
ಸಿಂಧನೂರು (ಸೆ.25): ಕನ್ನಡಿಗರು ಸರಳ, ಸಜ್ಜನಿಕೆ ಹಾಗೂ ಹೃದಯ ವೈಶಾಲ್ಯತೆ ಉಳ್ಳವರು. ಎಲ್ಲ ಭಾಷಿಕರನ್ನು ಒಪ್ಪಿ ಅಪ್ಪಿಕೊಳ್ಳುವ ಮನೋಭಾವದವರು ಎಂದು ತೆಲುಗು ನಟ ಮೆಕಾ ಶ್ರೀಕಾಂತ್ ಹೇಳಿದರು. ತಾಲೂಕಿನ ಗಾಂಧಿನಗರದ ಗ್ರಾಮದ ಶಿವಾಲಯದ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸಂಜೆ ನಡೆದ ಗ್ರಾಮೀಣ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ತೆಲುಗು ಭಾಷೆಗಳು ಸಹೋದರ ಭಾಷೆಗಳಾಗಿವೆ. ಕನ್ನಡ ಚಿತ್ರನಟರು ತೆಲುಗಿನಲ್ಲಿ, ತೆಲುಗು ಚಿತ್ರನಟರು ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ಇಲ್ಲಿ ಕೊಡುಕೊಳ್ಳುವಿಕೆ ಇದೆ. ಹೀಗಾಗಿ ನಾವೆಲ್ಲರೂ ಭಾರತ ಮಾತೆಯ ಪುತ್ರರು. ನಾನು ಗಂಗಾವತಿ ತಾಲೂಕಿನ ಬಸಪಟ್ಟಣದಲ್ಲಿ ಜನಿಸಿದ್ದೇನೆ. ಆಂಧ್ರಪ್ರದೇಶದಲ್ಲಿ ಚಿತ್ರ ನಟನಾಗಿ ಬೆಳೆದಿದ್ದೇನೆ. ಆದರೆ ಕರ್ನಾಟಕ ಮತ್ತು ಕನ್ನಡಿಗರನ್ನು ಮರೆಯುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಭಾವೈಕ್ಯತೆ, ಸಾಮರಸ್ಯದ ಸಂಕೇತವೇ ದಸರಾ ಹಬ್ಬವಾಗಿದೆ. ಹಬ್ಬಗಳ ಆಚರಣೆ ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿರುವುದು, ಮಹತ್ವ ಕಳೆದುಕೊಳ್ಳುತ್ತಿರುವುದು ಬೇಸರ ಮೂಡಿಸಿದೆ. ಆದ್ದರಿಂದ ಸಿಂಧನೂರಿನ 5 ಗ್ರಾಮಗಳಲ್ಲಿ ಗ್ರಾಮೀಣ ದಸರಾ ಮತ್ತು 5 ದಿನ ನಗರದಲ್ಲಿ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಿ ಹಬ್ಬಕ್ಕೆ ಕಳೆ ತರಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ತಂಡಗಳು, ಕೃಷಿ, ಆರೋಗ್ಯ, ಸಾಮಾಜಿಕ ಜಾಗೃತಿ ರೂಪಕ ನಾಟಕಗಳನ್ನು ಏರ್ಪಡಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಜೆಡಿಎಸ್ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸೇರಿ ಅನೇಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಗ್ರಾಮದ ಆಂಜನೇಯ ದೇವಸ್ಥಾನದಿಂದ ನೂರಾರು ಮಹಿಳೆಯರು ಕುಂಭ-ಕಳಸ ಹಿಡಿದು, ವಿವಿಧ ಕಲಾತಂಡಗಳು, ಬಾಜಾ-ಭಜಂತ್ರಿಗಳ ವಾದ್ಯ ಮೇಳಗಳೊಂದಿಗೆ ಶಿವಾಲಯ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ