ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ!

By Kannadaprabha News  |  First Published Feb 9, 2021, 8:06 AM IST

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ| ಹೊಸ ಜಿಲ್ಲೆ ಉದಯ| ಅಸಮಾಧಾನಗೊಂಡಿದ್ದ ಸಚಿವ ಆನಂದ್‌ ಸಿಂಗ್‌ಗೆ ಕಡೆಗೂ ಸಿಹಿಸುದ್ದಿ| ಕೊಟ್ಟಮಾತು ಉಳಿಸಿಕೊಂಡ ಯಡಿಯೂರಪ್ಪ| ಬಳ್ಳಾರಿ ಜಿಲ್ಲೆ ವಿಭಜಿಸಿ ಬಳ್ಳಾರಿ, ವಿಜಯನಗರ ಜಿಲ್ಲೆ ರಚನೆ| ರಾಜ್ಯ ಸರ್ಕಾರದಿಂದ ಅಂತಿಮ ಅಧಿಸೂಚನೆ ಪ್ರಕಟ


ಬೆಂಗಳೂರು(ಫೆ.09): ಬಳ್ಳಾರಿ ಜಿಲ್ಲೆ ವಿಭಜನೆಗೊಂಡು ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ತನ್ಮೂಲಕ ಖಾತೆ ಬದಲಾವಣೆಯಿಂದಾಗಿ ಅಸಮಾಧಾನಗೊಂಡಿದ್ದ ಹಜ್‌ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌ ಅವರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ.

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಮಾಡಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ಅಂತಿಮವಾಗಿ ಸೋಮವಾರ ಅಧಿಸೂಚನೆ ಹೊರಡಿಸಿದೆ. ಹಾಲಿ ಇದ್ದ ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸುವ ಮೂಲಕ ವಿಜಯನಗರ ಜಿಲ್ಲೆಯ ಗಡಿಗಳನ್ನು ಗುರುತಿಸಿ ಆದೇಶಿಸಲಾಗಿದೆ.

Latest Videos

undefined

ಈ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹಿಂದೆ ಉಪಚುನಾವಣೆ ವೇಳೆ ಹಾಗೂ ನಂತರದ ದಿನಗಳಲ್ಲಿ ನೀಡಿದ ಮಾತನ್ನು ಉಳಿಸಿಕೊಂಡಂತಾಗಿದೆ. ಆನಂದ್‌ ಸಿಂಗ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಬರುವ ವೇಳೆ ನೂತನ ಜಿಲ್ಲೆ ರಚನೆ ಮಾಡುವ ಬಗ್ಗೆ ಷರತ್ತನ್ನೂ ವಿಧಿಸಿದ್ದರು. ಅದು ಈಡೇರುವುದು ವಿಳಂಬವಾದ ಹಿನ್ನೆಲೆಯಲ್ಲಿ ಕೆಲದಿನಗಳ ಕಾಲ ಮುನಿಸಿಕೊಂಡಿದ್ದೂ ಉಂಟು. ಒಂದು ಹಂತದಲ್ಲಿ ಖಾತೆಗಳ ಹಂಚಿಕೆಯನ್ನೇ ಮುಂದಿಟ್ಟುಕೊಂಡು ರಾಜೀನಾಮೆ ನೀಡುವ ಉದ್ದೇಶವನ್ನೂ ಹೊಂದಿದ್ದರು. ಆ ವೇಳೆಯೇ ನೂತನ ಜಿಲ್ಲೆಯ ಅಧಿಸೂಚನೆಯನ್ನು ಶೀಘ್ರ ಹೊರಡಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡುವ ಮೂಲಕ ಸಮಾಧಾನಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರವು ಸಹಮತ ವ್ಯಕ್ತಪಡಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸಂಬಂಧ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಜನರಿಂದ ದೊರೆತ ಪ್ರತಿಕ್ರಿಯೆಗಳನ್ನು ಆಧರಿಸಿ ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ವಿಜಯನಗರ ಜಿಲ್ಲೆ ಎಂದು ನೂತನ ಜಿಲ್ಲೆಯಾಗಿ ರಚಿಸಲಾಗುತ್ತದೆ ಎಂದು ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿ ಸೇರಿ ಆರು ತಾಲೂಕುಗಳು ಇರಲಿವೆ. ಈ ಪೈಕಿ ಕೊಟ್ಟೂರು ತಾಲೂಕಾಗಿ ಸೇರ್ಪಡೆಯಾಗಿದೆ. ಹೊಸಪೇಟೆ ತಾಲೂಕು ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾಗಿರಲಿದೆ.

ಇನ್ನು ವಿಭಜಿತ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಹಾಗೂ ಸಂಡೂರು ಸೇರಿ ಐದು ತಾಲೂಕುಗಳಿರಲಿವೆ. ಈ ಪೈಕಿ ಕುರುಗೋಡು ನೂತನ ತಾಲೂಕಾಗಿ ಸೇರ್ಪಡೆಯಾಗಿದೆ. ಬಳ್ಳಾರಿ ಕೇಂದ್ರ ಕಾರ್ಯಸ್ಥಾನವಾಗಿರಲಿದೆ.

ವಿಜಯನಗರ ಜಿಲ್ಲೆಯ ಗಡಿ ಭಾಗಗಳನ್ನು ಗುರುತಿಸಲಾಗಿದ್ದು, ಪೂರ್ವ ಭಾಗದಲ್ಲಿ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಿರಲಿವೆ. ಪಶ್ಚಿಮದಲ್ಲಿ ಗದಗ ಮತ್ತು ಹಾವೇರಿ ಜಿಲ್ಲೆಗಳಿವೆ. ಉತ್ತರ ದಿಕ್ಕಿನಲ್ಲಿ ಕೊಪ್ಪಳ, ದಕ್ಷಿಣ ದಿಕ್ಕಿನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲೂಕುಗಳಿರಲಿವೆ. ಇನ್ನು, ಬಳ್ಳಾರಿ ಜಿಲ್ಲೆಯ ಸರಹದ್ದುಗಳಲ್ಲಿ ಸಹ ಕೆಲ ಬದಲಾಗಿದ್ದು, ಪೂರ್ವದಲ್ಲಿ ಆಂಧ್ರಪ್ರದೇಶ ರಾಜ್ಯ, ಪಶ್ಚಿಮ ಭಾಗದಲ್ಲಿ ನೂತನವಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆ, ಉತ್ತರದಲ್ಲಿ ರಾಯಚೂರು ಮತ್ತು ದಕ್ಷಿಣ ಭಾಗದಲ್ಲಿ ಆಂಧ್ರಪ್ರದೇಶ ರಾಜ್ಯ ನೆರೆಹೊರೆಯ ಭಾಗಗಳಾಗಿವೆ.

ಹೊಸ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ನಕ್ಷೆ ಸಿದ್ಧಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ, ಕಂದಾಯ ವಿಭಾಗಗಳು, ಉಪವಿಭಾಗಗಳನ್ನು ಆರಂಭಿಸಲು ಮತ್ತು ನೂತನ ಜಿಲ್ಲೆಗೆ ಅಗತ್ಯ ಅನುದಾನ, ಕಾನೂನಾತ್ಮಕ ವಿಚಾರಗಳ ಪ್ರಕ್ರಿಯೆಗಳು ನಡೆಯುತ್ತಿವೆ.

ವಿಜಯನಗರ ಜಿಲ್ಲೆಯ ತಾಲೂಕುಗಳು

ಹೊಸಪೇಟೆ

ಕೂಡ್ಲಿಗಿ

ಹಗರಿಬೊಮ್ಮನಹಳ್ಳಿ

ಕೊಟ್ಟೂರು

ಹೂವಿನಹಡಗಲಿ

ಹರಪನಹಳ್ಳಿ

ಬಳ್ಳಾರಿ ಜಿಲ್ಲೆಯ ತಾಲೂಕುಗಳು

ಬಳ್ಳಾರಿ

ಕುರುಗೋಡು

ಸಿರಗುಪ್ಪ

ಕಂಪ್ಲಿ

ಸಂಡೂರು

click me!