ಅಮುಲ್- ಕೆಎಂಎಫ್ ವಿಲೀನಕ್ಕೆ ವಿರೋಧ ಬಂದಿದ್ದರಿಂದ ಹಿಂಬಾಗಿಲ ಪ್ರವೇಶ, ಅಮುಲ್ ಉತ್ಪನ್ನ ಖರೀದಿಸಲ್ಲ ಎಂದು ಕನ್ನಡಿಗರು ಪ್ರತಿಜ್ಞೆ ಮಾಡುವಂತೆ ಸಿದ್ದರಾಮಯ್ಯ ಕರೆ.
ಬೆಂಗಳೂರು(ಏ.08): ನಾಡಿನ ರೈತರಿಗೆ ಸಂಜೀವಿನಿಯಾಗಿರುವ ‘ನಂದಿನಿ’ಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಆದ್ದರಿಂದ ‘ಅಮುಲ್’ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಕನ್ನಡಿಗರು ಪ್ರತಿಜ್ಞೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜ್ಯ ಬಿಜೆಪಿಯ ದುರ್ಬಲ ನಾಯಕತ್ವದಿಂದಾಗಿ ನಾಡಿನ ಲಕ್ಷಾಂತರ ಹೈನುಗಾರಿಕೆ ಕುಟುಂಬಗಳ ಜೀವನಾಧಾರವಾಗಿರುವ ಕೆಎಂಎಫ್ ಅನ್ನು ಬಲಿ ಪಡೆಯುವ ಪ್ರಯತ್ನಗಳು ಆರಂಭವಾಗಿವೆ. ಇದಕ್ಕೆ ಮೋದಿ ಮತ್ತು ಅಮಿತ್ ಶಾ ನೇರ ಕಾರಣವಾಗಿದ್ದಾರೆ. ಗುಜರಾತ್ ಮೂಲದ ‘ಅಮುಲ್’ನ ಹಾಲು ಮತ್ತು ಮೊಸರು ಖರೀದಿ ಮಾಡುವುದಿಲ್ಲ ಎಂದು ಕನ್ನಡಿಗರು ಪ್ರತಿಜ್ಞೆ ಮಾಡಬೇಕು. ನಾವು ಅಮುಲ್‌ಗೆ ಅವಕಾಶ ನೀಡಿರಲಿಲ್ಲ. ಆದರೆ ಈಗ ಬಿಜೆಪಿ ಕೆಂಪು ಕಂಬಳಿ ಹಾಸಿ ಸ್ವಾಗತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಂಎಫ್‌ಗೆ ಸಡ್ಡು: ರಾಜ್ಯದಲ್ಲಿ ಅಮುಲ್ ಹೋಮ್ ಡೆಲಿವರಿ!
ರಾಜ್ಯದಲ್ಲಿ ನಮ್ಮ ಹಿರಿಯರು ಕಟ್ಟಿಬೆಳೆಸಿದ್ದ ಬ್ಯಾಂಕ್‌ಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ನಂದಿನಿ ಮೇಲೆ ಕಣ್ಣು ಹಾಕಿದ್ದಾರೆ. ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಅಮಿತ್ ಶಾ ಪ್ರಸ್ತಾಪಕ್ಕೆ ನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾದ ಬಳಿಕ ಹಿಂಬಾಗಿಲಿನಿಂದ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಕೆಲ ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಕೆಎಎಫ್ ವಿರುದ್ಧ ಷಡ್ಯಂತ್ರವೇ?:
ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್‌ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲಿಗೆ ಬದಲಾಗಿ ಕೇವಲ 71 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ನಮ್ಮ ಸರ್ಕಾರ ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರುಪಾಯಿಗೆ ಹೆಚ್ಚಿಸಿತ್ತು. ಇದರಿಂದಾಗಿ 2012-13ರಲ್ಲಿ 45 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದದ್ದು 2017ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು? ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕತ್ವ ದುರ್ಬಲ ಆಗಿರುವುದರಿಂದ ಬೆಳಗಾವಿ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ಆಡಳಿತ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಗುಜರಾತ್, ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದ್ದಾರೆ.