
ಬೆಂಗಳೂರು (ಮಾ.12): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರ ಬಗ್ಗೆ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿಯೇ ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಸಿಎಂ ಆಗುವ ಕನಸು ನುಚ್ಚು ನೂರಾಗಲಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿದ್ದಂತೆ ಅಧಿಕಾರ ಹಸ್ತಾಂತರ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಹಾಗೂ ಸಿಎಂ ಸಿದ್ದರಾಮಯ್ಯ ಬಣಗಳ ನಡುವೆ ಮಾತಿನ ಯುದ್ಧಗಳು ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಬಣದವರ ಮಾತು ಕಡಿಮೆ ಆಗಿದ್ದವು. ಆದರೆ, ಸ್ವತಃ ಡಿ.ಕೆ. ಶಿವಕುಮಾರ್ ಅವರು, ಅಧಿಕಾರ ಎಂದಿಗೂ ತಾನಾಗೇ ನಮ್ಮ ಕೈ ಸೇರುವುದಿಲ್ಲ. ಅಧಿಕಾರವನ್ನು ನಾವು ಒದ್ದು ಕಿತ್ತುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದರ ಬೆನ್ನಲ್ಲಿಯೇ ಸಿದ್ದರಾಮಯ್ಯ ಬಣದವರು ಸಿದ್ದರಾಮಯ್ಯ ಪರವಾಗಿ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಮಾತನಾಡುತ್ತಿದ್ದರು.
ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಅವರು ನಾಯಕತ್ವ ಹಸ್ತಾಂತರ ವಿಚಾರ ಬಂದಾಗ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳುತ್ತಿದ್ದರು. ಆದರೆ, ಇದೀಗ ವಿಧಾನಸಭೆಯ ಒಳಗಡೆ ಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯ ಬಣದ ಸದಸ್ಯರಿಗೆ ಆನೆ ಬಲ ಬಂದಂತಾಗಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಬಣಕ್ಕೆ ಸಿದ್ದರಾಮಯ್ಯ ಚೆಕ್‌ಮೇಟ್ ಇಟ್ಟಿದ್ದಾರೆ. ಜೊತೆಗೆ, ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಮತ್ತಷ್ಟು ರೊಚ್ಚಿಗೇಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಭಿಕ್ಷೆ ಎತ್ತಿ ಹಣ ಕೊಡಿ: ಆರ್.ಅಶೋಕ್ ಆಕ್ರೋಶ
ವಿಧಾನಸಭಾ ಅಧಿವೇಶನದಲ್ಲಿ ನಡೆದಿದ್ದೇನು?
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಬದಲಾವಣೆಯಿಲ್ಲ. ಆದರೆ ಶಾಸಕರ ಗೌರವಕ್ಕೆ ಧಕ್ಕೆಯಾಗಲ್ಲ. ಗ್ಯಾರಂಟಿ ಸಮಿತಿಯಿಂದ ಶಾಸಕರಿಗೆ ತೊಂದರೆಯಾಗಿಲ್ಲ ಎಂದರು.
ಆದರೆ, ಸಿದ್ಧರಾಮಯ್ಯ ಮಾತಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು. ಶಾಸಕರಿಗೆ ಧಕ್ಕೆಯಾಗುವ ಯಾವುದೇ ಘಟನೆ ಆಗಿಲ್ಲ ಅಂತಾರೆ, ಆದರೆ ಶಿಕಾರಿಪುರ ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಶಾಲಾಭಿವೃದ್ಧಿ ಸಮಿತಿಗೆ ಅಧ್ಯಕ್ಷರ ನೇಮಕಾತಿಗೆ ಪತ್ರ ನೀಡಿದ್ದಾರೆ. ತಾವು ಹೇಳಿದವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದಾರೆ.. ಇಂತಹ ಇಂತಹ ಘಟನೆಗಳು ಬಹಳ ನಡೆಯಲಿದೆ. ಈ ಸರ್ಕಾರ ಮಾಡಿದ ನೀತಿಯಿಂದ ಮುಂದೆ ಸಮಸ್ಯೆ ಆಗಲಿದೆ. ಈ ಸರ್ಕಾರ ಹೋಗಿ ಬೇರೆ ಸರಕಾರ ಬಂದಾಗ ಬೇರೆ ಸಮಸ್ಯೆ ಆಗಲಿದೆ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ! ಅಸಲಿ ಕಾರಣ ಇಲ್ಲಿದೆ..!
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಾವು ಹೋಗುವ ಪ್ರಶ್ನೆಯೇ ಇಲ್ಲ. ನಾವೇ ಇರುತ್ತೇವೆ. ನಾವೇ ಬರುತ್ತೇವೆ. ಹಾಗಾದರೆ ಸಿಎಂ ಆಗಿ ನೀವೇ ಇರ್ತೀರಾ ಎಂದು ಆರ್. ಅಶೋಕ್ ಕೇಳಿದರು. ಹೌದಪ್ಪಾ ನಾವೇ ಇರುತ್ತೇವೆ. ನಾನೇ 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ. ಶಾಸಕರ ಸಮಸ್ಯೆ ಏನಾದರೂ ಇದ್ದರೆ ಸಭೆ ಮಾಡಿ ಪರಿಹಾರ ಮಾಡುತ್ತೀನಿ. ಆದರೆ ಗ್ಯಾರಂಟಿ ಸಮಿತಿ ಮಾಡಬೇಡಿ ಅಂದರೆ ಕೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ