ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು

Kannadaprabha News   | Kannada Prabha
Published : Dec 08, 2025, 07:49 AM IST
Six thousand police personnel to provide security for Belgaum session

ಸಾರಾಂಶ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಬಿಜೆಪಿ, ರೈತ ಸಂಘಟನೆಗಳು ಸೇರಿದಂತೆ 89 ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶ್ರೀಶೈಲ ಮಠದ

ಬೆಳಗಾವಿ (ಡಿ.8): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ 19ರವರೆಗೆ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ನಾನಾ ಸಂಘಟನೆಗಳಿಂದ ನಿತ್ಯ ಸಾಲು ಸಾಲು ಪ್ರತಿಭಟನೆಗಳು ನಡೆಯಲಿದ್ದು, ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಬಿಜೆಪಿ ಸೇರಿದಂತೆ ಒಟ್ಟು 89 ಸಂಘಟನೆಗಳು ಅನುಮತಿ ಕೋರಿ ಬೆಳಗಾವಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿವೆ. ಈ ಮೂಲಕ ಸದನದೊಳಗೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲಿದ್ದರೆ, ಹೊರಗೆ ಸಂಘಟನೆಗಳು ಸರ್ಕಾರಕ್ಕೆ ತಮ್ಮ ಬೇಡಿಕೆ ಪಟ್ಟಿಯನ್ನೇ ನೀಡಲು ಅಣಿಯಾಗಿವೆ.

ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮಹಾಮೇಳಾವ್‌ ಸಂಘಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಆದರೆ, ಪೊಲೀಸ್‌ ಆಯುಕ್ತಾಲಯವು ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದೆ. ಕಳೆದ ಬಾರಿಯೂ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿತ್ತು. ಆದರೆ, ಎಂಇಎಸ್‌ ಪುಂಡರು ಅಲ್ಲಲ್ಲಿ ಜಮಾಯಿಸಿ, ಪೊಲೀಸರ ಧಿಕ್ಕು ತಪ್ಪಿಸಲು ಯತ್ನಿಸಿದ್ದರು. ಬಳಿಕ ಎಂಇಎಸ್‌ ಮುಖಂಡರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅನುಮತಿ ಇಲ್ಲದಿದ್ದರೂ ಎಂಇಎಸ್‌ ಪುಂಡರು ಅಲ್ಲಲ್ಲಿ ಗುಂಪು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಸರ್ಕಾರದ ರೈತ ವಿರೋಧಿ ಧೋರಣೆ ಮತ್ತು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಡಿ.9 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದು, ಸುವರ್ಣಸೌಧಕ್ಕೆ ಮುತ್ತಿಗೆಗೆ ಕರೆ ನೀಡಿದೆ. ಈ ಮೂಲಕ ಬಿಜೆಪಿ ಸದನದೊಳಗೂ, ಹೊರಗೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ.

ಸ್ಫೋಟವಾಗಲಿದೆ ರೈತರ ಆಕ್ರೋಶ:

ಇನ್ನು, ಕಬ್ಬಿಗೆ, ಮೆಕ್ಕೆಜೋಳ, ಹಸಿರು, ಉದ್ದು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮತ್ತೆ ರೈತರು ನಡೆಸಲಿರುವ ಹೋರಾಟ ಗಮನಸೆಳೆಯಲಿದೆ. ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಡಿ.11ರಂದು ಸಹಸ್ರಾರು ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಆಶಾ ಕಾರ್ಯಕರ್ತೆಯರು, ವಿವಿಧ ರೈತ ಪರ ಸಂಘಟನೆಗಳು ಹೀಗೆ ನಾನಾ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜಾಗಿ ನಿಂತಿವೆ.

\Bಪೊಲೀಸರ ಹೈ ಅಲರ್ಟ್‌: \B

ಅಧಿವೇಶನದ ವೇಳೆ ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ನಿತ್ಯ ಸುಮಾರು 50 ಸಾವಿರ ಜನರು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ಭದ್ರತಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೈಅಲರ್ಟ್‌ ಆಗಿವೆ.

ಅಧಿವೇಶನದಲ್ಲಿ ಸಚಿವಾಲಯ ಸಿಬ್ಬಂದಿ ಸೇರಿ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸುವರ್ಣವಿಧಾನಸೌಧದ ಸುತ್ತಮುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ವಿವಿಧ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌, ಹಳೆಯ ಪುಣಾ-ಬೆಂಗಳೂರು ರಸ್ತೆ ಧಾರವಾಡ ನಾಕಾ( ಅಲಾರವಾಡ) ಬಳಿ ವೇದಿಕೆಗಳನ್ನು ನಿರ್ಮಿಸಲಾಗಿದೆ. ಎಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 6 ಐಪಿಎಸ್, 16 ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ನಿರ್ವಹಿಸಲಿದ್ದಾರೆ. 3820 ಸಿಬ್ಬಂದಿ, 500 ಗೃಹ ರಕ್ಷದಳ ಸಿಬ್ಬಂದಿ, 8 ಕ್ವಿಕ್ ರೆಸ್ಪಾನ್ಸ್ ಟೀಮ್, 10 ಡಿಆರ್ ಪ್ರಹಾರ ದಳ, 35 ಕೆಎಸ್‌ಆರ್‌ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಇದೇ ಮೊದಲ ಬಾರಿಗೆ ಭದ್ರತಾ ಕಣ್ಣಾವಲಿಗೆ 11 ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ.

ಕೋಟ್‌.......

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಟ್ಟುನಿಟ್ಟಿನ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರಿಗೆ ಅನುಕೂಲವಾಗುವಂತೆ ಸುವರ್ಣ ಗಾರ್ಡನ್‌ ಬಳಿ ಮತ್ತು ಹಳೆಯ ಪಿಬಿ ರಸ್ತೆಯ ಧಾರವಾಡ ನಾಕಾ ಬಳಿ ವೇದಿಕೆಗಳನ್ನು ನಿರ್ಮಿಸಲಾಗಿದೆ. ಈವರೆಗೆ 88 ಸಂಘಟನೆಗಳಿಗೆ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಮಹಾಮೇಳಾವ್‌ ಸಂಘಟಿಸಲು ಕೋರಿ ಸಲ್ಲಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಭೂಷಣ ಬೋರಸೆ, ಪೊಲೀಸ್‌ ಆಯುಕ್ತರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Winter Session: ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕಗಳು
ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆ ವಿಭಜನೆ ಅತ್ಯಗತ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್