
ಬೆಂಗಳೂರು : ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದ, ವಾರ್ಷಿಕ 40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಸಣ್ಣ ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಸೂಚನೆ ನೀಡಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 22ರ ಅನ್ವಯ ವಾರ್ಷಿಕ ಸರಕು ಪೂರೈಕೆದಾರರ ಸಮಗ್ರ ವಹಿವಾಟು 40 ಲಕ್ಷ ರು. ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರು. ಮೀರಿದರೆ ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.
2021-22ರಿಂದ 2024-25ರ ಸಾಲಿನಲ್ಲಿ ಯುಪಿಐ (ಆನ್‌ಲೈನ್ ಪೇಮೆಂಟ್ ಆ್ಯಪ್) ಮೂಲಕ 40 ಲಕ್ಷ ರು.ಗೂ ಹೆಚ್ಚಿನ ಮೊತ್ತದ ವಹಿವಾಟು ನಡೆಸಿರುವ ಸಣ್ಣ ವರ್ತಕರು ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಳ್ಳದಿರುವುದು ಪತ್ತೆಯಾಗಿದೆ. ಅಂತಹ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರ ನೀಡಿ, ಸೂಕ್ತ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಹೀಗೆ ನೋಟಿಸ್ ಪಡೆದ ವರ್ತಕರು ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆಯೂ ಸೂಚಿಸಲಾಗಿದೆ.
ಯುಪಿಐ, ನಗದು ಸೇರಿದಂತೆ ಒಟ್ಟಾರೆ ವಾರ್ಷಿಕ 40 ಲಕ್ಷ ರು.ನಿಂದ ಗರಿಷ್ಠ 1.5 ಕೋಟಿ ರು.ವರೆಗೆ ವಹಿವಾಟು ನಡೆಸುವ ಸಣ್ಣ ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸಿ ಕೂಡಲೇ ಜಿಎಸ್‌ಟಿ ನೋಂದಣಿ ಪಡೆಯುವಂತೆ ಇಲಾಖೆ ನಿರ್ದೇಶಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ www.gst.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ