
ಉತ್ತರ ಕನ್ನಡ (ಫೆ.4): ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ವಿವಾಹಿತ ಮಹಿಳೆ ಸುಚಿತ್ರಾ ಜೊತೆ ಅನೈತಿಕ ಸಂಬಂಧ ಮತ್ತು ಮಹಿಳೆಯ ಪತಿಯ ಕೊನೆ ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದ ಪ್ರಮುಖ ಆರೋಪಿ,ಜ್ಯೋತಿಷಿಯಾಗಿರುವ ಕಮಲಾಕರ್ ಭಟ್ ರಾಜ್ಯ ಬಿಜೆಪಿ ನಾಯಕರೊಂದಿಗಿನ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇರಿಸುಮುರಿಸು ತರಿಸುತ್ತಿವೆ.
ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಪ್ರಕರಣದ ಆರೋಪಿ ಕಮಲಾಕರ್ ರಾಜ್ಯ ಬಿಜೆಪಿ ನಾಯಕರೊಂದಿಗಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಆಹಾರ ಸಿಕ್ಕಂತಾಗಿದೆ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಈ ಬಗ್ಗೆ ಗಂಭೀರ ಪೋಸ್ಟ್ ಮಾಡಿದ್ದು 'ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಎಸ್ ಸುರೇಶ್ ಕುಮಾರ್ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ. ಈ ಕೊಲೆ ಕೇಸಿನಲ್ಲಿ ಜ್ಯೋತಿಷಿ ಜೊತೆಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಂತವರ ಪಾತ್ರವಿಲ್ಲವೇ? ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿರುವ ಹರಿಪ್ರಸಾದ್, ಕೊಲೆ ಆರೋಪಿ ಜೋತಿಷಿ ಗುರೂಜಿ ಕಮಲಾಕರ ಭಟ್ಟನನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ. ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು 'ಅಕ್ರಮ'ಗಳನ್ನು ಸಂಪಾದಿಸಿಕೊಂಡು ಇಂತಹ ಜೀ-ಗುರೂಜಿ ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ 'ಅಕ್ರಮ ದಂಧೆ'ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ತ್ರೀ ಪೀಡಕರು, ಕೊಲೆಗಡುಕರೊಂದಿಗೆ ಬಿಜೆಪಿ ಜೊತೆಗೆ ಸಂಬಂಧ
ಸದನದಲ್ಲಿ ಮಹಿಳೆಯರನ್ನೇ ಅಪಮಾನ ಮಾಡುವವರು, ಸಮಾಜದಲ್ಲಿ ಸ್ತ್ರೀ ಪೀಡಕರು, ಅತ್ಯಾಚಾರಿಗಳು, ಕೊಲೆಗಡಕರು, ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸುವವರಿಗೆ ನೇರವಾಗಿ ಬಿಜೆಪಿ ಜೊತೆಗೆ ಅವಿನಾಭಾವ ಸಂಬಂಧ ಇರುವುದಾದರೂ ಹೇಗೆ? ಬಿಜೆಪಿ ಕರ್ನಾಟಕದಲ್ಲಿ ಈ ಕಾರಣಕ್ಕಾಗಿಯೇ ಪ್ರತ್ಯೇಕ ಮೋರ್ಚಾ ಇದೆಯೇ? ಅಥವಾ ಕ್ರಿಮಿನಲ್ ಗಳಲ್ಲಿ ಭಾಗವಹಿಸುವವರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಮಾತ್ರ ಸ್ಥಾನಮಾನಗಳು ಸಿಗುತ್ತದೆಯೇ? ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಗೆ ನೆನಪಿಸಲು ಬಯಸುತ್ತೇನೆ. ಭಾರತ ಸಂವಿಧಾನದ 51A(h) ಆರ್ಟಿಕಲ್ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವೆಂದರೆ; ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಗತಿಪರ ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು. ಈ ವಿಧಿಯ ಉದ್ದೇಶವು ಅಂಧಶ್ರದ್ಧೆ, ಪೂರ್ವಗ್ರಹಗಳನ್ನು ಅವಲಂಬಿಸದೆ, ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಗತಿಶೀಲ ದೃಷ್ಟಿಕೋನವನ್ನು ಉತ್ತೇಜಿಸುವುದಾಗಿದೆ. ಸುರೇಶ್ ಕುಮಾರ್ ಅಂತವರು ಸಂವಿಧಾನದ ಈ ಆರ್ಟಿಕಲ್ ಅನ್ನು ಉಲ್ಲಂಘಿಸಿ ಅಪರಾಧ ಮಾಡಿದ್ದೇ ಕಮಲಾಕರ ಭಟ್ ಅಂತವರು ಕೊಲೆಗಾರರಾಗಲು ಕಾರಣವಾಗಿದೆ. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ