಿಸಿದರು. ಅಂಥ ಮಹಾನ್‌ ಆಡಳಿತಗಾರರ ಕುರಿತು ಈಗಿನ ಯುವ ಪೀಳಿಗೆಗೆ ತಿಳಿಸಬೇಕಿದೆ. ಅಲ್ಲದೆ, ಬಿ.ಬಸವಲಿಂಗಪ್ಪ ಮಾದರಿಯಲ್ಲಿ ಜನಪ್ರತಿನಿಧಿಗಳನ್ನು ಸಿದ್ಧಪಡಿಸುವ ಉದ್ದೇಶದೊಂದಿಗೆ ರಾಜಕೀಯ ಕಾಲೇಜು ಆರಂಭಿಸುವ ಚಿಂತನೆಯಿದೆ. ಅದರ ಮೂಲಕ ರಾಜಕೀಯಕ್ಕೆ ಬರುವ ಹೊಸಬರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ, ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಜನಪ್ರತಿನಿಧಿಗಳನ್ನು ರೂಪಿಸಲಾಗುವುದು ಎಂದರು.

ಹೋರಾಟದ ಹಾದಿಯೇ ತಿಳಿದಿಲ್ಲ:

ಈಗ ಶಾಸನ ಸಭೆಗೆ ಬರುವ ಜನಪ್ರತಿನಿಧಿಗಳಿಗೆ ಬಸವಲಿಂಗಪ್ಪ ಅವರ ವ್ಯಕ್ತಿತ್ವ, ಹೋರಾಟ ಹಾದಿಯೇ ತಿಳಿದಿಲ್ಲ. ಅನೇಕರನ್ನು ಬಸವಲಿಂಗಪ್ಪ ಅವರ ಬಗ್ಗೆ ಪ್ರಶ್ನಿಸಿದರೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಾರೆ. ಅಂಥವರಿಗೆಲ್ಲ ಮೊದಲು ಗ್ರಂಥಾಲಯಗಳಿಗೆ ತೆರಳಿ ಬಸವಲಿಂಗಪ್ಪ ಅವರ ಬಗ್ಗೆ ತಿಳಿದುಕೊಳ್ಳುವಂತೆ ಹೇಳುತ್ತೇನೆ. ಬಸವಲಿಂಗಪ್ಪ ಅವರು ತಳ ಸಮುದಾಯದ ಏಳಿಗೆಗೆ ಸಾಕಷ್ಟು ಶ್ರಮಿಸಿದರು. ಅವರ ಸಾಧನೆಯನ್ನು ನಾವೆಲ್ಲ ಸ್ಮರಿಸುವ ಮತ್ತು ಅದನ್ನು ಪಾಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯದ ಬಗೆಗಿನ ಬೂಸಾ ಹೇಳಿಕೆಯಿಂದ ಬೂಸಾ ಹೋರಾಟ ಶುರುವಾಯಿತು. ಅದು ಆರಂಭವಾಗದಿದ್ದರೆ ಸಾಹಿತ್ಯದ ಒಳ-ಹೊರಗಿನ ಚರ್ಚೆಗಳೇ ನಡೆಯುತ್ತಿರಲಿಲ್ಲ. ಅದರಿಂದಲೇ ಸಾಹಿತ್ಯದಲ್ಲೂ ಸಾಕಷ್ಟು ಬದಲಾವಣೆಗಳಾದವು. ಬಸವಲಿಂಗಪ್ಪ ಅವರು ಮಲ ಹೊರುವ ಪದ್ಧತಿ ರದ್ದು ಮಾಡಿ, ದಲಿತರಿಗೆ ಭೂಮಿ ಹಕ್ಕು ನೀಡಲು ಪಿಟಿಸಿಎಲ್‌ ಕಾಯ್ದೆ ಜಾರಿಗೆ ತಂದರು. ಅವರು ತಳ ಹಂತದ ಜನರ ಹಕ್ಕಿಗಾಗಿ ತಮ್ಮ ಜೀವನವಿಡೀ ಹೋರಾಟ ನಡೆಸಿದರು ಎಂದು ತಿಳಿಸಿದರು.

ವಿಶೇಷ ಗೌರವ ಸಲ್ಲಿಸಬೇಕು:

ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಬಿ.ಬಸವಲಿಂಗಪ್ಪ ಅವರು ಈ ರಾಜ್ಯ ಕಂಡ ನೇರ-ನಿಷ್ಠುರ, ಪ್ರಾಮಾಣಿಕ ರಾಜಕಾರಣಿ. ಸದಾ ಸಾಮಾಜಿಕ ಪರಿವರ್ತನೆ ಬಯಸಿದ್ದ ಅವರು, ಒಬ್ಬ ಶಾಸಕ ಮತ್ತು ಮಂತ್ರಿ ಹೇಗಿರಬೇಕೆಂದು ತೋರಿಸಿದ್ದರು. ಮಲಹೊರುವ ಪದ್ಧತಿ ರದ್ದು ಮಾಡಿ, ಭೂಸುಧಾರಣಾ ಕಾಯ್ದೆ, ಬೂಸಾ ಚಳವಳಿ ಅವರ ಕಾಲದಲ್ಲಿ ಸಮಾಜದ ಮೇಲೆ ಪರಿಣಾಮ ಬೀರಿದ ಹೋರಾಟಗಳು. ಬಿ.ಬಸವಲಿಂಗಪ್ಪ ಅವರ ಕುರಿತ ಕಾರ್ಯಕ್ರಮ ಮುಂದಿನ ವರ್ಷ ಧಾರವಾಡದಲ್ಲಿಯೇ ಬೃಹತ್‌ ಸಮಾವೇಶದೊಂದಿಗೆ ನಡೆಯಬೇಕು. ಆಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕು ಎಂದು ಆಶಿಸಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌, ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌, ವಿಧಾನಪರಿಷತ್‌ ಸದಸ್ಯರಾದ ಎಂ.ಆರ್‌. ಸೀತಾರಾಂ, ಸುಧಾಮದಾಸ್‌, ಎಫ್.ಎಚ್.ಜಕ್ಕಪ್ಪನವರ್, ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್‌. ಹನುಮಂತಯ್ಯ ಇತರರಿದ್ದರು.

ನನ್ನ ಮಾತಿಗೆ ಬೆಲೆಯಿಲ್ಲ: ರಮೇಶ್‌ ಕುಮಾರ್‌

ನಾನು ಚಲಾವಣೆಯಿಲ್ಲದ ನಾಣ್ಯದಂತಾಗಿದ್ದೇನೆ. ಮಾತನಾಡುವ ಪ್ರತಿ ಅಕ್ಷರವನ್ನೂ ಭಯದಿಂದ ನಿಯಂತ್ರಿಸಿ ಮಾತನಾಡಬೇಕಿದೆ. ಹೀಗಾಗಿ ನಾನು ಮಾತನಾಡುವುದನ್ನೇ ನಿಲ್ಲಿಸಿದ್ದೇನೆ. ನಾನೀಗ ವಿಶ್ರಾಂತದಲ್ಲಿದ್ದೇನೆ ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ಅದಕ್ಕೆ ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿದ ಎಚ್‌.ಕೆ. ಪಾಟೀಲ್‌, ರಮೇಶ್‌ ಕುಮಾರ್‌ ಅಂತಹ ನಾಯಕರು ನೋವಾಗಿದ್ದರೂ ಮೌನ ಮುರಿದರೆ ಒಳ್ಳೆಯದು. ಸ್ಥಾನಮಾನದಲ್ಲಿರುವವರನ್ನು ಎಚ್ಚರಿಸಲು ವಿಶ್ರಾಂತದಲ್ಲಿರುವ ತಾವು ಮಾತನಾಡುತ್ತಾ ಎಚ್ಚರಿಸುತ್ತಿರಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟ ಪ್ರಕರಣ: 7 ಮಂದಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
ರಾಜ್ಯದಲ್ಲಿ ವರುಣನ ಅಬ್ಬರ: ಬಾಳೆ ಬೆಳೆ ನಾಶ, ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತ