ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ : ಕುತೂಹಲದಲ್ಲಿ ಜೆಡಿಎಸ್ ನಡೆ

Published : Feb 01, 2019, 09:29 AM ISTUpdated : Feb 01, 2019, 10:33 AM IST
ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ : ಕುತೂಹಲದಲ್ಲಿ ಜೆಡಿಎಸ್ ನಡೆ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಲತಾ ಅವರನ್ನು ಕಣಕ್ಕಿಳಿಸುವ ಪ್ಲಾನ್ ಮಾಡಲಾಗುತ್ತಿದೆ. 

ಬೆಂಗಳೂರು :  ಜೆಡಿಎಸ್‌ ಭದ್ರಕೋಟೆ ಎನ್ನಿಸಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ನಟ, ರಾಜಕಾರಣಿ ಅಂಬರೀಷ್‌ ಅವರ ಪತ್ನಿ ಸುಮಲತಾ ಅಂಬರೀಷ್‌ ಅವರನ್ನು ಕಣಕ್ಕಿಳಿಸಬೇಕೆಂದು ಮಂಡ್ಯ ಸ್ಥಳೀಯ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. 

ಸ್ಪರ್ಧೆಗೆ ಸುಮಲತಾ ಅವರು ಕೂಡ ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದ್ದು, ಜೆಡಿಎಸ್‌ ಈ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡುವುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಳೆ ಮೈಸೂರು ಭಾಗದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಮಂಡ್ಯ ಹಾಗೂ ಹಾಸನ ಕಾಂಗ್ರೆಸ್‌ ನಾಯಕರು ಎರಡು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ ಇದನ್ನು ಪಕ್ಷದ ಹೈಕಮಾಂಡ್‌ ಹಾಗೂ ಎಚ್‌.ಡಿ. ದೇವೇಗೌಡರೇ ನಿರ್ಣಯಿಸಬೇಕು ಎಂದು ಪಕ್ಷದ ರಾಜ್ಯ ವರಿಷ್ಠರು ಪ್ರತಿಕ್ರಿಯಿಸಿದರು.

ಮಂಡ್ಯ ಹಾಗೂ ಹಾಸನದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸಮ ಬಲದ ಪೈಪೋಟಿ ಇದೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಪ್ರಬಲ ನೆಲೆ ಇದ್ದು, ಕಾಂಗ್ರೆಸ್‌ನ ನೇರ ಸ್ಪರ್ಧಿ ಜೆಡಿಎಸ್‌. ಹೀಗಾಗಿ ಪಕ್ಷ ಉಳಿಯಲು ಎರಡು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ಬಳಿಯೇ ಇಟ್ಟುಕೊಳ್ಳಬೇಕು. ಒಂದು ವೇಳೆ ಮಂಡ್ಯ ಕ್ಷೇತ್ರವು ಕಾಂಗ್ರೆಸ್‌ ಪಾಲಿಗೆ ಬಂದರೆ ಸುಮಲತಾ ಅಂಬರೀಷ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ.

ಅಂಬರೀಷ್‌ ಕುಟುಂಬಕ್ಕೂ ಮಂಡ್ಯ ಜನತೆಗೂ ವಿಶೇಷ ಅನುಬಂಧವಿದೆ. ಅಂಬರೀಷ್‌ ಕುಟುಂಬದ ಬಗ್ಗೆ ಜನರಿಗೆ ಇರುವ ಒಲವಿನಿಂದಾಗಿ ಸುಮಲತಾ ಅವರು ಕಾಂಗ್ರೆಸ್‌ ಪರವಾಗಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅನಾಯಾಸವಾಗಿ ಗೆಲ್ಲುತ್ತಾರೆ. ಅಲ್ಲದೆ ಸುಮಲತಾ ಅವರೂ ಕಾಂಗ್ರೆಸ್‌ ಟಿಕೆಟ್‌ ದೊರೆತರೆ ಸ್ಪರ್ಧಿಸುವ ಸೂಚನೆ ಇದೆ. ಹೀಗಾಗಿ ಎರಡೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡದೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುಮಲತಾ ಅವರನ್ನು ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದರು.

ಎರಡೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಡುವುದು ಬೇಡ. ಒಂದು ವೇಳೆ ಹಾಸನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮಂಡ್ಯ ಹಾಗೂ ಮೈಸೂರನ್ನು ಕಾಂಗ್ರೆಸ್‌ ತನ್ನ ಬಳಿಯೇ ಉಳಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!