
ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರಕಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ, ಸದ್ಯ ಶಕ್ತಿ ಯೋಜನೆಯಲ್ಲಿ ಆಧಾರ್ ಕಾರ್ಡ್ ಅಥವಾ ಸರ್ಕಾರದ ಸರ್ಕಾರ ನೀಡಿರುವ ಇನ್ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಿ ರಾಜ್ಯ ಸಾರಿಗೆಯ ಸಾಮಾನ್ಯ ದರದ ಬಸ್ಸುಗಳಲ್ಲಿ ಸಂಚರಿಸಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ಯೋಜನೆಯನ್ನು ಮತ್ತಷ್ಟು ಸಮರ್ಪಕ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಟ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮಹಿಳೆಯರು ಸಾರಿಗೆ ಇಲಾಖೆಯ ಎಲ್ಲಾ ಸಾಮಾನ್ಯ ದರದ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಶಕ್ತಿ ಯೋಜನೆಯ ಪಾರದರ್ಶಕ ಅನುಷ್ಠಾನಕ್ಕಾಗಿ ಸ್ಮಾರ್ಟ್ ಕಾರ್ಡ್ ಅನುಷ್ಠಾನಗೊಳಿಸಲಾಗುವುದು. ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಸ್ಮಾರ್ಟ್ ಕಾರ್ಟ್ ವಿತರಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ, ಇದುವರೆಗೂ ಅದು ಅನುಷ್ಠಾನವಾಗಿರಲಿಲ್ಲ. ಇದು ಕಳೆದ ಬೆಳಗಾವಿ ಅಧಿವೇಶನ ಹಾಗೂ ಜಂಟಿ ಅಧಿವೇಶನದಲ್ಲಿ ಕೆಲ ಸದಸ್ಯರಿಂದ ಪ್ರಶ್ನೆಗೆ ಒಳಗಾಗಿತ್ತು.
ಶಕ್ತಿ ಯೋಜನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರೂ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಈ ಯೋಜನೆಗೆ ಎಸ್ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸುತ್ತಿದೆ. ಆದರೆ, ಸದ್ಯ ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಇತರೆ ಗುರುತಿನ ಚೀಟಿ ತೋರಿಸಿ ಮಹಿಳೆಯರು ಉಚಿತ ಪ್ರಮಾಣ ಮಾಡಲು ಅವಕಾಶ ನೀಡಲಾಗಿದೆ. ಹೀಗಿರುವ ನಿರ್ದಿಷ್ಟವಾಗಿ ಎಷ್ಟು ಪ್ರಮಾಣದಲ್ಲಿ ಎಸ್ಸಿ,ಎಸ್ಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂಬ ಮಾಹಿತಿ ಹೇಗೆ ಲಭ್ಯವಾಗುತ್ತದೆ? ಯಾವ ಆಧಾರದಲ್ಲಿ ಎಸ್ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಸಲಾಗಿದೆ ಎಂದು ಪ್ರತಿಪಕ್ಷ ಮಾತ್ರವಲ್ಲದೆ ಆಡಳಿತ ಪಕ್ಷದ ಸದಸ್ಯರಿಂದಲೂ ಪ್ರಶ್ನೆಗಳು ಕೇಳಿಬಂದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ