
ಬೆಂಗಳೂರು : ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಕೇಳಿ ಬಂದಿರುವ ಸ್ಮಾರ್ಟ್ ಮೀಟರ್ ಗುತ್ತಿಗೆಯ ಬಹುಕೋಟಿ ಹಗರಣದ ತನಿಖೆಯು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿದು ಬಂದಿದೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17 (ಎ) ರಡಿ ಎಫ್‌ಐಆರ್ ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕಿದೆ. ಈ ಸಂಬಂಧ ಹೈಕೋರ್ಟ್ ಆದೇಶ ಸಹ ಇದೆ. ಹಾಗಾಗಿ ಮಂತ್ರಿ ಆಗಿರುವ ಕಾರಣಕ್ಕೆ ಜಾರ್ಜ್ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಬೇಕು. ಅದೇ ರೀತಿ ಅಧಿಕಾರಿಗಳಿಗೆ ಸರ್ಕಾರದ ಅನುಮತಿ ಕೊಡಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಈ ಬೆಳವಣಿಗೆ ಹಿನ್ನಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ರಾಜಭವನ ಅಂಗಳಕ್ಕೆ ಚೆಂಡು ಬೀಳಲಿದೆ. ಆಗ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದರೆ ಸಚಿವ ಜಾರ್ಜ್ ಅವರಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿದು ಬಂದಿದೆ.
ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣದ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಸಿಕ್ಕಿಲ್ಲ. ಈ ಆದೇಶ ಅವಲೋಕಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಆದರೆ 17(ಎ)ರ ಅಡಿ ನೇರವಾಗಿ ತನಿಖೆಗೆ ಕೆಳಹಂತದ ನ್ಯಾಯಾಲಯವುಗಳು ಆದೇಶಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಇಂಧನ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ನೀಡಿಕೆ ಕೋಟ್ಯಂತರ ರು. ಅಕ್ರಮ ನಡೆದಿದೆ ಎಂದು ಆರೋಪಿಸಿದ ಮಾಜಿ ಉಪಮುಖ್ಯಮಂತ್ರಿ ಡಾ। ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರ ಬಿಜೆಪಿ ಮುಖಂಡರು ತನಿಖೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು, ಸಚಿವ ಜಾರ್ಜ್ ಹಾಗೂ ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕಾನೂನುಬಾಹಿರವಾಗಿ ದಾವಣಗೆರೆ ಜಿಲ್ಲೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಶೆಲ್ ಕಂಪನಿಗೆ ಇಂಧನ ಇಲಾಖೆಗೆ ಗುತ್ತಿಗೆ ನೀಡಿದೆ. ಈ ಗುತ್ತಿಗೆ ನೀಡಿಕೆಯಲ್ಲಿ ಕೋಟ್ಯಾಂತರ ರುಪಾಯಿ ಮೊತ್ತದ ಕಿಕ್ ಬ್ಯಾಕ್ ಅನ್ನು ಸಚಿವರು ಪಡೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಕಾನೂನು ರೀತ್ಯವೇ ಎದುರಿಸುತ್ತೇನೆ
ಸ್ಮಾರ್ಟ್ ಮೀಟರ್ ವಿಚಾರದಲ್ಲಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಎಲ್ಲವನ್ನೂ ನಾನು ಕಾನೂನು ಪ್ರಕಾರವೇ ಎದುರಿಸುತ್ತೇನೆ. ಅವರ ಎಲ್ಲಾ ಆರೋಪಗಳಿಗೂ ವಕೀಲರ ಮೂಲಕ ವಿವರಣೆ ನೀಡಲು ಸಿದ್ಧನಿದ್ದೇನೆ.
-ಕೆ.ಜೆ. ಜಾರ್ಜ್, ಇಂಧನ ಸಚಿವ
ಜಾರ್ಜ್‌ರನ್ನು ಸಿದ್ದು ವಜಾಗೊಳಿಸಲಿ
ಖಾಸಗಿ ದೂರು ದಾಖಲಿಸಲು ನ್ಯಾಯಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು.
- ಡಾ। ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಡಿಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ