
ಬೆಂಗಳೂರು(ಜ.03): ರಾಜ್ಯದಲ್ಲಿ ಇನ್ನು ಮಂದೆ ದಿನದ 24 ಗಂಟೆಯೂ ಅಂಗಡಿ, ಹೋಟೆಲ್, ಫ್ಯಾಮಿಲಿ ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಮಳಿಗೆಗಳು ತೆರೆದಿರಲು ಅನುಮತಿ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ 24/7 ವಾಣಿಜ್ಯ ವಹಿವಾಟಿಗೆ ಅಧಿಕೃತ ಅನುಮತಿ ದೊರೆತಿದೆ.
ರಾಜ್ಯ ಸರ್ಕಾರವು ಇದಕ್ಕಾಗಿಯೇ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯಮಳಿಗೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದಿ ಅಧಿಸೂಚನೆ ಹೊರಡಿಸಿದ್ದು, ದೊಡ್ಡ ಮಳಿಗೆಗಳು, ಮಾಲ್‌ಗಳು, ಅಂಗಡಿಗಳು, ಹೊಟೇಲ್, ದರ್ಶಿನಿಗಳು, ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚದೆ ಅಹೋರಾತ್ರಿ ವ್ಯಾಪಾರ, ವಹಿವಾಟು ನಡೆಸಬಹುದಾಗಿದೆ. ಈ ಆದೇಶವನ್ನು ಮುಂದಿನ 3 ವರ್ಷದ ಅವಧಿಗೆ ಸೀಮಿತವಾಗಿ ಹೊರಡಿಸಲಾಗಿದೆ.
10 ಅಥವಾ ಅದಕ್ಕಿಂತ ಅಧಿಕ ಸಂಖ್ಯೆಯಲ್ಲಿ ನೌಕರರನ್ನು ಒಳಗೊಂಡ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳು ನೌಕರರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ದಿನದ 24 ಗಂಟೆ ವಹಿವಾಟು ನಡೆಸಬಹುದು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ. ಇದರಿಂದಾಗಿ ಇದಕ್ಕಿಂತ ಕಡಿಮೆ ಸಿಬ್ಬಂದಿಯನ್ನು ಹೊಂದಿರುವ ಅಂಗಡಿ, ಮಳಿಗೆಗಳಿಗೆ 24/7 ಸೌಲಭ್ಯ ಅನ್ವಯಿಸುವುದಿಲ್ಲ.
ಇನ್ನು ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಆದೇಶದ ಪ್ರಕಾರ, ದಿನದ 24 ಗಂಟೆಯೂ ತೆರೆದಿರುವ ವಾಣಿಜ್ಯ ಮಳಿಗೆಗಳು ಅಗತ್ಯ ಸಂಖ್ಯೆಯಲ್ಲಿ ನೌಕರರನ್ನು ಹೊಂದಿರಬೇಕು. ಪಾಳಿಯಲ್ಲಿ ಕೆಲಸ ಮಾಡಿಸಿ ಪ್ರತಿ ವಾರ ವಾರದ ರಜೆ ನೀಡಬೇಕು. ನೌಕರರ ಹೆಚ್ಚುವರಿ ಅವಧಿಯ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ದಿನಕ್ಕೆ ಎಂಟು ಗಂಟೆ ಮತ್ತು ವಾರಕ್ಕೆ 48 ಗಂಟೆ ಕೆಲಸದ ಅವಧಿ ನಿಗದಿ ಪಡಿಸಬೇಕು. ಹೆಚ್ಚುವರಿಯಾಗಿ (ಓಟಿ)ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ. ನಿರಂತರವಾಗಿ ಮೂರು ತಿಂಗಳು ಒಬ್ಬ ಸಿಬ್ಬಂದಿ 50 ಗಂಟೆಗಿಂತ ಹೆಚ್ಚು ಓಟಿ ಮಾಡುವಂತಿಲ್ಲ. ಒಂದು ವೇಳೆ ಮಾಡಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಹಿಳೆಯರಿಗೆ ನೈಟ್ ಶಿಫ್ಟ್ ಇಲ್ಲ:
ಮುಖ್ಯವಾಗಿ ರಾತ್ರಿ 8 ಗಂಟೆಯ ನಂತರ ಮಹಿಳಾ ನೌಕರರು ಕೆಲಸ ಮಾಡುವಂತಿಲ್ಲ. ಒಂದು ವೇಳೆ ಅನುಮತಿ ಪಡೆದು ರಾತ್ರಿ ವೇಳೆ ಕೆಲಸ ಮಾಡುವ ಮಹಿಳಾ ನೌಕರರಿಗೆ ಸೂಕ್ತ ಭದ್ರತೆ ಮತ್ತು ವಾಹನದ ಸೌಲಭ್ಯ ಒದಗಿಸಬೇಕು. ಜೊತೆಗೆ ಲಿಖಿತವಾಗಿ ಒಪ್ಪಿಗೆ ಪಡೆಯಬೇಕು. ಅಗತ್ಯ ಮೂಲಸೌಕರ್ಯಗಳನ್ನೂ ಸಹ ಒದಗಿಸುವುದು ಅಂಗಡಿ ಅಥವಾ ಮಳಿಗೆ ಮಾಲೀಕರ ಜವಾಬ್ದಾರಿಯಾಗಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ನೀಡಲು ಆಂತರಿಕ ದೂರು ಸಮಿತಿ ಇರುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಎಫ್‌ಕೆಸಿಸಿಐ ಸ್ವಾಗತ:
‘ರಾಜ್ಯ ಸರ್ಕಾರದ ಈ ಅಧಿಸೂಚನೆಯಿಂದ ಕರ್ನಾಟಕ ಶಾಫ್ಸ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಶ್ಮೆಂಟ್ ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲುಗಳನ್ನು ದಿನದ 24 ಗಂಟೆಗಳ ಕಾಲ ತೆರೆದಿಡಬಹುದಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡಾ ಸುಧಾರಿಸಲಿದೆ. ಈ ಹಿಂದೆ ರಾತ್ರಿ 10 ಗಂಟೆಯಾಗುತ್ತಿದ್ದಂತೆ ಪೊಲೀಸರು ಅಂಗಡಿ, ವಾಣಿಜ್ಯ ಮಳಿಗೆಗಳ ಬಾಗಿಲು ಮುಚ್ಚಿಸುತ್ತಿದ್ದರು. ಸರ್ಕಾರ ಈ ನಿರ್ಧಾರ ಸ್ವಾಗತಾರ್ಹ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾರ್ ಅ್ಯಂಡ್ ರೆಸ್ಟೊರೆಂಟ್‌ಗೆ ಅನ್ವಯಿಸಲ್ಲ
ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯಮಳಿಗೆ ಕಾಯ್ದೆಯಡಿ ನೋಂದಣಿಯಾದರೂ ಕೂಡ ಅಬಕಾರಿ ಕಾಯ್ದೆಯಡಿ ಬರುವುದರಿಂದ ದಿನದ 24 ಗಂಟೆಯು ತೆರೆದಿರುವ ನಿಯಮ ಅನ್ವಯಿಸಲ್ಲ. ಅವುಗಳು ಎಂದಿನಂತೆ ಅಬಕಾರಿ ಕಾಯ್ದೆಯಡಿಯಲ್ಲೇ ವಹಿವಾಟು ನಡೆಸಲಿವೆ. ಹೀಗಾಗಿ ಈವರೆಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳು ಎಷ್ಟುಅವಧಿವರೆಗೆ ತೆರೆದಿರುತ್ತವೆಯೋ ಅದೇ ನಿಯಮ ಮುಂದುವರೆಯಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ಬಾರ್‌ಗಿಲ್ಲ ಈ ಆಯ್ಕೆ
- ನೌಕರರನ್ನು 10 ತಾಸಿಗಿಂತ ಹೆಚ್ಚು ದುಡಿಸಿಕೊಳ್ಳುವಂತಿಲ್ಲ
- ರಾತ್ರಿ 8ರ ಬಳಿಕ ಮಹಿಳಾ ನೌಕರರು ಕೆಲಸ ಮಾಡುವಂತಿಲ್ಲ
- ರಾಜ್ಯದಲ್ಲಿ ಇನ್ನು 3 ವರ್ಷಗಳ ಕಾಲ ನಿಯಮ ಜಾರಿಯಲ್ಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ