ವರ್ಷಕ್ಕೆ 7 ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ ಜಾತ್ರಾ ಸಂಭ್ರಮ!

Published : Sep 03, 2025, 08:42 PM IST
Shri Sateri Devi jatra 2025

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಹಣಕೋಣ ಗ್ರಾಮದ ಸಾತೇರಿ ದೇವಿಯ ದರ್ಶನ ವರ್ಷಕ್ಕೆ ಕೇವಲ ಏಳು ದಿನ ಮಾತ್ರ ಲಭ್ಯ. ಈ ಏಳು ದಿನಗಳ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ದೇವಿಯ ಪೌರಾಣಿಕ ಹಿನ್ನೆಲೆ ಮತ್ತು ಈ ವಿಶಿಷ್ಟ ಪದ್ಧತಿಯ ಕುರಿತು ತಿಳಿಯಿರಿ.

ರಾಜ್ಯದ ಯಾವುದೇ ದೇವಸ್ಥಾನಗಳಿಗೆ ಹೋದ್ರೂ ಸಾಮಾನ್ಯವಾಗಿ ಪ್ರತಿನಿತ್ಯ ತ್ರಿಕಾಲ ಪೂಜೆ, ವಿವಿಧ ಸೇವೆ, ಭಕ್ತರಿಗೆ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನದಲ್ಲಿ ಮಾತ್ರ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ.

ಹೌದು. ಸಾತೇರಿ ದೇವಿ ತನ್ನ ಜಾತ್ರಾ ಮಹೋತ್ಸವದ ಸಂದರ್ಭ ಮಾತ್ರ ಭಕ್ತರಿಗೆ ದರ್ಶನವನ್ನು ನೀಡುವ ಪ್ರತೀತಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ದೇವಿಯ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು, ಹಲವೆಡೆಗಳಿಂದ ಆಗಮಿಸುವ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆಗಳನ್ನು ಅರ್ಪಿಸಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಇನ್ನು ಜಾತ್ರಾ ಮಹೋತ್ಸವದ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಮಾತ್ರ ದೇವಿ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಉಳಿದ ಐದು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿಯೇ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ. ಅಂದಹಾಗೆ, ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದರ್ಶನದ ಅವಕಾಶವಿರುವ ಈ ಸಾತೇರಿ ದೇವಿಗೆ ಪೌರಾಣಿಕ ಇತಿಹಾಸವೇ ಇದೆ. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನ ನಿವಾರಿಸುತ್ತಿದ್ದಳಂತೆ.

ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯನೊಬ್ಬನಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು.

ಈ ದೇವಿಯ ಪೋಟೋ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲೀ ದೇವಸ್ಥಾನದಲ್ಲಿ ಅವಕಾಶವಿರುವುದಿಲ್ಲ. ಹಾಗೇನಾದರೂ ಮಾಡಿದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಅನ್ನೋ ನಂಬಿಕೆ ಭಕ್ತರದ್ದು. ಹೀಗಾಗಿ ದೇವರನ್ನು ನೋಡಬೇಕಾದರೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆದು, ಹರಕೆಗಳನ್ನು ಕಟ್ಟಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌