ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

By Web DeskFirst Published Feb 1, 2019, 9:52 AM IST
Highlights

ರೈತ ಸಾಲಮನ್ನಾ ಮಾಡಿದ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಮಾರ್ಚ್ ವೇಳೆಗೆ ಪೀಕಾರ್ಡ್ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ತಿಳಿಸಿದೆ.

ಕೊಪ್ಪಳ/ಕೊಟ್ಟೂರು :  ಪಿಕಾರ್ಡ್‌ ಬ್ಯಾಂಕಿನಲ್ಲಿ ರೈತರು ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಕುರಿತು ರಾಜ್ಯ ಸರ್ಕಾರದಿಂದ ಮಾರ್ಚ್ ವೇಳೆಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ.

ಕೊಪ್ಪಳ ತಾಲೂಕು ಹಾಗೂ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಗುರುವಾರ ಬರ ಪರಿಹಾರ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾ​ಗಲೇ ಪಿಕಾರ್ಡ್‌ ಬ್ಯಾಂಕಿನ ಸಾಲದ ಮೇಲಿನ ಬಡ್ಡಿ ಮನ್ನಾ ವಿಚಾರದ ಕಡತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ ಇದೆ. ಮುಖ್ಯಮಂತ್ರಿಯವರು ಪರಿಶೀಲನೆ ನಡೆಸುತ್ತಿದ್ದು ಅಂತಿಮ ಘೋಷಣೆ ಮಾಡುವುದಷ್ಟೇ ಬಾಕಿ ಇದೆ ಎಂದರು.

250 ದಿನ ಖಾತ್ರಿ ಕೆಲಸ :  ಉದ್ಯೋಗ ಖಾತ್ರಿ ಯೋಜನೆಯಡಿ ಹಾಲಿ ಇರುವ ಮಾನವ ದಿನಗಳ ಸಂಖ್ಯೆಯನ್ನು 150ರಿಂದ 250ಕ್ಕೂ ಹೆಚ್ಚು ದಿನಗಳಿಗೆ ವಿಸ್ತರಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಶುಕ್ರವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಕಾಶೆಂಪೂರ ಇದೇ ವೇಳೆ ಘೋಷಿಸಿದರು.

ರಾಜ್ಯದಲ್ಲಿ ತೀವ್ರ ಬರ ಕಾಡುತ್ತಿರುವುದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಹೆಚ್ಚುವರಿ ಕೆಲಸ ಕೊಡುವ ಅಗತ್ಯವಿದೆ. ಆದರೆ, ರಾಜ್ಯಾದ್ಯಂತ ಬರಪರಿಹಾರ ಕಾಮಗಾರಿ ಕೈಗೊಂಡಿದ್ದರೂ ತುರ್ತಾಗಿ ಕೇಂದ್ರ ಸರ್ಕಾರ ಅನುದಾನ ಬಿಡು​ಗಡೆ ಮಾಡು​ತ್ತಿಲ್ಲ. ಜತೆಗೆ, ನರೇಗಾ ಯೋಜನೆಯಡಿ ಸುಮಾರು .850 ಕೋಟಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಕಾರ್ಮಿಕರ ಕೂಲಿ ಬಾಕಿ ಉಳಿದಿದೆ ಎಂದು ಹೇಳಿದರು.

ಬಾಕಿ .850 ಕೋಟಿ ಬಿಡುಗಡೆ ಮಾಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಈ ಸಮಸ್ಯೆ ನೀಗಿಸಲು ತುರ್ತಾಗಿ ರಾಜ್ಯ ಸರ್ಕಾರದಿಂದಲೇ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಪಾವತಿಗೆ ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಆದರೆ, ಕೇಂದ್ರ ಸರ್ಕಾರದ ಈ ಯೋಜನೆಯಡಿ ನೇರವಾಗಿ ಫಲಾನುಭವಿಗಳ ಖಾತೆಗೇ ಹಣ ವರ್ಗಾವಣೆ ಮಾಡುವುದರಿಂದ ರಾಜ್ಯ ಸರ್ಕಾರವೂ ಹಣ ಪಾವತಿ ಮಾಡಿದರೆ ಗೊಂದಲವಾಗುತ್ತದೆ. 

ಈ ತಾಂತ್ರಿಕ ಸಮಸ್ಯೆ ಪರಿಹರಿಸಲು ಗಂಭೀರ ಚಿಂತನೆ ನಡೆಯುತ್ತಿದೆ. ಜತೆಗೆ, ಮಾನವ ದಿನಗಳನ್ನು ಹೆಚ್ಚಿಸುವುದರಿಂದ ಆ ಹೆಚ್ಚುವರಿ ಮಾನವ ದಿನಗಳ ಕೂಲಿಯನ್ನು ರಾಜ್ಯದಿಂದಲೇ ಭರಿಸಬೇಕಾಗುತ್ತದೆ. ಈ ಸಂಬಂಧ ಯಾವುದೇ ಸಮಸ್ಯೆ ಎದುರಾಗದಂತೆ ಕೂಡಲೇ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಇದೇ ವೇಳೆ ಕಾಶೆಂಪೂರ ತಿಳಿಸಿದರು.

click me!