SIR: ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?

Kannadaprabha News   | Kannada Prabha
Published : Oct 02, 2026, 07:13 AM IST
CM DK Shivakumar protest

ಸಾರಾಂಶ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದೆ. ಕಾನೂನಿನ ಪ್ರಕಾರ ಚುನಾವಣಾ ಆಯೋಗ ದೂರು ನೀಡಿದರೆ ಮಾತ್ರ ಪೊಲೀಸರು ತನಿಖೆ ನಡೆಸಲು ಸಾಧ್ಯವಿರುವ ಕಾರಣ ಸರ್ಕಾರ ಈ ಪಟ್ಟು ಹಿಡಿದಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಅ.2): ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅಕ್ರಮವೆಸಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಖ್ಯ ಚುನಾವಣಾಧಿಕಾರಿ ಅವರ ಕಚೇರಿ ಮುಂದೆ ರಾಜ್ಯ ಸರ್ಕಾರ ಪಟ್ಟು ಹಿಡಿದಿರುವ ಹಿಂದೆ ಪ್ರಮುಖ ಕಾನೂನಾತ್ಮಕ ಕಾರಣಗಳಿವೆ.

ಚುನಾವಣೆಗೆ ಸಂಬಂಧಿಸಿದ ಅಕ್ರಮ ಅಥವಾ ದೋಷಗಳ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ಪ್ರತಿನಿಧಿ ದೂರು ನೀಡಿದರೆ ಮಾತ್ರ ಕಾನೂನಿನ್ವಯ ಪೊಲೀಸರಿಗೆ ಎಫ್‌ಐಆರ್ ದಾಖಲಿಸುವ ಅವಕಾಶವಿದೆ. ಚುನಾವಣಾ ಆಯೋಗದ ಕರ್ತವ್ಯನಿರತ ಅಧಿಕಾರಿ-ಸಿಬ್ಬಂದಿ ಹೊರತುಪಡಿಸಿ ಮೂರನೇ ವ್ಯಕ್ತಿಯ ದೂರಿಗೆ ಕಾನೂನಿನ ಮಾನ್ಯತೆ ಇಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ರಾಜ್ಯದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎರಡ್ಮೂರು ಕ್ಷೇತ್ರಗಳಲ್ಲಿ ಮತಕಳವು ಆರೋಪ ಕೇಳಿ ಬಂದಿದ್ದವು. ಆದರೆ ಚುನಾವಣಾ ಆಯೋಗದಿಂದ ದೂರು ದಾಖಲಾಗದ ಪರಿಣಾಮ ಪೊಲೀಸರ ತನಿಖೆಗೆ ಅಡ್ಡಿಯಾಗಿತ್ತು. ಆದರೆ ಕಲುಬರಗಿ ಜಿಲ್ಲೆ ಅಳಂದ ವಿಧಾನಸಭಾ ಕ್ಷೇತ್ರದ ಮತ ಕಳವಿಗೆ ಯತ್ನದ ಬಗ್ಗೆ ಚುನಾವಣಾಧಿಕಾರಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ಈ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಯಿತು.

ಆಂಧ್ರ ಸರ್ಕಾರದ ತೀರ್ಮಾನಕ್ಕೆ ಹಿನ್ನಡೆ:

2024ರಲ್ಲಿ ಆಂಧ್ರಪ್ರದೇಶದ ಪರ್ಚುರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸಂಬಂಧ ಅಂದಿನ ಸಿಎಂ ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಆದರೆ ಸರ್ಕಾರದ ತೀರ್ಮಾನದ ವಿರುದ್ಧ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ತಕ್ಷಣ ಎಸ್‌ಐಟಿಯನ್ನು ಆಂಧ್ರ ಸರ್ಕಾರ ರದ್ದುಪಡಿಸಿತು.

ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಂಧ್ರಪ್ರದೇಶ ಸರ್ಕಾರ ನಡೆದುಕೊಂಡಿದೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡೆಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಹೀಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಪೊಲೀಸರಿಗೆ ಆಯೋಗ ಅಥವಾ ಆಯೋಗದ ಪ್ರತಿನಿಧಿಯಾಗಿ ಆ ಕ್ಷೇತ್ರದಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ಮಾತ್ರ ದೂರಿಗೆ ಕಾನೂನಿನ ಮಾನ್ಯತೆ ಇದೆಯೇ ಹೊರತು ಮೂರನೇ ವ್ಯಕ್ತಿಗೆ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು.

2023ರಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂ‍ಭವಾದಾಗ ಕಲಬುರಗಿ ಜಿಲ್ಲೆ ಅಳಂದ ವಿಧಾನಸಭಾ ಕ್ಷೇತ್ರದ ಮತ ಕಳವು ಯತ್ನ ಸಂಬಂಧ ಚುನಾವಣಾಧಿಕಾರಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಹಾಗಾಗಿ ದೇಶದಲ್ಲಿ ಮತ ಕಳವು ಸಂಬಂಧ ದಾಖಲಾದ ಮೊದಲ ಪ್ರಕರಣ ಅದಾಗಿತ್ತು. ರಾಜ್ಯ ಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿತು.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈಗ ಎಸ್‌ಐಆರ್‌ ವಿಚಾರವಾಗಿ ಮುಖ್ಯ ಚುನಾವಣಾಧಿಕಾರಿ ಅವರೇ ದೂರು ನೀಡಬೇಕು, ಆಗ ಮಾತ್ರ ಪರಿಣಾಮ ಬೀರಲಿದೆ ಎಂಬ ಕಾರಣದಿಂದ ರಾಜ್ಯ ಸರ್ಕಾರ ಈ ರೀತಿ ಪ್ರತಿಭಟಿಸುತ್ತಿದೆ.

ದೂರು ನೀಡದೆ ತನಿಖೆ ಅಡ್ಡಿ:

ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಮತಗಳು ಅಳಿಸಿದ್ದು ಹಾಗೂ ಲೋಕಸಭಾ ಚುನಾವಣೆ ವೇಳೆ 50 ಸಾವಿರ ಮತಗಳ ಸೇರ್ಪಡೆ ನಡೆದಿದೆ ಎಂದು ಕೇಳಿ ಬಂದ ಆರೋಪದ ಬಗ್ಗೆ ಚುನಾವಣಾ ಆಯೋಗ ದೂರು ನೀಡದ ಕಾರಣ ಪೊಲೀಸ್ ತನಿಖೆಗೆ ಅಡ್ಡಿಯಾಗಿತ್ತು.

ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ಮತದಾರರ ಸೇರ್ಪಡೆ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್ ನಾಯಕಿ ದೂರು ಆಧರಿಸಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಕೊನೆಗೆ ಅದಕ್ಕೆ ಕಾನೂನಿನ ಮಾನ್ಯತೆ ಸಿಗದೆ ಎಫ್‌ಐಆರ್ ಅನ್ನು ಇಲಾಖೆ ಹಿಂಪಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಲೇಷ್ಯಾ ಕನ್ನಡ ಸಂಘದ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ: ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹೆಜ್ಜೆ
Karnataka News Live: SIR - ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?