ಸಿಎಂ ಕುಮಾರಸ್ವಾಮಿ ಅವರಿಂದ ಮತ್ತೊಂದು ಮಹತ್ವದ ಯೋಜನೆ

By Web DeskFirst Published Nov 10, 2018, 8:07 AM IST
Highlights

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇದೀಗ ರಾಜ್ಯದಲ್ಲಿ ಮತ್ತೊಂದು ಮಹತ್ವದ ಯೋಜನೆಯೊಂದನ್ನು ಜಾರಿ ಮಾಡುತ್ತಿದ್ದಾರೆ. ಇದೇ ನವೆಂಬರ್ 22 ರಂದು ಬಡವರ ಬಂಧು ಯೋಜನೆಗೆ ಚಾಲನೆ ನೀಡಲಿದ್ದಾರೆ. 

ಬೆಂಗಳೂರು :  ಪಟ್ಟಣ ಪ್ರದೇಶಗಳ ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ಶ್ಯೂರಿಟಿ ಇಲ್ಲದೆ ಕನಿಷ್ಠ ಎರಡರಿಂದ ಹತ್ತು ಸಾವಿರ ರು.ವರೆಗೆ ಆರ್ಥಿಕ ನೆರವು ನೀಡುವ ‘ಬಡವರ ಬಂಧು’ ಯೋಜನೆಗೆ ನ.22ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ದುಬಾರಿ ಬಡ್ಡಿ ದರದಲ್ಲಿ (ಮೀಟರ್‌ ಬಡ್ಡಿ) ಸಾಲ ಪಡೆಯುವುದನ್ನು ತಪ್ಪಿಸುವುದು ಹಾಗೂ ಅವರಿಂದ ಎದುರಿಸುತ್ತಿರುವ ಎಲ್ಲ ರೀತಿಯ ಕಿರುಕುಳ ನಿವಾರಿಸುವ ಜೊತೆಗೆ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ 50 ಸಾವಿರ ಜನರಿಗೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರು ನಗರದಲ್ಲಿ ಐದು ಸಾವಿರ, ಇತರೆ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಸಾವಿರ ಹಾಗೂ ಉಳಿದ ಜಿಲ್ಲೆಗಳಲ್ಲಿ ತಲಾ ಒಂದು ಸಾವಿರ ಫಲಾನುಭವಿಗಳಿಗೆ ಸಾಲ ವಿತರಿಸಲಾಗುವುದು. ಗರಿಷ್ಠ 10 ಸಾವಿರ ರು.ವರೆಗೆ ನೀಡುವ ಸಾಲವನ್ನು ಪ್ರತಿ ದಿನ ಕನಿಷ್ಠ 100 ರು.ನಂತೆ ಮರು ಪಾವತಿಸಬಹುದು. ತನ್ನ ವ್ಯವಹಾರದಿಂದ ಹೆಚ್ಚು ಲಾಭ ಗಳಿಸಿದರೆ ಹೆಚ್ಚಿನ ಮೊತ್ತವನ್ನು ಸಹ ಕಟ್ಟಬಹುದಾಗಿದೆ. ಇದಕ್ಕಾಗಿ ಜಿಲ್ಲೆಗಳಲ್ಲಿ ಸಂಚಾರಿ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ. ನೋಡಲ್‌ ಬ್ಯಾಂಕ್‌ಗಳು ಫಲಾನುಭವಿಗಳ ಪಟ್ಟಿಸಿದ್ಧಪಡಿಸಲಿವೆ ಎಂದು ವಿವರಿಸಿದರು.

ಈ ಯೋಜನೆಯಡಿ ನೀಡುವ ಮೊತ್ತಕ್ಕೆ ಶೇ.4ರಷ್ಟುಬಡ್ಡಿ ವಿಧಿಸಬೇಕೆಂಬ ಆರ್ಥಿಕ ಇಲಾಖೆ ಸಲಹೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಕಾರ ವ್ಯಕ್ತಪಡಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕೆಂಬ ಸೂಚನೆ ನೀಡಿದರು. ಅದಕ್ಕೆ ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ. ಹೀಗಾಗಿ ನ.22ರಂದು ಬೆಂಗಳೂರಿನ ಎಪಿಎಂಸಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಸಾಲ ಪಡೆಯೋದು ಹೇಗೆ?

ಫಲಾನುಭವಿಗಳನ್ನು ಗುರುತಿಸಲು ಸಹಕಾರ ಬ್ಯಾಂಕುಗಳು ತಮ್ಮ ಸಿಬ್ಬಂದಿ ಅಥವಾ ಬ್ಯಾಂಕಿನ ಪ್ರತಿನಿಧಿಗಳನ್ನು ಬೀದಿ ವ್ಯಾಪಾರಿಗಳು ಹೆಚ್ಚಿಗೆ ಇರುವ ಎಪಿಎಂಸಿ ಮಾರುಕಟ್ಟೆ/ತರಕಾರಿ ಮಾರುಕಟ್ಟೆಅಥವಾ ಹಣ್ಣು ಮಾರುಕಟ್ಟೆಹಾಗೂ ನಿಗದಿತ ಪ್ರದೇಶಗಳಿಗೆ ಕಳುಹಿಸುತ್ತವೆ. ಅಲ್ಲಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಮತ್ತು ತಾವು ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೊ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿದ ಗುರುತಿನ ಚೀಟಿಯನ್ನು ನೀಡಿ ಸಾಲದ ಅರ್ಜಿ ನಮೂನೆ ಭರ್ತಿ ಮಾಡಬೇಕು. ಅದನ್ನು ನಿಗದಿತ ಬ್ಯಾಂಕು ಅಥವಾ ಬ್ಯಾಂಕಿನ ಮೊಬೈಲ್‌ ಘಟಕಕ್ಕೆ ಸಲ್ಲಿಸಬೇಕು.

ಮರು ಪಾವತಿ ಹೇಗೆ?

ಸಾಲದ ಮೊತ್ತವನ್ನು ಹಂತ ಹಂತವಾಗಿ ರೂಪೇ ಕ್ರೆಡಿಟ್‌ ಕಾರ್ಡ್‌ ಮೂಲಕ ವಿತರಿಸಲಾಗುವುದು. ಸಾಲದ ಮರು ಪಾವತಿ ಅವಧಿ ಮೂರು ತಿಂಗಳು ಇರುತ್ತದೆ. ಈ ಅವಧಿಯಲ್ಲಿ ಸಾಲದ ಮಿತಿಗೊಳಪಟ್ಟು ಎಷ್ಟುಬಾರಿಯಾದರೂ ಹಣವನ್ನು ಡ್ರಾ ಮಾಡಬಹುದು ಅಥವಾ ಜಮೆ ಮಾಡಬಹುದಾಗಿದೆ. ಪ್ರತಿ ದಿನ ಫಲಾನುಭವಿಗಳ ಅನುಕೂಲಕ್ಕೆ ತಕ್ಕಂತೆ ಪಿಗ್ಮಿ ಮೊತ್ತವನ್ನು ಮತ್ತು ಸಾಲದ ಮೊತ್ತವನ್ನು ಉಳಿತಾಯದ ಖಾತೆಗೆ ಅಥವಾ ಸಾಲದ ಖಾತೆಗೆ ಜಮೆ ಮಾಡಬಹುದಾಗಿದೆ.

ಯಾರಿಗೆ ಸಿಗುತ್ತೆ ಈ ಸಾಲ?

ಬಿಪಿಎಲ್‌ ಕಾರ್ಡ್‌ ಹೊಂದಿರುವ, ನಗರ ಪ್ರದೇಶದ ನೋಂದಾಯಿತ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು ಈ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ರಸ್ತೆ ಬದಿಯಲ್ಲಿ ತಳ್ಳು ಬಂಡಿ ಅಥವಾ ಮೋಟಾರ್‌ ವಾಹನದಲ್ಲಿ ಪಾನೀಯ, ತಿಂಡಿ, ಊಟ, ಸಿಹಿ ಪದಾರ್ಥ ಮುಂತಾದ ಹೋಟೆಲ್‌ ಸೇವೆಯನ್ನು ಒದಗಿಸುವ ವ್ಯಾಪಾರಿಗಳು, ರಸ್ತೆಗಳಲ್ಲಿ ಮನೆ ಮನೆಗೆ ತೆರಳಿ ತಳ್ಳು ಬಂಡಿ ಅಥವಾ ಮೋಟಾರು ವಾಹನದಲ್ಲಿ ತರಕಾರಿ, ಹೂ, ಹಣ್ಣು ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿವ್ಯಾಪಾರಿಗಳು, ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟ ಇತ್ಯಾದಿ ಕೆಲಸಗಳಲ್ಲಿ ತೊಡಗಿರುವ ಬೀದಿ ವ್ಯಾಪಾರಿಗಳು, ಆಟದ ಸಾಮಾನು, ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

click me!