ವಿಧಾನ ಪರಿಷತ್‌ನಲ್ಲಿ ಶಿಸ್ತು ಮತ್ತು ಜವಾಬ್ದಾರಿ ಕೊರತೆಯಿಂದ ಬೇಸತ್ತಿದ್ದ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಹಿರಿಯರ ಒತ್ತಾಯದ ಮೇರೆಗೆ ನಿರ್ಧಾರವನ್ನು ಹಿಂಪಡೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರು ನೆಮ್ಮದಿ ಕಂಡುಕೊಂಡಿದ್ದಾರೆ.
ಸುಬ್ರಹ್ಮಣ್ಯ (ಏ.1): ಸುಮಾರು ೪೫ ವರ್ಷಗಳಿಂದ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಆವತ್ತಿಗೆ ಮತ್ತು ಇವತ್ತಿಗೆ ಹೋಲಿಸಿದರೆ ಆಧುನಿಕ ಸಮಯದಲ್ಲಿ ಸದಸ್ಯರಲ್ಲಿ ಶಿಸ್ತಿನ ಕೊರತೆಯನ್ನು ಕಾಣುತ್ತಿದ್ದೇನೆ. ರಾಜಕೀಯ ಹೊಲಸಿನಿಂದ ಕೂಡಿದೆ, ಜವಾಬ್ದಾರಿ ಮತ್ತು ಶಿಸ್ತು ಇಲ್ಲ. ಸದನಗಳು ಯಾವ ರೀತಿ ಶಿಸ್ತಿನಿಂದ ನಡೆಯಬೇಕೋ ಆ ರೀತಿ ನಡೆಯುತ್ತಿಲ್ಲ. ಇದರಿಂದಾಗಿ ಮನಸಿಗೆ ತುಂಬಾ ನೋವಾಗಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೀವನದ ಹೆಚ್ಚು ಕಾಲ ವಿಧಾನ ಪರಿಷತ್‌ನಲ್ಲಿ ಕಾಲ ಕಳೆದಿದ್ದೇನೆ. ಈ ಹಿಂದೆ ಹೀಗೆ ಇರಲಿಲ್ಲ. ಆದುದರಿಂದ ಬೇಸರಗೊಂಡು ಸಭಾಪತಿ ಸ್ಥಾನ ಸೇರಿದಂತೆ ಸದಸ್ಯತನಕ್ಕೆ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದೆ. ರಾಜ್ಯಪಾಲರು ಸೇರಿದಂತೆ ಅನೇಕ ಹಿರಿಯರು ನನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಹೇಳಿದ ಕಾರಣ ಅವರ ಮಾತಿಗೆ ಬೆಲೆ ನೀಡಿ ರಾಜೀನಾಮೆ ನಿರ್ಧಾರವನ್ನು ಹಿಂಪಡೆದಿದ್ದೇನೆ ಎಂದರು.
ಇದನ್ನೂ ಓದಿ: ಸಚಿವರ ಗೈರಿಗೆ ಸಭಾಪತಿ ಹೊರಟ್ಟಿ ಆಕ್ರೋಶ
ರಾಜಕೀಯ ಪರಿಸ್ಥಿತಿ ಸುಧಾರಣೆಯಾಗಬೇಕು. ಪ್ರಾಮಾಣಿಕವಾಗಿ ಮತದಾನ ಮಾಡಿ ಉತ್ತಮ ನಾಯಕನ್ನು ಆಯ್ಕೆ ಮಾಡುವತ್ತ ಸ್ವತಃ ಜನರು ಮನಸು ಮಾಡಬೇಕಾಗಿದೆ. ಇದರಿಂದ ಪ್ರಜಾಪ್ರಭುತ್ವ ಬೆಳೆಯಬೇಕು. ಮುಂದೆ ರಾಜ್ಯ ಪ್ರಗತಿಯಾಗಬೇಕು. ರಾಜ್ಯದ ಅಭಿವೃದ್ಧಿಗೆ ಬೇಕಾದ ಉತ್ತಮ ಚರ್ಚೆಗಳು ವಿಧಾನ ಪರಿಷತ್‌ನಲ್ಲಿ ನಡೆಯಬೇಕೆನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಮೂರು ದಿನ ಆಯಿತು. ಮನಸಿಗೆ ನೆಮ್ಮದಿ ಮತ್ತು ಶಾಂತಿ ಇಲ್ಲಿ ಸಿಕ್ಕಿದೆ. ಇಲ್ಲಿನ ಪರಿಸರ, ಪವಿತ್ರ ಸನ್ನಿಧಾನ ಮತ್ತು ದೇವಳದಲ್ಲಿ ಎರಡು ದಿನಗಳಿಂದ ಇರುವುದರಿಂದ ಒಂದು ರೀತಿಯ ವಿಶೇಷ ಮಾನಸಿಕ ಶಾಂತಿ ದೊರಕಿದೆ. ಮುಂದೆ ಆಗಾಗ ಕ್ಷೇತ್ರಕ್ಕೆ ಬಂದು ಒಂದೆರಡು ದಿನ ಇಲ್ಲಿ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಸಿ.ಟಿ. ರವಿ, ಹೆಬ್ಬಾಳ್ಕರ್ ಕೇಸ್ ಪರಿಣಾಮ: ಸಭಾಪತಿ ಹೊರಟ್ಟಿ ಬದಲಿಗೆ ಕಾಂಗ್ರೆಸ್ ಪ್ಲ್ಯಾನ್!
ಹಿಂದೆ ಶಿಕ್ಷಣ ಸಚಿವನಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ. ಇದೀಗ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಈಗ ಯಾರನ್ನು ಕೂಡ ಫೈಲ್ ಮಾಡುವ ವ್ಯವಸ್ಥೆ ಇಲ್ಲ. ಪರೀಕ್ಷೆಯಲ್ಲಿ ಪಾಸಾಗಲಿ ಅಥವಾ ನಾಪಾಸಗಲಿ ಅಂಥವರನ್ನು ಪಾಸು ಮಾಡುವ ವ್ಯವಸ್ಥೆ ಬಂದಿದೆ. ಫೈಲ್ ಆದವರಿಗೆ ಮತ್ತೆ ಪರೀಕ್ಷೆ ನಡೆಸಬೇಕು. ಆಗ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶಿಸ್ತಿನಿಂದ ಅಧ್ಯಾಯನ ಮಾಡಿ ಜ್ಞಾನ ಸಂಪಾದಿಸುತ್ತಾರೆ ಎಂದರು.
ಹೊರಟ್ಟಿ, ಶುಕ್ರವಾರ ಸಂಜೆ ಕುಕ್ಕೆಗೆ ಆಗಮಿಸಿದ್ದು, ಶನಿವಾರ ಮತ್ತು ಭಾನುವಾರ ಸರ್ಪಸಂಸ್ಕಾರ ಪೂಜೆ ಸಲ್ಲಿಸಿ ಭಾನುವಾರ ಬೆಂಗಳೂರಿಗೆ ತೆರಳಿದ್ದಾರೆ.