ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. 92 ವರ್ಷದ ಎಸ್ಎಂ ಕೃಷ್ಣ ಕಳೆದ ಕೆಲ ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇದರ ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಒಂದು ಕಾರಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವು.
ಬೆಂಗಳೂರು(ಡಿ.10) ಭಾರತದ ರಾಜಕಾರಣದಲ್ಲಿ ಅತ್ಯಂತ ಗೌರವಯುತ ಸ್ಥಾನ ಪಡೆದಿರುವ ಎಸ್ಎಂ ಕೃಷ್ಣ ವಿಧಿವಶರಾಗಿದ್ದಾರೆ. 92ನೇ ವಯಸ್ಸಿನಲ್ಲಿ ಎಸ್ಎಂ ಕೃಷ್ಣ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಎಸ್ಎಂ ಕೃಷ್ಣ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆದಿದ್ದರು. ಪ್ರಮುಖವಾಗಿ ಎಸ್ಎಂ ಕೃಷ್ಣ ಆರೋಗ್ಯದ ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು. ಇದಕ್ಕೆ ಪ್ರಮುಖ ಕಾರಣ ಅಳಿಯ ಸಿದ್ಧಾರ್ಥ ಹೆಗ್ಡೆ ಸಾವು.
ಕೆಫೆ ಕಾಫಿ ಡೇ ಮಾಲೀಕ, ಕರ್ನಾಟಕದಲ್ಲಿ ಹಳ್ಳಿಯಲ್ಲಿ ಆರಂಭಿಸಿದ ಉದ್ಯಮವನ್ನು ದೇಶಾದ್ಯಂತ ಪಸರಿಸಿದ ಉದ್ಯಮಿ ಸಿದ್ದಾರ್ಥ ಹೆಗ್ಡೆ ದುರಂತ ಅಂತ್ಯ ಕಂಡಿದ್ದರು. 2019ರ ಜುಲೈ 29 ರಂದು ಬದುಕು ಅಂತ್ಯಗೊಳಿಸಿದ್ದರು. ಜುಲೈ 29 ರಂದು ನಾಪತ್ತೆಯಾದ ಸಿದ್ಧಾರ್ಥ ಹೆಗ್ಡೆ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಜುಲೈ 31 ರಂದು ಸಿದ್ಧಾರ್ಥ ಹೆಗ್ಡೆ ಮೃತದೇಹ ಪತ್ತೆಯಾಗಿತ್ತು. ಈ ಸುದ್ದಿ ಕರ್ನಾಟಕಕ್ಕೆ ಆಘಾತ ತಂದಿತ್ತು. ಸಿದ್ಧಾರ್ಥ ಕುಟುಂಬಸ್ಥರು ಕುಗ್ಗಿ ಹೋಗಿದ್ದರು. ಈ ಪೈಕಿ ಎಸ್ಎಂ ಕೃಷ್ಣ ತೀವ್ರ ನೊಂದು ಕೊಂಡಿದ್ದರು.
ಮಿರಾಕಲ್ ಎಂಬಂತೆ ವೆಂಟಿಲೇಟರ್ ನಿಂದ ಹೊರಬಂದು ಡಿಸ್ಚಾರ್ಜ್ ಆಗಿದ್ದ ಎಸ್ಎಂ ಕೃಷ್ಣ
ಸಿದ್ಧಾರ್ಥ ಹೆಗ್ಡೆ ಸಾವಿನ ಬಳಿಕ ಎಸ್ಎಂ ಕೃಷ್ಣ ವಯೋಸಜಹ ಕಾಯಿಲೆ ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು. ಸಿದ್ಧಾರ್ಥ ಹೆಗ್ಡೆ ಘಟನೆಯಿಂದ ಹೊರಬರಲು ತೀವ್ರ ಚಡಪಡಿಸಿದ್ದರು. ಅಳಿಯ ಸಿದ್ದಾರ್ಥ ಹೆಗ್ಡೆ ಘಟನೆ ಎಸ್ಎಂ ಕೃಷ್ಣ ಅವರನ್ನು ಮಾನಸಿಕವಾಗಿ ಚಡಪಡಿಸುವಂತೆ ಮಾಡಿತ್ತು. ಇತ್ತ ದೈಹಿಕವಾಗಿಯೂ ಕುಗ್ಗಿ ಹೋದ ಎಸ್ಎಂ ಕೃಷ್ಣ ಪದೇ ಪದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆ ಎಸ್ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. ಇದೇ ಅವರ ಆರೋಗ್ಯವನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡಿತ್ತು.
ಎಸ್ಎಂ ಕೃಷ್ಣ ಪುತ್ರಿ ಮಾಳವಿಕ ಹೆಗ್ಡೆ ಚಿಕ್ಕ ವಯಸ್ಸಿನಲ್ಲೇ ಪತಿ ಸಿದ್ಧಾರ್ಥ ಹೆಗ್ಡೆ ಕಳೆದುಕೊಂಡು ಬದುಕು ಸಾಗಿಸಬೇಕಾದ ಪರಿಸ್ಥಿತಿ ಬಂದೊಗಿತಲ್ಲಾ ಅನ್ನೋ ಕೊರಗು ಎಸ್ಎಂ ಕೃಷ್ಣಗೆ ಕಾಡುತ್ತಲೇ ಇತ್ತು. ಎಸ್ಎಂ ಕೃಷ್ಣ ಅವರ ಅಚ್ಚುಮೆಚ್ಚಿನ ಅಳಿಯನಾಗಿದ್ದ ಸಿದ್ಧಾರ್ಥ್ ಹೆಗ್ಡೆ ದುರಂತ ಘಟನೆ ಇನ್ನಿಲ್ಲದಂತೆ ಕಾಡಿತ್ತು. 2019ರಿಂದ ಸತತವಾಗಿ ಎಸ್ಎಂ ಕೃಷ್ಣ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಇದರ ನಡುವೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಎಂ ಕೃಷ್ಣ ಆರೋಗ್ಯ ಗಂಭೀರವಾಗಿತ್ತು. ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಸತತ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಬಿಡುಗಡೆಯಾಗಿದ್ದರು.
ವಯೋಸಹಜ ಕಾಯಿಲಿಗೆ ಚಿಕಿತ್ಸೆ ಪಡೆಯುತ್ತಿದ್ದ ಎಸ್ಎಂಸ ಕೃಷ್ಣ, ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ವಿಶ್ರಾಂತಿ ಜೀವನದಲ್ಲಿದ್ದರು. ಇಂದು(ಡಿ.10) ಬೆಳಗ್ಗೆ 2.30ರ ಸುಮಾರಿಗೆ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಕಾಂಗ್ರೆಸ್ ದಿಗ್ಗಜ ನಾಯಕನಾಗಿ ಬೆಳೆದ ಎಸ್ಎಂ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿ ಹಲವು ಹೊಸತನಕ್ಕೆ ನಾಂದಿ ಹಾಡಿದ್ದರು. ಅಕ್ಟೋಬರ್ 11,1999 ರಿಂದ ಮೇ,20, 2004ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಕೇಂದ್ರದಲ್ಲಿ ಅತ್ಯಂತ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2004ರಿಂದ 2008ರ ವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಎಸ್ಎಂ ಕೃಷ್ಣ ಸೇವೆ ಸಲ್ಲಿಸಿದ್ದಾರೆ. ತನ್ನ ಬಹುತೇಕ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿ ಕಳೆದ ಎಸ್ಎಂ ಕೃಷ್ಣ ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಆದರೆ ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಬಿಜೆಪಿಯಲ್ಲಿ ಎಸ್ಎಂ ಕೃಷ್ಣ ಸಕ್ರೀಯವಾಗಿರಲಿಲ್ಲ.
ಮೇ1, 1932ರಲ್ಲಿ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ ಎಸ್ಎಂ ಕೃಷ್ಣ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ, ಅಮೆರಿದ ಡಲ್ಲಾಸ್‌ನಲ್ಲಿರುವ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಹಾಗೂ ಜಾರ್ಜ್ ವಾಶಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಪಡೆದಿದ್ದಾರೆ.