ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ: ಸಿದ್ದರಾಮಯ್ಯ ಮನವಿ

By Web Desk  |  First Published Oct 13, 2019, 2:56 PM IST

ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು | ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ| ರಾಜ್ಯದ ಅರ್ಥಿಕ ಸ್ಥಿತಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಡಿತ ಮಾಡುವ ಅಗತ್ಯ ಇಲ್ಲ ಸಿದ್ದು| 


ವಿಧಾನಸಭೆ[ಅ.13]: ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕಾಗಿ ಜಾರಿಗೊಳಿಸಿರುವ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌, ಕೃಷಿಹೊಂಡ ಸೇರಿದಂತೆ ಜನಪ್ರಿಯ ಯೋಜನೆಗಳಿಗೆ ಅನುದಾನ ಕಡಿತ ಮಾಡಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

2019-20ನೇ ಸಾಲಿನ ಕೆಳಕಂಡ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಅದನ್ನು ಕಡಿತಗೊಳಿಸಬಾರದು. ಕೆಲವು ಪ್ರದೇಶಗಳಲ್ಲಿ ಅಕ್ಕಿ ಕಡಿತ ಮಾಡಿರುವ ಮಾಹಿತಿ ಇದೆ. ರಾಜ್ಯದ ಅರ್ಥಿಕ ಸ್ಥಿತಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಡಿತ ಮಾಡುವ ಅಗತ್ಯ ಇಲ್ಲ. ಕೆಲವು ಜಿಲ್ಲೆಗಳಲ್ಲಿ ರಾಗಿಯನ್ನು ವಿತರಣೆ ಮಾಡಲಾಗುತ್ತಿದ್ದು, ಗುಣಮಟ್ಟದ ಧಾನ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕೊರತೆ ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ರಾಜ್ಯದ ಬೊಕ್ಕಸದಲ್ಲಿ 100 ಕೋಟಿ ರು. ನೀಡುವುದರಿಂದ ಯಾವುದೇ ನಷ್ಟವಾಗುವುದಿಲ್ಲ. ಇಂದಿರಾ ಕ್ಯಾಂಟೀನ್‌ನಲ್ಲಿನ ಆಹಾರದ ಗುಣಮಟ್ಟವನ್ನು ಹೆಚ್ಚಿಸಿ. ಆದರೆ, ಮುಚ್ಚುವಂತಹ ಕೆಲಸಗಳನ್ನು ಮಾಡಬಾರದು. ನರೇಗಾ ಯೋಜನೆಯಡಿ ಒಂದು ಸಾವಿರ ಕೋಟಿ ರು. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿದೆ. ಅದನ್ನು ಅದಷ್ಟುಬೇಗ ತರಿಸಿಕೊಂಡು ಪ್ರವಾಹ ಸಂತ್ರಸ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬಳಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಅನುದಾನ ವಿತರಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಶಾಸಕರ ನಡುವೆ ತಾರತಮ್ಯ ಅನುಸರಿಸಲಾಗುತ್ತಿದೆ ಎಂಬ ಆರೋಪಗಳಿವೆ. ತಾರತಮ್ಯ ನಿವಾರಣೆ ಮಾಡಬೇಕು ಎಂದು ಹೇಳಿದಾಗ ಎಲ್ಲ ಶಾಸಕರು ತಮಗೂ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದರು. ಈ ವೇಳೆ ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಧ್ಯಪ್ರವೇಶಿಸಿ ಅನುದಾನ ತಾರತಮ್ಯ ನಿವಾರಣೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಸದಸ್ಯರು ಸುಮ್ಮನಾದರು.

ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಹಿಂದಿನ ಸರ್ಕಾರದ ಕಾರ್ಯಕ್ರಮಗಳಿಗೆ ನೀಡಿರುವ ಅನುದಾನವನ್ನು ಕಡಿತಗೊಳಿಸಬಾರದು. ಯೋಜನೆಗಳನ್ನು ಸ್ಥಗಿತಗೊಳಿಸಬಾರದು. ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ರಾಜಕೀಯ ಮಾಡದೆ ಅಭಿವೃದ್ಧಿ ದೃಷ್ಟಿಯಿಂದ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದು ತಿಳಿಸಿದರು.

ರಾಜೀನಾಮೆ ಸಲ್ಲಿಸಿದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ 25 ಕೋಟಿ ರು. ನೀಡಲಾಗಿದೆ. ಇದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಇತರೆ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಕಡಿತ ಮಾಡಿರುವುದು ಸರಿಯಲ್ಲ. ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ತಿಳಿಸಿದರು.

click me!