ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

Kannadaprabha News   | Kannada Prabha
Published : Nov 07, 2025, 05:30 AM IST
Siddaramaiah

ಸಾರಾಂಶ

ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಕುರಿತು ಚರ್ಚಿಸಲು ತುರ್ತು ಭೇಟಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.

ಬೆಂಗಳೂರು : ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಕುರಿತು ಚರ್ಚಿಸಲು ತುರ್ತು ಭೇಟಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಸಮಸ್ಯೆಗಳಿಗೆ ಮೂಲಭೂತವಾಗಿ ಕೇಂದ್ರ ಸರ್ಕಾರವೇ ಪರಿಹಾರ ಒದಗಿಸಬೇಕು. ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯ ಮತ್ತು ಮೌಲ್ಯವರ್ಧಿತ ದರ) ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಹೀಗಾಗಿ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಪ್ರತಿ ಟನ್‌ಗೆ 3,500 ರು. ನಿಗದಿ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?:

ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ಮುಖ್ಯವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬಿಗೆ ಟನ್‌ಗೆ 3,500 ರು. ನಿಗದಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ.ಬೆನ್ನಲ್ಲೇ ರಾಜ್ಯ ಸರ್ಕಾರ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಚರ್ಚೆ ನಡೆಸುತ್ತಿದೆ.

ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸಕ್ಕರೆ ಕಾರ್ಖಾನೆಗಳಿಗೆ ಶೇ.11.25 ರಷ್ಟು ರಿಕವರಿ ಇರುವ ಕಬ್ಬಿಗೆ ಪ್ರತಿ ಟನ್‌ಗೆ 3,200 ರು. ಹಾಗೂ ಶೇ.10.25ರಷ್ಟು ರಿಕವರಿ ಇರುವ ಕಬ್ಬಿಗೆ 3,100 ರು. (ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ) ನೀಡುವಂತೆ ಸೂಚಿಸಲಾಗಿದೆ. ಜತೆಗೆ ಡಿಜಿಟಲ್‌ ತೂಕದ ವ್ಯವಸ್ಥೆ ಸೇರಿ ಹಲವು ಕ್ರಮ ಕೈಗೊಂಡರೂ ರೈತರು ಸಮಾಧಾನಗೊಂಡಿಲ್ಲ.ಎಫ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಶೇ.10.25 ರಷ್ಟು ರಿಕವರಿ ದರ ಹೊಂದಿರುವ ಪ್ರತಿ ಕ್ವಿಂಟಲ್‌ಗೆ 355 ರು. (3,550 ಟನ್‌) ನಿಗದಿ ಮಾಡಿದೆ. ಸಾಗಣೆ ಮತ್ತು ಕಟಾವು ವೆಚ್ಚ ಪ್ರತಿ ಟನ್‌ಗೆ 800 ರಿಂದ 900 ರು. ಹೋಗಿ ರೈತರಿಗೆ ಪ್ರತಿ ಟನ್‌ಗೆ 2,600 ರಿಂದ 3,000 ರು. ಮಾತ್ರ ತಲುಪುತ್ತದೆ. ರಸಗೊಬ್ಬರ, ಕೂಲಿ, ನೀರಾವರಿ, ಸಾಗಣೆ ವೆಚ್ಚ ಎಲ್ಲವುಗಳಿಂದ ಕಬ್ಬು ಬೆಳೆ ಲಾಭದಾಯಕವಲ್ಲದ ಸ್ಥಿತಿಗೆ ತಲುಪಿದೆ.

ಇದರ ಜತೆ ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ನಿರ್ಬಂಧಿಸಲಾಗಿದೆ. ಎಥೆನಾಲ್‌ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ನಮ್ಮ ರೈತರು ಕಟಾವು, ಸಾಗಣೆ ವೆಚ್ಚ ಕಡಿತ ಹೊರತುಪಡಿಸಿ ಪ್ರತಿ ಟನ್‌ಗೆ 3,500 ರು. ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ಈಗಿನ ಬೆಲೆ ಏರಿಕೆಗಳಲ್ಲಿ ಅದು ಕನಿಷ್ಠ ಅನಿವಾರ್ಯದ ಮೊತ್ತ. ಹೀಗಾಗಿ ಪ್ರತಿ ಟನ್‌ಗೆ 3,500 ರು. ನಿಗದಿ ಮಾಡಿ ತಕ್ಷಣ ಅಧಿಸೂಚನೆ ಹೊರಡಿಸಬೇಕು.ಎಫ್‌ಆರ್‌ಪಿ ಪರಿಷ್ಕರಣೆ ಮಾಡಬೇಕು. ಸಕ್ಕರೆಗೆ ಪ್ರತಿ ಕೆ.ಜಿ.ಗೆ ನಿಗದಿ ಮಾಡಿರುವ 31 ರು. ಎಂಎಸ್‌ಪಿ ದರ ಪರಿಷ್ಕೃಣೆ ಮಾಡಬೇಕು. ಹೆಚ್ಚುವರಿ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಬೇಕು. ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್‌ ಖರೀದಿ ಪ್ರಮಾಣ ಹೆಚ್ಚಳ ಮಾಡಬೇಕು. ಇವೆಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಭೇಟಿಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

ಸಿಹಿ ಸುದ್ದಿಯೋ? ಕಹಿ ಸುದ್ದಿಯೋ? ಭಾರಿ ಕುತೂಹಲ

ಬೆಂಗಳೂರು : ಟನ್‌ ಕಬ್ಬಿಗೆ 3500 ರು. ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಗ್ಗಂಟಿಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

‘ಕಬ್ಬು ಎಫ್ಆರ್‌ಪಿ (ನ್ಯಾಯ ಮತ್ತು ಮೌಲ್ಯವರ್ಧಿತ ಬೆಲೆ) ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆ ಹಾಗೂ ಎಫ್‌ಆರ್‌ಪಿ ನಿಗದಿ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೆ ತಕ್ಷಣ ಹೋಗಿ ಚರ್ಚೆ ನಡೆಸುತ್ತೇನೆ ಎಂದೂ ಅವರು ಭರವಸೆ ನೀಡಿದ್ದಾರೆ. ಭೇಟಿಗೆ ಅನುಮತಿ ಕೋರಿ ಪ್ರಧಾನಿಗೆ ಪತ್ರವನ್ನೂ ಬರೆದಿದ್ದಾರೆ.

ರಾಜ್ಯದಲ್ಲಿ ಪ್ರತಿ ಟನ್‌ ಕಬ್ಬಿಗೆ ಕಟಾವು, ಸಾಗಣೆ ವೆಚ್ಚ ಹೊರತುಪಡಿ 3,500 ರು. ನಿಗದಿ ಮಾಡಬೇಕು ಎಂದು ರೈತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು 3 ಗಂಟೆ ಕಾಲ ವಿಸ್ತೃತ ಚರ್ಚೆ ನಡೆಯಿತು.ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಮೇ 6 ರಂದು ಕಬ್ಬಿನ ಎಫ್‌ಆರ್‌ಪಿ ನಿಗದಿ ಮಾಡಿದ್ದು, ಶೇ.10.25 ರಷ್ಟು ರಿಕವರಿ ಇರುವ ಪ್ರತಿ ಟನ್‌ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಸೇರಿ 3,550 ರು. ನಿಗದಿಯಾಗಿದೆ. ಈ ಮಾನದಂಡದ ಪ್ರಕಾರವೇ ರಾಜ್ಯದಲ್ಲಿ ರೈತರಿಗೆ ಕಬ್ಬಿನ ಬೆಲೆ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡದರು.

ಎಫ್‌ಆರ್‌ಪಿ ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಈಗ ಹೆಚ್ಚಳ ಮಾಡಬೇಕಾದರೆ ಕೇಂದ್ರ ಸರ್ಕಾರವೇ ಮಾಡಬೇಕು. ಈ ಬಗ್ಗೆ ಕೇಂದ್ರವನ್ನು ಒತ್ತಾಯಿಸುವುದು ಬಿಟ್ಟು ಬೀದಿಯಲ್ಲಿ ಮಲಗಿ ಬಿಜೆಪಿ ನಾಯಕರು ರಾಜಕೀಯ ನಾಟಕ ಮಾಡುತ್ತಿದ್ದಾರೆ. ಇವರ ಮರಳು ಮಾತುಗಳಿಗೆ ರೈತರು ಬಲಿಯಾಗಬಾರದು. ದಯಮಾಡಿ ಯಾವುದೇ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆ ಮಾಡಬಾರದು ಎಂದು ಮನವಿ ಮಾಡಿದರು.

ಪ್ರತಿಪಕ್ಷಗಳಿಂದ ನಾಟಕ:

ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾಹಿತಿ ಪಡೆದು ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು.ಅದರಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಶೇ.11.25 ರಿಕವರಿ ಬಂದರೆ 3,200 ರು. ಹಾಗೂ ಶೇ.10.25 ರಿಕವರಿ ಬಂದರೆ 3100 ರು. (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ, ವಿರೋಧ ಪಕ್ಷಗಳವರು ಈ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ ಎಂದರು.

ಮಹಾರಾಷ್ಟ್ರ ಮಾದರಿಗೆ ಬೇಡಿಕೆ:ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ಪ್ರತಿ ಟನ್‌ಗೆ 3,630 ರು. ನೀಡಲಾಗುತ್ತಿದೆ. ಇದೇ ಪ್ರಕಾರ ನೀಡಿ ಎಂಬುದು ಬಿಜೆಪಿಯವರ ವಾದ. ಮಹಾರಾಷ್ಟ್ರದಲ್ಲಿ ಕಬ್ಬಿನ ರಿಕವರಿ ದರ ಶೇ.13 ರಷ್ಟು ಇರುತ್ತದೆ. ಜತೆಗೆ 3,639 ರು. ಸಾಗಣೆ ಮತ್ತು ಕಟಾವು ವೆಚ್ಚ ಸೇರಿ ನೀಡಲಾಗುತ್ತದೆ. ರಾಜ್ಯದಲ್ಲಿ ಬೆಳಗಾವಿ ವ್ಯಾಪ್ತಿಯಲ್ಲಿ ಸಾಗಣೆ ಮತ್ತು ಕಟಾವು ವೆಚ್ಚವೇ ಪ್ರತಿ ಟನ್‌ಗೆ 800-900 ರು. ನೀಡಲಾಗುತ್ತದೆ. ಹೀಗಾಗಿ ಸುಮಾರು ಪ್ರತಿ ಟನ್‌ಗೆ 4,000 ರು.ಗಳಷ್ಟು ಪಾವತಿಯಾಗುತ್ತಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಸಕ್ಕರೆ ಕಾರ್ಖಾನೆಗಳು ಅಷ್ಟು ಹಣ ನೀಡುತ್ತಿಲ್ಲ ಎಂಬುದೇ ಈಗ ವಿವಾದ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈ ಬಗ್ಗೆ ಶುಕ್ರವಾರ ಬೆಳಗ್ಗೆ ಕರೆದಿರುವ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಲಾಗುವುದು. ಚರ್ಚಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಹೇಳಿದರು.

ರೈತರೊಂದಿಗೆ ಪ್ರತ್ಯೇಕ ಸಭೆ:

ಶುಕ್ರವಾರ ಮಧ್ಯಾಹ್ನ ರೈತರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಎಫ್‌ಆರ್‌ಪಿ ದರವನ್ನು ಕೇಂದ್ರವೇ ನಿಗದಿ ಮಾಡಿದೆ. ಆ ದರ ರೈತರಿಗೆ ಲಭಿಸುವಂತೆ ನೋಡಿಕೊಳ್ಳುವುದು, ರೈತರಿಗೆ ತೂಕ, ಬೆಲೆ, ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ.ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಹಾಗೂ ಕಬ್ಬು ನಿಯಂತ್ರಣಕ್ಕೆ ಸಂಬಂಧಪಟ್ಟ ಕಾಯ್ದೆಯಲ್ಲೂ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ರೈತರ ಸಮಸ್ಯೆ ಪರಿಹರಿಸಲು ಕೇಂದ್ರಕ್ಕೆ ಒತ್ತಾಯಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರದಿಂದ ತೀವ್ರ ಅನ್ಯಾಯ :

ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಹೊಂದಿರುತ್ತದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಿಂದಲೂ 2017-18 ರವರೆಗೆ ರಿಕವರಿ ಪ್ರತಿ ಕ್ವಿಂಟಲ್‌ಗೆ ಶೇ. 9.5 ರಷ್ಟು ನಿಗದಿಪಡಿಸಲಾಗುತ್ತಿತ್ತು. 2018-19 ನಿಂದ 2021-22 ರವರೆಗೆ ಅದನ್ನು ಶೇ.10ಕ್ಕೆ ಹೆಚ್ಚಿಸಲಾಯಿತು. 2022-23 ರಿಂದ ಈಚೆಗೆ ಎಫ್.ಆರ್.ಪಿ.ಯನ್ನು ಶೇ.10.25ಕ್ಕೆ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ.ಇನ್ನು ಸಕ್ಕರೆಗೆ 2019 ರಲ್ಲಿ ಪ್ರತಿ ಕೆಜಿಗೆ ನಿಗದಿ ಮಾಡಿರುವ 31 ರು. ಎಂಎಸ್‌ಪಿ ಈವರೆಗೆ ಪರಿಷ್ಕರಣೆ ಮಾಡಿಲ್ಲ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ.

ಇದಷ್ಟೇ ಅಲ್ಲದೆ, ಎಥೆನಾಲ್ ವಿಚಾರದಲ್ಲೂ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್‌ ಉತ್ಪಾದನಾ ಸಾಮರ್ಥ್ಯ ಇದ್ದರೂ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು (ಶೇ.17) ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಅದೇ ಗುಜರಾತ್‌ನಲ್ಲಿ ಉತ್ಪಾದನೆಯಾಗುವ ಶೇ.75 ರಷ್ಟು ಎಥೆನಾಲ್‌ ತೈಲ ಕಂಪೆನಿಗಳಿಗೆ ಖರೀದಿಸಲು ಸೂಚಿಸಿದೆ. ಈ ಅನ್ಯಾಯವನ್ನು ರಾಜ್ಯ ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಶ್ನಿಸಬೇಕಲ್ಲವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.ಪ್ರಧಾನಿ ಮೋದಿ ಅವರು ಭೇಟಿಗೆ ಅವಕಾಶ ನೀಡಿದರೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯದ ರೈತರ ಪರ ನ್ಯಾಯ ಕೇಳಲಾಗುವುದು ಎಂದರು.

ರಾಜ್ಯದಿಂದ ಸಲಹಾ ದರ ನಿಗದಿ ಇಲ್ಲ: ಸಿಎಂಎಫ್ಆರ್‌ಪಿ ಜತೆಗೆ ರಾಜ್ಯ ಸಲಹಾ ದರ (ಎಸ್‌ಎಪಿ) ನಿಗದಿ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. 2013-14ರಲ್ಲಿ ನಾನೇ ಒಂದು ಬಾರಿಗೆ ಸೀಮಿತವಾಗಿ ರಾಜ್ಯದಿಂದ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ಹಣ ನೀಡಿದ್ದೆ. ಆದರೆ ಪ್ರತಿ ವರ್ಷ ನೀಡಲು ನಿಯಮವಿಲ್ಲ. ಬಸವರಾಜ ಬೊಮ್ಮಾಯಿ ಅವರು ಚುನಾವಣೆಗಾಗಿ ಪ್ರತಿ ಟನ್‌ಗೆ 150 ರು. ಘೋಷಿಸಿದರೂ ಅದನ್ನು ನೀಡಲಿಲ್ಲ.

ಈಗ ರೈತರಿಗೆ ಸಹಾಯ ಮಾಡುವ ಬಗ್ಗೆ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸರ್ಕಾರದಿಂದ ಸಂಧಾನ:

ಗಡುವು 2 ದಿನ ಮುಂದಕ್ಕೆ

ಬೆಳಗಾವಿ : ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲರಿಂದ ಗುರುವಾರ ಪ್ರತಿಭಟನಾನಿರತರ ಮನವೊಲಿಕೆ ಯತ್ನ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿ, ರೈತರ ಮನವೊಲಿಕೆಗೆ ಯತ್ನಿಸಿದ ಸಚಿವರು, ಬೇಡಿಕೆ ಈಡೇರಿಕೆಗೆ ಎರಡು ದಿನಗಳ ಕಾಲಾವಕಾಶ ಕೋರಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರತಿಭಟನಾಕಾರರು, ಶುಕ್ರವಾರ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯನ್ನು ಎರಡು ದಿನ ಮುಂದೂಡಿದ್ದಾರೆ.

ಸಚಿವ ಸಂಪುಟ ಸಭೆ ಹಾಗೂ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಬೆಳಗಾವಿಗೆ ಆಗಮಿಸಿದ ಸಚಿವರು, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹಾಗೂ ಸಕ್ಕರೆ ಆಯುಕ್ತರ ಜೊತೆ ಸಭೆ ನಡೆಸಿದರು. ಬಳಿಕ, ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ರೈತರ ಆಕ್ರೋಶದ ನಡುವೆಯೇ ಮಾತು ಆರಂಭಿಸಿದ ಸಚಿವರು, ದುಡುಕಬೇಡಿ, ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಮುಖ್ಯಮಂತ್ರಿ ನನಗೆ ಸಂದೇಶ ನೀಡಿದ್ದು, ಎರಡು ದಿನ ಸಮಯಾವಕಾಶ ಕೋರಿದ್ದಾರೆ. ಪ್ರತಿಭಟನೆ ನಿಲ್ಲಿಸಿ ಎಂದು ಮನವಿ ಮಾಡಿದರು.ನಾನು ನಿಮ್ಮ ಸಲುವಾಗಿ ಸಂಪುಟ ಸಭೆ ಬಿಟ್ಟು ಬಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ನಂಬಿ ನಾನು ತಡವಾಗಿ ಬಂದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಮನ್ವಯದ ಕೊರತೆಯಿಂದಾಗಿ ಹೀಗಾಗಿದೆ. ಸಕ್ಕರೆ ಸಚಿವನಾಗಿ ಬೆಳಗಾವಿ ವಿಚಾರದಲ್ಲಿ ನಾನು ಕೇಂದ್ರದ ಮೇಲೆ ಅವಲಂಬಿತವಾಗಿ ಕಾರ್ಯ ಮಾಡಬೇಕು ಎಂದರು.

ರೈತರ ಬಗ್ಗೆ ನಮಗೂ ಕಾಳಜಿ ಇದೆ. 27 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನಾನು ಸಾಲ ಕೊಟ್ಟಿದ್ದೇನೆ. 34 ಸಹಕಾರಿ ಸಕ್ಕರೆ ಕಾರ್ಖಾನೆಗಳು ಬಂದ್ ಆಗಿದ್ದು, ಕೇವಲ 12‌ ಮಾತ್ರ ಉಳಿದಿವೆ. ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ ಮಾಡುತ್ತೇವೆ. ಖಾಸಗಿ ಕಾರ್ಖಾನೆ ಬಂದ್ ಮಾಡುತ್ತೇವೆ. ಜಿಲ್ಲಾಧಿಕಾರಿ ಈಗಾಗಲೇ ₹200 ಘೋಷಣೆ ಮಾಡಿದ್ದಾರೆ. ನಿಮ್ಮ ಇತರ ಬೇಡಿಕೆ ಹಾಗೂ ಎರಡು ನೂರು ರುಪಾಯಿ ಬಗ್ಗೆ ಭಿನ್ನಾಭಿಪ್ರಾಯವಿದೆ. ನಿಮಗೆ ಒಳ್ಳೆಯ ದರವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಭಾನುವಾರ ಸಂಜೆ 7ರ ಡೆಡ್‌ಲೈನ್‌ ನೀಡಿದರು. ಅಲ್ಲದೆ, ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಹೆದ್ದಾರಿ ತಡೆಯನ್ನು ಎರಡು ದಿನ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Kerala Bus crash: ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಭೀಕರ ಅಪಘಾತ: ಶೈನಿಂಗ್ ಬೋರ್ಡ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ!
Karnataka Latest News Live: Yash Toxic Trailer Launch - ಯಶ್ ಸಿನಿಮಾ 'ಟಾಕ್ಸಿಕ್' ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ ಚೆಲುವೆ ಹುಮಾ ಖುರೇಷಿ!