
ಬೆಂಗಳೂರು (ಅ.3): ತನ್ನ ತಂದೆಯಿಂದ 90 ಲಕ್ಷ ರು ಹಣ ವಸೂಲಿಗೆ ಸ್ನೇಹಿತರ ಜತೆ ಸೇರಿ ಉದ್ಯಮಿ ಪುತ್ರನೊಬ್ಬ ರೂಪಿಸಿದ್ದ ಸುಳ್ಳು ಅಪಹರಣ ನಾಟಕವನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಯಲುಗೊಳಿಸಿದ್ದಾರೆ.
ಆರ್.ಆರ್.ನಗರ(RR Nagar)ದ ನಿವಾಸಿ ಉದ್ಯಮಿ ಮನೋಹರ್ ಪಾಟೀಲ್ ಪುತ್ರ ಮನೀಷ್(Manohar patil's son manish) ನಾಟಕದ ಸೂತ್ರಧಾರಿ ಆಗಿದ್ದು, ಈಗ ಆತನ ಸ್ನೇಹಿತರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇತ್ತೀಚಿಗೆ ಕೆಲಸದ ನಿಮಿತ್ತ ಗದಗಕ್ಕೆ ತೆರಳಿದ್ದ ಮನೀಷ್ ನಿಗೂಢವಾಗಿ ನಾಪತ್ತೆಯಾಗಿದ್ದ. ಆಗ ಆತನ ತಂದೆಗೆ ಪುತ್ರನ ಅಪಹರಿಸಿ ಹಾಸನದಲ್ಲಿ ಒತ್ತೆಯಿಟ್ಟಿರುವುದಾಗಿ ಅಪರಿಚಿತ ಕರೆ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಹಾಸನ ಜಿಲ್ಲೆ ಬೇಲೂರ ತಾಲೂಕಿನಲ್ಲಿದ್ದ ಮನೀಷ್‌ನನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದರು. ತರುವಾಯ ಆರೋಪಿಗಳ ವಿಚಾರಣೆ ವೇಳೆ ಅಪಹರಣದ ನಾಟಕ ಬಯಲಾಗಿದೆ.
ಆರ್.ಆರ್.ನಗರದ ಬಳಿ ತಮ್ಮ ಕುಟುಂಬದ ಜತೆ ಮನೋಹರ್ ಪಾಟೀಲ್ ನೆಲೆಸಿದ್ದಾರೆ. ಸೆ.28 ರಂದು ಕೆಲಸದ ನಿಮಿತ್ತ ಗದಗ ಜಿಲ್ಲೆಗೆ ತೆರಳುತ್ತಿರುವುದಾಗಿ ತಂದೆಗೆ ಹೇಳಿ ಮನೀಷ್ ಹೋಗಿದ್ದರು. ಆದರೆ ಮರುದಿನ ಬರಬೇಕಿದ್ದ ಪುತ್ರ ಮನೆಗೆ ಬಾರದೆ ಅವರು ಆತಂಕಕ್ಕೀಡಾಗಿದ್ದರು. ಆದರೆ ಅವರಿಗೆ ವಾಟ್ಸಪ್ ಕರೆ ಮಾಡಿದ ಕಿಡಿಗೇಡಿಯೊಬ್ಬ, ನಿಮ್ಮ ಪುತ್ರನನ್ನು ಅಪಹರಿಸಿದ್ದೇವೆ. ನಮಗೆ 90 ಲಕ್ಷ ರು ನೀಡಿದರೆ ಜೀವಂತ ಬಿಡುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಕೂಡಲೇ ಪೊಲೀಸರಿಗೆ ಮನೋಹರ್ ಪಾಟೀಲ್ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಕ್ಷಣವೇ ಸಂತ್ರಸ್ತನ ರಕ್ಷಣೆಗೆ ಕಾರ್ಯಾಚರಣೆಗಿಳಿದಿದ್ದಾರೆ. ಕೊನೆಗೆ ಟವರ್ ಲೋಕೇಷನ್ ಆಧಾರದ ಮೇರೆಗೆ ಬೇಲೂರು ತಾಲೂಕಿನಲ್ಲಿದ್ದ ಮನೀಷ್‌ನನ್ನು ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಅದೇ ವೇಳೆ ಆತನೊಂದಿಗೆ ಇದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ನಗರಕ್ಕೆ ಕರೆತಂದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ