ಬೆಳಗಾವಿ: ಕನ್ನಡ ಧ್ವಜ ಹಾರಿಸಿದ್ದ ತಾಳೂಕರ ಅಂಗಡಿಗೆ ಬೆಂಕಿ | ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಿರುವ ತಾಳೂಕರ ಅಂಗಡಿ
ಬೆಳಗಾವಿ(ಜ.02): ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡಧ್ವಜ ಹಾರಿಸಿರುವ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಅವರ ವಡಗಾವಿಯ ಕಲ್ಯಾಣ ನಗರದಲ್ಲಿರುವ ಅಂಗಡಿಗೆ ಕಿಡಿಗೇಡಿಗಳು ಗುರುವಾರ ಮಧ್ಯರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸ ತಾಳೂಕರ ಮತ್ತು ಅವರ ಕುಟುಂಬದ ಸದಸ್ಯರು ಬೆಂಕಿ ನಂದಿಸಿದರು. ಈ ಅಂಗಡಿಯಲ್ಲಿ ಕನ್ನಡ ಬಾವುಟಗಳು, ಶಲ್ಯೆ, ತೋರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಸತತ 7ನೇ ದಿನ 1000ಕ್ಕಿಂತ ಕಮ್ಮಿ ಕೊರೋನಾ ಕೇಸ್
ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಅವರು, ನಾನು ಎಂದಿಗೂ ಭಾಷೆಯ ದ್ವೇಷ ಮಾಡಿಲ್ಲ. ನಮ್ಮ ನಾಡು ಕಟ್ಟಲಿಕ್ಕೆ, ಕನ್ನಡ ಧ್ವಜ ಅಳವಡಿಸಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ.
ನನ್ನ ಅಂಗಡಿಗೆ ಬೆಂಕಿ ಹಚ್ಚುವ ಕೆಲಸಕ್ಕೆ, ಬೆದರಿಕೆಗೆ ನಾನು ಹೆದರುವುದಿಲ್ಲ. ಬೆಳಗಾವಿ ಪಾಲಿಕೆ ಕಚೇರಿ ಎದುರು ಕನ್ನಡ ಬಾವುಟ ಹಾರಿಸಬೇಕೆಂಬುವುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು. ಇದೀಗ ಅದು ನನಸಾಗಿದೆ. ಕಳೆದ ನಾಲ್ಕು ದಿನಗಳಿಂದ ಪಾಲಿಕೆ ಎದುರಿಗೆ ಸ್ಥಾಪಿಸಲಾಗಿದ್ದ ಕನ್ನಡ ಧ್ವಜಸ್ತಂಭ ಕಾಯುತ್ತ, ಕುಳಿತುಕೊಂಡಿದ್ದೆ. ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ, ಹೊಸ ವರ್ಷಾಚರಣೆ ಮಾಡಿ ಮನೆಗೆ ತೆರಳಿದ್ದೆ. ಈ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದರು.