
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಂಡಿಸಿದ ಮೊದಲ ಬಜೆಟ್ನಲ್ಲಿ ಹಿಂದಿನ ಸರ್ಕಾರದ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯೂ ರೈತರ ಸಾಲಮನ್ನಾ ನೆಪವನ್ನು ಮುಂದೊಡ್ಡಿ ಸಿದ್ದರಾಮಯ್ಯ ಘೋಷಿಸಿದ್ದ ಹಲವು ಯೋಜನೆಗಳನ್ನು ಆರಂಭಿಸುವ ಗೋಜಿಗೆ ಹೋಗುವುದಿಲ್ಲ ಎಂಬ ಆಶಂಕೆ ಕಾಂಗ್ರೆಸ್ ವಲಯವನ್ನು ಕಾಡುತ್ತಿದೆ.
2018-19ನೇ ಸಾಲಿನ ಸಿದ್ದರಾಮಯ್ಯ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳನ್ನೂ ಮುಂದುವರೆಸುತ್ತಿರುವುದಾಗಿ ಜುಲೈ 5, 2018ರ ಬಜೆಟ್ ಭಾಷಣದಲ್ಲಿ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ವಾಸ್ತವದಲ್ಲಿ ಈ ಯೋಜನೆಗಳು ಸ್ಧಗಿತಗೊಂಡಿದ್ದವು. ಈ ಬಾರಿಯೂ ಕಾಂಗ್ರೆಸ್ ಸಚಿವರು ಇಲಾಖೆಗಳ ಸಭೆ ವೇಳೆ ಈ ಕಾರ್ಯಕ್ರಮಗಳನ್ನು ಮರು ಆರಂಭಿಸಬೇಕು ಎಂಬ ಒತ್ತಡ ಹಾಕಿದರೂ, ಒಂದೇ ಕಂತಿನಲ್ಲಿ ರೈತರ ಸಾಲ ಮನ್ನಾ ಮಾಡಬೇಕಿರುವ ಕಾರಣ ಕಷ್ಟವಿದೆ. ಆದರೆ, ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಆದರೆ, ಸಾಲಮನ್ನಾದ ಒತ್ತಡ ತೀವ್ರವಿರುವ ಕಾರಣ ಈ ಯೋಜನೆಗಳಿಗೆ ಮರು ಚಾಲನೆ ನೀಡುವ ಸ್ಥಿತಿ ಇಲ್ಲ ಎಂದೇ ಕಾಂಗ್ರೆಸ್ ನಾಯಕರು ವ್ಯಾಖ್ಯಾನಿಸುತ್ತಾರೆ.
ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳಾದ ‘ಪಶುಭಾಗ್ಯ’, ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ, ಮಕ್ಕಳಿಗೆ ಸೈಕಲ್ ವಿತರಣೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ ಬಸ್ ಪ್ರಯಾಣದಲ್ಲಿ ರಿಯಾಯಿತಿ ಕಲ್ಪಿಸಲು ‘ಇಂದಿರಾ ಪಾಸು’ ವಿತರಣೆ, ಹಿಂದುಳಿದ ವರ್ಗಗಳ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಭಾಗ್ಯ, ಶಿಕ್ಷಣ ಗುಣಮಟ್ಟವೃದ್ಧಿಸುವ ‘ಶಿಕ್ಷಣ ಕಿರಣ’, ಅಲ್ಲದೆ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ‘ರೈತ ಬೆಳಕು’ ಮೂಲಕ ಬರ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ 5 ರಿಂದ 10 ಸಾವಿರ ರು. ನೇರ ವರ್ಗಾವಣೆ ಮಾಡುವ ಯೋಜನೆ ಸೇರಿದಂತೆ ಸಾಲು-ಸಾಲು ಘೋಷಣೆಗಳನ್ನು ಕೈ ಬಿಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಹಿಂದಿನ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಬಾರದು ಎಂದು ಹಿಂದಿನ ಸಮನ್ವಯ ಸಮಿತಿ ಸಭೆ ಸೇರಿದಂತೆ ಹಲವು ಸಭೆಗಳಲ್ಲಿ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ರೈತರ ಕೃಷಿ ಸಾಲ ಮನ್ನಾ ಯೋಜನೆಗೆ ಹಣ ಹೊಂದಿಸಲು ಕೆಲವು ಯೋಜನೆಗಳನ್ನು ಕೈ ಬಿಡಬೇಕಾಗಿದೆ ಎಂದು ಮನವೊಲಿಸಲು ಯತ್ನಿಸಿದರು ಎನ್ನಲಾಗಿದೆ.
ಹೀಗಾಗಿ ಗುರುವಾರ ನಡೆಯಲಿರುವ ಜಂಟಿ ಶಾಸಕಾಂಗ ಫಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಈ ಕಾರ್ಯಕ್ರಮಗಳ ಜಾರಿಗೆ ಮತ್ತೆ ಒತ್ತಾಯಿಸಲಿದ್ದಾರೆ ಎನ್ನಾಗಿದೆ. ಈ ಒತ್ತಡಕ್ಕೆ ಸಿಎಂ ಮಣಿಯುವರೇ ಎಂಬುದನ್ನು ಕಾದು ನೋಡಬೇಕು.
ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯವಿಲ್ಲ: ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿ, ಸತತ ಪತ್ರ ವ್ಯವಹಾರ ಹಾಗೂ ಬಹಿರಂಗ ಸಮಾವೇಶಗಳಲ್ಲಿ ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಮಾತ್ರ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ 2018ರ ಫೆ.16ರ ಸಿದ್ದರಾಮಯ್ಯ ಘೋಷಣೆ ಕೈ ಬಿಟ್ಟಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನೀಡುತ್ತಿದ್ದ ‘ಸೈಕಲ್ ಭಾಗ್ಯ’ ಈ ವರ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದ ಟೆಂಡರ್ ಗೊಂದಲದ ನೆಪ ನೀಡಿ ಈ ವರ್ಷ ಸೈಕಲ್ ವಿತರಣೆ ಸ್ಥಗಿತಗೊಳಿಸಲಾಗಿದೆ.
ರೈತ ಬೆಳಕು ಯೋಜನೆ ಅನುಮಾನ: ಒಣ ಭೂಮಿ, ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದ 70 ಲಕ್ಷ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಲು ಸಿದ್ದರಾಮಯ್ಯ 5 ಸಾವಿರ ರು.ಗಳಿಂದ 10 ಸಾವಿರ ರು.ಗಳನ್ನು ನೇರವಾಗಿ ರೈತರ ಖಾತೆಗೆ ಹಾಕುವ ರೈತ ಬೆಳಕು ಯೋಜನೆ ಘೋಷಿಸಿದ್ದರು. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲೇ ತಿಲಾಂಜಲಿ ಇಡಲಾಗಿದ್ದು, ಮುಂದಿನ ಬಜೆಟ್‌ನಲ್ಲೂ ಮುಂದುವರೆಸುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.
ಉಚಿತ ಬಸ್ ಪಾಸು, ಇಂದಿರಾ ಪಾಸ್ ಇಲ್ಲ: ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸ್ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಈ ಯೋಜನೆ ಜಾರಿಗೆ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳಿಂದ ಸತತ ಒತ್ತಾಯ ಕೇಳಿ ಬಂದರೂ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಪಾಸು ವಿತರಣೆ ಮಾಡಿಲ್ಲ. ಎಸ್ಸಿ-ಎಸ್‌ಟಿಗೆ ಮಾತ್ರವೇ ಉಚಿತ ಪಾಸ್ ವಿತರಣೆ ಮಾಡಲಾಯಿತು. ಜತೆಗೆ ಬೆಂಗಳೂರು ನಗರ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಉಚಿತವಾಗಿ ‘ಇಂದಿರಾ ಪಾಸು’ ನೀಡುವ ಯೋಜನೆಯನ್ನು ಕೈ ಬಿಡಲಾಗಿದೆ.
‘ಪಶುಭಾಗ್ಯ’ ಯೋಜನೆಗೆ ಕೊಕ್ಕೆ:
2015-16ರಲ್ಲಿ ಹಿಂದಿನ ಸರ್ಕಾರ ಜಾತಿಗೆ ತಂದಿದ್ದ ಮಹತ್ವದ ಯೋಜನೆ ‘ಪಶುಭಾಗ್ಯ’ ಯೋಜನೆಯನ್ನು 2018ರ ಜೂನ್‌ನಿಂದ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಅಲ್ಲದೆ, ಪ್ರಸಕ್ತ ವರ್ಷದಿಂದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಎಲ್ಲಾ ತಹಸೀಲ್ದಾರ್ ಕಚೇರಿಗಳ ಎದುರು ನೋಟಿಸ್ ಅಂಟಿಸಲಾಗಿದೆ. ಗ್ರಾಮೀಣ ಭಾಗದ ಅತಿ ಸಣ್ಣ ರೈತರು, ಸಣ್ಣ ರೈತರು, ಕೂಲಿ ಕಾರ್ಮಿಕರು, ವಿಧವೆಯರು, ದೇವದಾಸಿಯರಿಗೆ 145 ಕೋಟಿ ರು. ವೆಚ್ಚದಲ್ಲಿ 59,193 ಫಲಾನುಭವಿಗಳಿಗೆ ಜಾನುವಾರು ಘಟಕವನ್ನು ಮೊದಲ ವರ್ಷ ನೀಡಲಾಗಿತ್ತು. ಆದರೆ, ಕುಮಾರಸ್ವಾಮಿ ಅವರ ಸರ್ಕಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ.
ಸೂರ್ಯಜ್ಯೋತಿ, ಶಿಕ್ಷಣ ಕಿರಣ ವಿಫಲ:
ಪರಿಶಿಷ್ಟಜಾತಿ ಹಾಗೂ ಪಂಗಡದ ರೈತರಿಗೆ ಬೋರ್‌ವೆಲ್ ಕೊರೆಸಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡುವ ‘ಸೂರ್ಯ ಜ್ಯೋತಿ ರೈತರ ಬಾಳಿನ ಪರಂಜ್ಯೋತಿ’ ಯೋಜನೆಗೆ ಅನುದಾನ ಬಿಡುಗಡೆ ವಿಳಂಬದಿಂದಾಗಿ ಅನುಷ್ಠಾನಗೊಂಡಿಲ್ಲ. ರೈತರ ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹಿಸುವ ‘ರೈತ ಸೂರ್ಯ’ ಯೋಜನೆಗೆ ಪ್ರಾಮುಖ್ಯತೆ ನೀಡಿಲ್ಲ. ಶಾಲಾ-ಕಾಲೇಜುಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವುದು ಹಾಗೂ ಶಿಕ್ಷಣದ ಗುಣಮಟ್ಟಹೆಚ್ಚಿಸಲು ಶಿಕ್ಷಕರ ಹಾಜರಾತಿ ಬಯೋಮೆಟ್ರಿಕ್ ಮಾಡುವ ‘ಶಿಕ್ಷಣ ಕಿರಣ’ ಕಾರ್ಯಕ್ರಮವನ್ನೂ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ ಮಾಡಿಲ್ಲ.
‘ಮಡಿಲು ಕಿಟ್’ ಈ ವರ್ಷವೂ ಅನುಮಾನ:
ಹಿಂದಿನ ಸರ್ಕಾರದಲ್ಲೇ ವಿತರಣೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ತಡೆ ಬಿದ್ದಿದ್ದ ‘ಮಡಿಲು ಕಿಟ್’ ಯೋಜನೆಯನ್ನು ಕುಮಾರಸ್ವಾಮಿ ಅವರೂ ಮುಂದುವರೆಸಿಲ್ಲ. ಆರೋಗ್ಯ ಇಲಾಖೆಯು ಪ್ರಸಕ್ತ ಸಾಲಿನಲ್ಲಾದರೂ ಸೇರಿಸುವಂತೆ ಪ್ರಸ್ತಾವನೆ ಇಟ್ಟಿದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲೂ ಯೋಜನೆ ಘೋಷಿಸುವುದು ಅನುಮಾನ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಲ್ಯಾಪ್‌ಟಾಪ್ ಭಾಗ್ಯವಿಲ್ಲ:
ಹಿಂದುಳಿದ ವರ್ಗಗಳ ತಾಂತ್ರಿಕ ಶಿಕ್ಷಣದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಜತೆಗೆ ಆರ್ಥಿಕವಾಗಿ ಹಿಂದುಳಿದ ಒಬಿಸಿ ವಿದ್ಯಾರ್ಥಿಗಳಿಗೂ ನೀಡುವುದಾಗಿ ಘೋಷಿಸಿದ್ದರು. ಆದರೆ, ಒಬಿಸಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಲ್ಯಾಪ್‌ಟಾಪ್ ಭಾಗ್ಯ ಲಭ್ಯವಾಗಿಲ್ಲ.
ಸಿದ್ದು ಯೋಜನೆಗಳ ಹೆಸರು ಬದಲು!
ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ‘ಮಾತೃಪೂರ್ಣ’ ಯೋಜನೆ ಬದಲಿಗೆ ‘ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ’ ಜಾರಿಗೆ ತಂದು ಕುಮಾರಸ್ವಾಮಿ ಅನುದಾನ ನೀಡಿದ್ದಾರೆ. ಆದರೆ, ಈ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟುಲೋಪಗಳು ಉಂಟಾಗಿವೆ. ಜತೆಗೆ ಮಹಿಳೆಯರ ಸಂಚಾರಿ ಕ್ಯಾಂಟೀನ್ ‘ಸವಿ ರುಚಿ’ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಫೆ.8ರ ಬಜೆಟ್‌ನಲ್ಲೂ ಸಿದ್ದರಾಮಯ್ಯ ಸರ್ಕಾರದ ಹಲವು ಯೋಜನೆಗಳ ರೂಪರೇಷೆ ಸಿದ್ಧಪಡಿಸಿ ಹೆಸರು ಬದಲಿಸಲೂ ಸಹ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ