ಪ್ರವಾಸಿಗರಿಗೊಂದು ಮನವಿ: ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು ಪ್ರವಾಸಕ್ಕೆ ಬರಬೇಡಿ

By Sathish Kumar KH  |  First Published Jul 25, 2023, 7:12 PM IST

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಹೆಚ್ಚಾಗಿದ್ದು ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಮಳೆ ನಿಲ್ಲುವವರೆಗೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.25): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಮಳೆ ಬಿಡುವು ನೀಡುವವರೆಗೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯಾದ್ಯಂತ  ಭಾರೀ ಮಳೆಯಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಅವಘಡಗಳು ಸಂಭವಿಸುತ್ತಿದೆ. ಇದೇ ವೇಳೆ ಗಿರಿ ಶ್ರೇಣಿ, ಚಾರ್ಮಾಡಿ ಘಾಟಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಮಳೆ ಹೆಚ್ಚಾದಂತೆ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ತಮ್ಮ ಯೋಜನೆಯನ್ನು ಸಧ್ಯಕ್ಕೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರು ರಾಜ್ಯದ ಮತ್ತು ಅಂತರರಾಜ್ಯ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

Latest Videos

undefined

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ವರುಣಾರ್ಭಟ: ಭೂಕುಸಿತ, ಕಾರು ಪಲ್ಟಿ

ಜಲಪಾತದ ಬಳಿ ಶರತ್ ಎಂಬ ಯುವಕ ಜಾರಿಬಿದ್ದು ಸಾವು: ಪಕ್ಕದ ಉಡುಪಿ ಜಿಲ್ಲೆಯ ಕೊಲ್ಲೂರು ಅರಿಶಿನ ಗುಂಡಿಯ ಜಲಪಾತದ ಬಳಿ ರೀಲ್ಸ್ ಮಾಡುವಾಗ ಭದ್ರಾವತಿ ಮೂಲದ ಶರತ್ ಎಂಬ ಯುವಕ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.  ಈ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿಗರಿಗೆ ರಕ್ಷಣೆ ಕೊಡುವುದಕ್ಕೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ಜಿಲ್ಲೆಗೆ ಭೇಟಿ ನೀಡಲು ಯೋಜಿಸಿರುವ ಪ್ರವಾಸಿಗರು ಕೆಲ ದಿನಗಳ ಕಾಲ ಪ್ರವಾಸ ಮುಂದೂಡುವುದು ಸೂಕ್ತವಾಗಿದೆ. ನಿರಂತರ ಮಳೆಯಿಂದಾಗಿ ಮುಳ್ಳಯ್ಯನಗಿರಿ, ದತ್ತಪೀಠ ಭಾಗದ ಫಾಲ್ಸ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದೆ. ಅಲ್ಲದೆ ತೇವಾಂಶ ಹೆಚ್ಚಾದಂತೆ ಗಿರಿಯ ಮಣ್ಣು ಸಡಿಲಗೊಂಡು ಕುಸಿತಕ್ಕೊಳಗಾಗುವ ಆತಂಕ ಹೆಚ್ಚಿದೆ. ಇನ್ನು ಪೊಲೀಸರಿಂದ ಎಷ್ಟೇ ಭದ್ರತೆ ಒದಗಿಸಿದರೂ ಜನರು ಕೆಲ ಕ್ಷಣದ ಸಂತಸಕ್ಕಾಗಿ ಜೀವ ಪಣಕ್ಕಿಡುತ್ತಿದ್ದಾರೆ. ಇದರಿಂದ ಜನರ ರಕ್ಷಣೆಗೆ ಪೊಲೀಸರಿಂದ ಆತಂಕ ಎದುರಾಗಿದೆ. 

ಅಪಾಯಕ್ಕೆ ಆಹ್ವಾನ : ಇದರ ನಡುವೆ ಮಳೆ ವಾತಾವರಣದ ಮುದವನ್ನು ಅನುಭವಿಸಲು ಬರುವ ಯುವಕರು ದಾರಿ ಮಧ್ಯೆ ಕುಣಿದು, ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಘಟನೆ ಪದೇ ಪದೇ ಸಂಭಿಸುತ್ತಲೇ ಇದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಇನ್ನೂ ಕೆಲವರು ಭಾರೀ ಪ್ರಮಾಣದಲ್ಲಿ ಧುಮ್ಮುಕ್ಕುತ್ತಿರುವ ಜಲಪಾತದ ಮುಂದೆ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಅಪಾಯಕಾರಿ ಸ್ಥಳಗಳಲ್ಲಿ ನಿಂತು ನಿಸರ್ಗದ ಜೊತೆಗೆ ಫೋಟೋ ತೆಗೆಸಿಕೊಳ್ಳು ಮುಂದಾಗುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಇಂತಹ ಸ್ಥಳಗಳಲ್ಲಿ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿರುವ ಕಾರಣ ಮಳೆ ಕಡಿಮೆ ಆಗುವರೆಗೆ ಜನರು ಮಲೆನಾಡು ಭಾಗದ ಪ್ರವಾಸ ಯೋಜನೆಯನ್ನು ಕೈಬಿಡುವುದು ಸೂಕ್ತವಾಗಿದೆ.

ಅಬ್ಬರದ ಮಳೆಗೆ ವಿವಿಧೆಡೆ ಭೂ ಕುಸಿತ: ಚಿಕ್ಕಮಗಳೂರು (ಜು.24): ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ವರುಣಾರ್ಭಟ ಮುಂದುವರಿದಿದ್ದು, ಭೂ ಕುಸಿತ ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿವೆ. ನಿರಂತರ ಮಳೆಯಿಂದಾಗಿ ಕೊಪ್ಪ ತಾಲ್ಲೂಕು ಬಸರೀಕಟ್ಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಉರುಳಿಬಿದ್ದಿದೆ. ಭಾರೀ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಒಂದೇ ಪ್ರದೇಶದಲ್ಲಿ ಎರಡು ಕಾರುಗಳು ಪಲ್ಟಿ ಹೊಡೆದಿರುವ ಎರಡು ಪ್ರತ್ಯೇಕ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಳಿ ನಡೆದಿದೆ. ಘಟನೆಯಲ್ಲಿ ಚಾಲಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು: ಎಂದೂ ನೋಡಿರದ ದೃಶ್ಯಕಾವ್ಯಗಳು

ಜಲಪಾತ ವೀಕ್ಷಣೆಗೆ ಬರಬೇಡಿ-ಗ್ರಾ.ಪಂ.ಮನವಿ: ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಪಾತ ರುದ್ರರಮಣೀಯವಾಗಿದೆ. ಕೆಮ್ಮಣ್ಣು ಮಿಶ್ರಿತ ನೀರಿನಲ್ಲೇ ಮಿಂದು ಜನರು ಮೋಜು ಮಾಡುತ್ತಿದ್ದಾರೆ. ನೀರಿನ ರಭಸ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಳೆ ಬಿಡುವು ನೀಡುವವರೆಗೆ ಜಲಪಾತ ವೀಕ್ಷಿಸಲು ಬರಬಾರದು ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಪ್ರವಾಸಿಗರಲ್ಲಿ ಮನವಿ ಮಾಡಿದೆ.

click me!