
ಚಿಕ್ಕಬಳ್ಳಾಪುರ (ಜ.27): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಸುಮಾರು 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ವೇಳೆ, ಆರೋಪಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿತನಾಗಿದ್ದ ಎರಡನೇ ಆರೋಪಿ ಮೈಕೆಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರಾಜೀವ್ ಗೌಡನನ್ನು ಇಂದು ಮಧ್ಯಾಹ್ನ 3 ಗಂಟೆಗೆ ಶಿಡ್ಲಘಟ್ಟದ ಹೆಚ್ಚುವರಿ ಅಪರ ನ್ಯಾಯಾಧೀಶೆ ಸುಕನ್ಯಾ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಆವರಣದಲ್ಲಿ ನೂರಾರು ಬೆಂಬಲಿಗರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿದ್ದರು. ಬೆಂಬಲಿಗರು ಜಾಮೀನಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ರಾಜೀವ್ ಗೌಡ ಕೈಬೀಸುತ್ತಲೇ ಕೋರ್ಟ್ ಒಳಗೆ ಪ್ರವೇಶಿಸಿದ್ದು ಕಂಡುಬಂದಿತು.
ಇನ್ನು ವಿಚಾರಣೆ ವೇಳೆ ಸರಕಾರಿ ಪರ ವಕೀಲರು ರಾಜೀವ್ ಗೌಡನ ವಿರುದ್ಧ ಪ್ರಬಲ ಆಕ್ಷೇಪಣೆ ಸಲ್ಲಿಸಿದರು. 'ಆರೋಪಿ ಮಹಿಳಾ ಅಧಿಕಾರಿಯ ವಿರುದ್ಧ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಆ ಶಬ್ದಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಮೊಬೈಲ್ ಇನ್ನೂ ವಶಪಡಿಸಿಕೊಳ್ಳಬೇಕಿದೆ. ಯಾವೆಲ್ಲಾ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರು ಎಂಬ ಬಗ್ಗೆ ಮಹಜರು ನಡೆಸಬೇಕಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡಬೇಕು' ಎಂದು ವಾದ ಮಂಡಿಸಿದರು. ಅಲ್ಲದೆ, ಬಿಎನ್‌ಎಸ್ 132 (BNS 132) ಸೆಕ್ಷನ್ ಅಡಿ ಪ್ರಕರಣದ ಗಾಂಭೀರ್ಯವನ್ನು ನ್ಯಾಯಾಧೀಶರ ಗಮನಕ್ಕೆ ತಂದರು.
ರಾಜೀವ್ ಗೌಡ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, 'ಇದು ರಾಜಕೀಯ ಪ್ರೇರಿತ ದೂರು. ಘಟನೆ ನಡೆದ ಎರಡು ದಿನಗಳ ಬಳಿಕ ದೂರು ನೀಡಲಾಗಿದೆ. ಈಗಾಗಲೇ ಆರೋಪಿಯು ಮಾಧ್ಯಮಗಳ ಮೂಲಕ ಕ್ಷಮೆಯನ್ನೂ ಕೇಳಿದ್ದಾರೆ. ಕೇವಲ ಜೈಲಿಗೆ ಹಾಕಬೇಕೆಂಬ ಉದ್ದೇಶದಿಂದ ಸೆಕ್ಷನ್ ಹಾಕಲಾಗಿದೆ' ಎಂದು ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದರು. ಆದರೆ, ನ್ಯಾಯಾಲಯ ಈ ವಾದವನ್ನು ಪುರಸ್ಕರಿಸದೆ ರಾಜೀವ್ ಗೌಡನನ್ನು ಜೈಲಿಗಟ್ಟಿದೆ.
ಮತ್ತೊಬ್ಬ ಆರೋಪಿ ಮೈಕೆಲ್ ಪರ ವಾದಿಸಿದ ವಕೀಲರು, 'ಮೈಕೆಲ್ ಕೇವಲ ಚಹಾ ಕುಡಿಯಲು ಜೊತೆಗಿದ್ದರೇ ವಿನಃ ಯಾವುದೇ ಸಂಚಿನಲ್ಲಿ ಭಾಗಿಯಾಗಿಲ್ಲ' ಎಂದು ಮನವಿ ಮಾಡಿದ್ದರಿಂದ ಆತನಿಗೆ ಜಾಮೀನು ದೊರೆತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ