ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕರು ಜಾನಕಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಜಾನಕಿ ಅವರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಮೈಸೂರು (ಡಿ.05): ಭಾರತದ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರು ಗುರುವಾರ ಬೆಳಗ್ಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಸಣಿಕಮ್ಮ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ದೇವಾಲಯದ ಅರ್ಚಕ ಗಾಯಕಿ ಜಾನಕಿ ಅವರಿಗೆ ಹಾರ ಹಾಕಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿ ಜನಿಸಿ ತಮಿಳುನಾಡಿನಲ್ಲಿ ಹಿನ್ನೆಲೆ ಗಾಯಕಯಾಗಿ ಪ್ರಸಿದ್ಧಿ ಹೊಂದಿದ ಗಾಯಕಿ ಎಸ್. ಜಾನಕಿ ಅವರು ನಮ್ಮ ದೇಶದ 14 ಭಾಷೆಗಳು ಹಾಗೂ ವಿದೇಶಗಳ 3 ಭಾಷೆಗಳು ಸೇರಿದಂತೆ ಸಾವಿರಾರು ಸಿನಿಮಾಗಳು, ಕ್ಯಾಸೆಟ್, ರೇಡಿಯೋ, ದೇವಾಲಯ ಹಾಗೂ ಭಕ್ತಿಗೀತೆಗಳು ಸೇರಿದಂತೆ ಒಟ್ಟು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ (78ನೇ ವರ್ಷದಲ್ಲಿ) ಹಾಡು ಹಾಡುವುದನ್ನು ನಿಲ್ಲಿಸಿದ್ದು, ವಿಶ್ರಾಂತಿ ಜೀವನ ಕಳೆಯುತ್ತಿದ್ದಾರೆ. ಆದರೆ, ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡಿಸಿ ಆಶಿರ್ವಾದ ಪಡೆದಿದ್ದಾರೆ.
ಇದೇ ವೇಳೆ ಪೂಜೆ ನಂತರ ಮಸಣಿಕಮ್ಮ ದೇವಾಲಯದ ಅರ್ಚಕರು ಗಾಯಕಿ ಎಸ್.ಜಾನಕಿ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಬಹುತೇಕವಾಗಿ ಹಿಂದೂ ಧರ್ಮದ ಪ್ರಕಾರ ಭಕ್ತರೇ ದೇವಾಲಯದ ಪೂಜಾರಿಗಳು ಹಾಗೂ ಅರ್ಚಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಆದರೆ, ಇಲ್ಲಿ ಸ್ವತಃ ದೇವಾಲಯದ ಪೂಜೆ ಮಾಡುವ ಅರ್ಚಕರೇ ಗಾಯಕಿ ಎಸ್. ಜಾನಕಿ ಅವರಿಗೆ ದೇವರ ಮೇಲಿಂದ ತೆಗೆದ ಹಾರವನ್ನು ಹಾಕಿದ್ದಾರೆ. ನಂತರ, ಜಾನಕಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಲ್ಲಿ ನೆರೆದಿದ್ದ ಎಲ್ಲರಿಗೂ ಆಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಸಂಬಂಧಿಕರ ಬರ್ತಡೇ ಪಾರ್ಟಿಗೆ ಹೋಗಿದ್ದ ತಾಯಿ-ಮಗ ಸಾವು!
ಇನ್ನು ಎಸ್. ಜಾನಕಿ ಅವರು ದೇವಾಲಯದಲ್ಲಿ ದರ್ಶನ ಪಡೆದು ಹೊರಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಜನರು ಹಾಗೂ ಯುವ ಗಾಯಕರು ಎಸ್. ಜಾನಕಿ ಜಾನಕಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ನಂತರ, ಪಿರಿಯಾಪಟ್ಟಣ ಪುರಸಭಾ ಸದಸ್ಯ ಪಿ.ಎನ್. ವಿನೋದ್ ಅವರ ಮನೆಗೆ ಭೇಟಿ ನೀಡಿದರು. ಇನ್ನು ಪುರಸಭಾ ಸದಸ್ಯರ ಕುಟುಂಬಸ್ಥರಿಂದ ಜಾನಕಿ ಅವರನ್ನು ಸನ್ಮಾನಿಸಲಾಯಿತು.