ಟಿಪ್ಪು ಜಯಂತಿ ದಳ್ಳುರಿ! 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ

Published : Nov 10, 2018, 07:31 AM IST
ಟಿಪ್ಪು ಜಯಂತಿ ದಳ್ಳುರಿ! 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ

ಸಾರಾಂಶ

ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಬೆಂಗಳೂರು :  ರಾಜ್ಯದಲ್ಲಿ ‘ಟಿಪ್ಪು ಜಯಂತಿ ಆಚರಣೆ’ ವಿವಾದ ತಾರಕಕ್ಕೇರಿದೆ. ನ.10ರ ಶನಿವಾರದಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಶುಕ್ರವಾರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಅಹಿತಕರ ಘಟನೆ ನಡೆಯದಂತೆ ಈಗಾಗಲೇ ನಿಷೇಧಾಜ್ಞೆ ಜಾರಿಯಾಗಿರುವ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ಜರುಗಿವೆ. 

ನಿಷೇಧಾಜ್ಞೆ ಇರುವ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಸಾಲಿಗೆ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಸೇರ್ಪಡೆಯಾಗಿವೆ. ಕೊಡಗಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಶನಿವಾರದಂದು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಖಾಸಗಿ ಬಸ್‌ಗಳು, ಆಟೋಗಳು ಸಂಚಾರ ಸ್ಥಗಿತಗೊಳಿಸಲಿವೆ. ಆದರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ.

ಇದೆಲ್ಲದರ ನಡುವೆ, ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗೈರುಹಾಜರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ 2000 ಮಂದಿಗೆ ಆಹ್ವಾನ ನೀಡಲಾಗಿದೆ.

ಭಾರೀ ಪ್ರತಿರೋಧ: ಟಿಪ್ಪು ಜಯಂತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಿಷೇಧಾಜ್ಞೆಯ ನಡುವೆಯೂ ಚಿತ್ರದುರ್ಗದಲ್ಲಿ ಪ್ರತಿಭಟನೆಗೆ ಯತ್ನಿಸಿದ ಶಾಸಕ ತಿಪ್ಪಾರೆಡ್ಡಿ ಸೇರಿದಂತೆ 54 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಚಿಕ್ಕಮಗಳೂರಲ್ಲೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆಗೆ ಯತ್ನಿಸಿದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು. ರಾಯಚೂರು ನಗರದಲ್ಲೂ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಬೆಳಗಾವಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಪ್ರತ್ಯೇಕ ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಇನ್ನುಳಿದಂತೆ ಬಾಗಲಕೋಟೆ, ಕೊಪ್ಪಳ, ಹಾವೇರಿ, ಗದಗ, ಕಾರವಾರ, ಶಿವಮೊಗ್ಗ, ದಾವಣಗೆರೆ, ಉಡುಪಿ, ಮಡಿಕೇರಿ, ಮಂಗಳೂರು, ಉಡುಪಿ, ಬೀದರ್‌, ಯಾದಗಿರಿ, ಕಲಬುರಗಿ, ಹಾಸನ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿಕ್ಕಮಗಳೂರು, ಕೋಲಾರ ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದು ಮೈತ್ರಿ ಸರ್ಕಾರದ ನಿಲುವಿಗೆ ಖಂಡನೆ ವ್ಯಕ್ತವಾಗಿದೆ.

ದ.ಕ, ಶಿವಮೊಗ್ಗದಲ್ಲೂ ನಿಷೇಧಾಜ್ಞೆ: ಈ ಹಿಂದೆಯೇ ಮುಂಜಾಗ್ರತಾ ಕ್ರಮವಾಗಿ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ ಮತ್ತು ಹುಬ್ಬಳ್ಳಿ-ಧಾರವಾಡ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮದ್ದೂರು ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ಇದೀಗ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಸೆಕ್ಷನ್‌ 144 ನಿಷೇಧಾಜ್ಞೆ ಹೇರಲಾಗಿದೆ. ದ.ಕ. ಜಿಲ್ಲಾದ್ಯಂತ ನ.9ರಂದು ಸಂಜೆ 6 ಗಂಟೆಯಿಂದ ನ.11ರ ಮಧ್ಯರಾತ್ರಿ 12ರವರೆಗೆ, ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಇದೇವೇಳೆ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಮಂಡ್ಯವೂ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ನಿಷೇಧಾಜ್ಞೆ ನಡುವೆಯೇ ಟಿಪ್ಪು ಜಯಂತಿ ಆಚರಿಸಲ್ಪಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇಂದು ಮಡಿಕೇರಿ ಬಂದ್‌:  ವ್ಯಾಪಕ ವಿರೋಧದ ನಡುವೆಯೂ ಶನಿವಾರ ಕೊಡಗಿನ ಜಿಲ್ಲಾಕೇಂದ್ರ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುವುದು ಬಹುತೇಕ ಖಚಿತವಾಗಿದೆ. ಜಿಲ್ಲಾಡಳಿತದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಭದ್ರತೆಗಾಗಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರು ಬೀಡುಬಿಟ್ಟಿದ್ದಾರೆ.

ಈ ನಡುವೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಶನಿವಾರ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಬಸ್‌, ಆಟೋರಿಕ್ಷಾ ಸಂಚಾರಗಳು ಸ್ಥಗಿತಗೊಳ್ಳಲಿವೆ ಎಂದು ಕೊಡಗು ಜಿಲ್ಲಾ ಬಸ್‌ ಮಾಲೀಕರ ಸಂಘ, ಕೊಡಗು ಜಿಲ್ಲಾ ಆಟೋ ಮಾಲೀಕರ, ಚಾಲಕರ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. 

ಸ್ವಯಂಪ್ರೇರಿತ ಬಂದ್‌ ನಡೆಯುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ ತಟಸ್ಥ ನಿಲುವು ವ್ಯಕ್ತಪಡಿಸಿದೆ. ಇದೇವೇಳೆ ಪರಿಸ್ಥಿತಿಯನ್ನು ನೋಡಿಕೊಂಡು ಸರ್ಕಾರಿ ಬಸ್‌ಗಳ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋ ಮೂಲಗಳು ತಿಳಿಸಿವೆ.

ಇಂದು ಶಾಲಾಗಳಿಗೆ ರಜೆ ಇಲ್ಲ: ಕೊಡಗಿನಲ್ಲಿ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿಲ್ಲ. ಆದರೆ, ಬಸ್‌ ಸೌಲಭ್ಯ ಹಾಗೂ ಅಂದಿನ ಪರಿಸ್ಥಿತಿ ತಿಳಿದುಕೊಂಡು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಟಿಪ್ಪು ಜಯಂತಿ ಸಂದರ್ಭದಲ್ಲಿ ತಾವು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೊದಲೇ ತಿಳಿಸಿದ್ದರು. ಬೇರೆ ಕಾರ್ಯಕ್ರಮದ ನಿಮಿತ್ತ ತಮ್ಮ ಅನುಪಸ್ಥಿತಿಯನ್ನು ವಿವರಿಸಿದ್ದರು. ಅವರು ಟಿಪ್ಪು ಜಯಂತಿಗೆ ಗೈರಾಗುತ್ತಿರುವುದಕ್ಕೆ ಅಧಿಕಾರ ಹೋಗುತ್ತೆ ಎಂಬ ಭಯ ಕಾರಣ ಎನ್ನುವುದು ಸುಳ್ಳು. ಈಗಷ್ಟೇ ಚುನಾವಣೆ ಗೆದ್ದಿದ್ದೇವೆ. ಹೀಗಾಗಿ, ಭಯ ಎಲ್ಲಿಂದ?

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ