ಕೇಂದ್ರದ ವಿರುದ್ಧ ಮಾತಾಡಿದ ಮಾಧುಸ್ವಾಮಿಗೆ ಸಿದ್ದು ಪ್ರಶಂಸೆ| ಮಾಧುಸ್ವಾಮಿ ಕಳವಳ ರಾಜ್ಯದ ಜನತೆಯ ಕೊರಳ ದನಿ
ಬೆಂಗಳೂರು(ಮಾ.29): ‘ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವುದು ಮತ್ತು ರಾಜ್ಯದ ಯುವಜನ ಉದ್ಯೋಗ ಕಳೆದುಕೊಳ್ಳುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿರುವ ಕಳವಳ ರಾಜ್ಯದ 6.5 ಕೋಟಿ ಜನತೆಯ ಕೊರಳ ದನಿ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
‘ಕೇಂದ್ರದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂಬ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಸರಣಿ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಕಾನೂನುಗಳಿಗೂ ಏಕಪಕ್ಷೀಯವಾಗಿ ತಿದ್ದುಪಡಿಮಾಡಿ ಅದನ್ನು ಅಂಗೀಕರಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಲು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಮಾಧುಸ್ವಾಮಿ ಆಪಾದಿಸಿದ್ದಾರೆ’ ಎಂದು ಸಿದ್ದು ಹೇಳಿದ್ದಾರೆ.
‘ಕಳೆದ 7 ವರ್ಷಗಳಿಂದ ನಾನು ಇದನ್ನು ಹೇಳುತ್ತಲೇ ಬಂದಿದ್ದೇನೆ. ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹೊಂದಿರುವ ಸ್ವಾಯತ್ತತೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ಜಾರಿಗೊಳಿಸಿರುವ ರೈತರ ಪಾಲಿನ ಮರಣ ಶಾಸನಗಳಾಗಿರುವ ಕೃಷಿ ಕಾಯ್ದೆ ತಿದ್ದುಪಡಿಗಳೇ ಸಾಕ್ಷಿ. 2020-21ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬರಬೇಕಿದ್ದ .8538 ಕೋಟಿ ತೆರಿಗೆ ಪಾಲು ಮತ್ತು .1310 ಕೋಟಿ ಕೇಂದ್ರ ಅನುದಾನ ಬಂದಿಲ್ಲ. ಇದರ ಜೊತೆ .5,495 ಕೋಟಿ ವಿಶೇಷ ಅನುದಾನಕ್ಕೂ ಕೊಕ್ಕೆ ಹಾಕಲಾಗಿದೆ. ನಮ್ಮ 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ’ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.