
ಮೈಸೂರು(ಫೆ.10): ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ರಸ್ತೆಗಿಳಿದು ಹೋರಾಟ ನಡೆಸುವುದಾಗಿ ತಿಳಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಮೂಲಕ ಮತ್ತೆ ಅಹಿಂದ ಚಳವಳಿ ನಡೆಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ಜಿಲ್ಲೆಯ ಸುತ್ತೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮೀಸಲಾತಿ ವಿರುದ್ಧ ಇದ್ದು, ಖಾಸಗೀಕರಣದ ಹೆಸರಿನಲ್ಲಿ ಮೀಸಲಾತಿ ಕಿತ್ತುಕೊಳ್ಳುತ್ತಿವೆ. ಅಂತಹ ಪರಿಸ್ಥಿತಿ ಬಂದರೆ ಹಿಂದುಳಿದವರು ಹಾಗೂ ದಲಿತರ ಪರವಾಗಿ ಹೋರಾಟ ಮಾಡುವುದಾಗಿ ಹೇಳಿದರು.
ಇದೇ ವೇಳೆ, ಕುರುಬರಿರಲಿ ಅಥವಾ ಯಾರೇ ಇರಲಿ ಅವರಿಗೆ ಸಂವಿಧಾನಾತ್ಮಕವಾಗಿ ಮೀಸಲಾತಿ ಸಿಗುವುದಿದ್ದರೆ ಸಿಗಲಿ. ಕುರುಬರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವುದಕ್ಕೆ ನನ್ನ ವಿರೋಧ ಇಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಬೆಂಬಲ ಒಬ್ಬರ ತೀರ್ಮಾನವಲ್ಲ:
ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಮೋದಿಗೆ ಬೆಂಬಲ ಎಂಬ ಕುರುಬ ಸಮಾಜದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಇದು ಯಾರೋ ಒಬ್ಬರು ಮಾಡುವ ತೀರ್ಮಾನವಲ್ಲ. ಯಾವುದೋ ಸಭೆ ಸಮಾರಂಭದಲ್ಲಿ ಆಗುವ ತೀರ್ಮಾನ ಅಲ್ಲ. ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ಯಾರ ಪರ, ಯಾರ ವಿರುದ್ಧ ಎಂಬುದನ್ನು ಜನ ತೀರ್ಪು ನೀಡುತ್ತಾರೆ ಎಂದು ತಿರುಗೇಟು ನೀಡಿದರು. ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ನಾಯಕತ್ವ ವಹಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾಯಕರು ಜನರ ಮಧ್ಯದಿಂದ ಹುಟ್ಟಿಬರಬೇಕು. ತಾನಾಗೆ ನಾನೊಬ್ಬ ನಾಯಕ ಎಂದು ಹೇಳಿಕೊಳ್ಳೋದಲ್ಲ. ಜನರು ಯಾರು ನಾಯಕ ಅನ್ನೋದನ್ನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ