ಸದನದ ಬಾವಿಗಿಳಿದು ಸಿದ್ದು, ಡಿಕೆಶಿ ಧರಣಿ

Kannadaprabha News   | Asianet News
Published : Sep 25, 2021, 09:19 AM IST
ಸದನದ ಬಾವಿಗಿಳಿದು ಸಿದ್ದು, ಡಿಕೆಶಿ ಧರಣಿ

ಸಾರಾಂಶ

*  ವಿವಿಧ ವಿಷಯಗಳ ಚರ್ಚೆಗೆ ಅವಕಾಶ ನೀಡದ್ದಕ್ಕೆ ಕಾಂಗ್ರೆಸಿಗರ ಕಿಡಿ, ಭಿತ್ತಿಪತ್ರ ಪ್ರದರ್ಶನ *  ಸದನದ ಬಾವಿಗಿಳಿದು ಧರಣಿ ನಡೆಸಿದ ಕಾಂಗ್ರೆಸ್ಸಿಗರು *  ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್‌  

ಬೆಂಗಳೂರು(ಸೆ.25): ರಾಷ್ಟ್ರೀಯ ಶಿಕ್ಷಣ ನೀತಿ, ಕುಣಿಗಲ್‌ ಲಿಂಕ್‌ಕೆನಾಲ್‌ ಸೇರಿದಂತೆ ಕಾಂಗ್ರೆಸ್‌ ಕ್ಷೇತ್ರಗಳ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದ ಸರ್ಕಾರದ ವಿರುದ್ಧ ಕಾಂಗ್ರೆಸ್‌(Congress) ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸಿ ಧರಣಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಕೊರೋನಾ(Coronavirus) ನಿರ್ವಹಣೆ ವೈಫಲ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಕೇಂದ್ರ ಬಿಜೆಪಿ, ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಸದಸ್ಯರು, ‘ಗಲಿ ಗಲಿ ಮೇ ಶೋರ್‌ಹೈ, ಚೌಕಿದಾರ್‌ ಚೋರ್‌ಹೈ’ ಎಂದು ಕಿಡಿಕಾರಿದರು. ಈ ವೇಳೆ ಬಿಜೆಪಿ ಸದಸ್ಯರು ಪ್ರತಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಕೊರೋನಾ ನಿರ್ವಹಣೆ ಹಾಗೂ ಪಂಚಮಸಾಲಿ ಮೀಸಲಾತಿ ಕುರಿತು ಸರ್ಕಾರ ಉತ್ತರ ನೀಡಿದ ಬಳಿಕ ಅಧಿವೇಶನ ಮುಂದೂಡಲು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ಧತೆ ನಡೆಸಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್‌ ಶಾಸಕರಾದ ಕುಣಿಗಲ್‌ ಡಾ.ರಂಗನಾಥ್‌, ಕಂಪ್ಲಿ ಶಾಸಕ ಗಣೇಶ್‌, ಅಂಜಲಿ ನಿಂಬಾಳ್ಕರ್‌ ಸೇರಿದಂತೆ ಎಲ್ಲಾ ಸದಸ್ಯರೂ ಸದನದ ಬಾವಿಗಿಳಿದು ಧರಣಿ ನಡೆಸಿದರು.

ಬೆಲೆ ಏರಿಕೆಗೆ ವಿರೋಧ: ಬೊಮ್ಮಾಯಿ ಸರ್ಕಾರ ಕಟ್ಟಿಹಾಕಲು ಕಾಂಗ್ರೆಸ್‌ ನಿರ್ಧಾರ

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರದ ಬಿಲ್‌ಗಳ ಬಗ್ಗೆ ಒಪ್ಪಿಗೆ ಪಡೆದಿದ್ದೀರಿ. ಜನ ಪ್ರತಿನಿಧಿಗಳ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸಮಯಾವಕಾಶ ನೀಡುತ್ತಿಲ್ಲ. ಹಿಗಾಗಿಯೇ ಸದನವನ್ನು ಒಂದು ವಾರ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದೆ. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತೂ ಸಹ ಚರ್ಚೆ ಮಾಡಿಲ್ಲ. ಆರು ತಿಂಗಳ ಬಳಿಕ ಸದನ ನಡೆಸುತ್ತಿದ್ದೇವೆ. ದಯವಿಟ್ಟು ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿ ಎಂದು ಒತ್ತಾಯ ಮಾಡಿದರು. ಇದಕ್ಕೆ ಸ್ಪೀಕರ್‌ ಒಪ್ಪಿಗೆ ನೀಡದಿದ್ದಾಗ ಕೆರಳಿದ ಕಾಂಗ್ರೆಸ್‌ ಸದಸ್ಯರು ಭಿತ್ತಿ ಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗುಲಾಮರನ್ನಾಗಿಸುವ ನೀತಿ:

ಹೇಮಾವತಿ ಅಣೆಕಟ್ಟೆಯಿಂದ ಕುಣಿಗಲ್‌ ಲಿಂಕ್‌ಕೆನಾಲ್‌ಗೆ ನೀರು ಹರಿಸಲು ಆಗ್ರಹಿಸಿ ಕುಣಿಗಲ್‌ ಶಾಸಕ ಡಾ. ರಂಗನಾಥ್‌, ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ, ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ದಲಿತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳನ್ನು ಗುಲಾಮರನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಭಿತ್ತಿಪತ್ರ ಪ್ರದರ್ಶಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) , ರಾಮಲಿಂಗಾರೆಡ್ಡಿ ಸೇರಿದಂತೆ ಹಿರಿಯ ನಾಯಕರೂ ಸಹ ಸದನದ ಬಾವಿಗಿಳಿದು ಧರಣಿ ನಡೆಸಿದರು. ಸ್ಪೀಕರ್‌ ಈ ವೇಳೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!