ಉರಿಗೌಡ ನಂಜೇಗೌಡ ಹೆಸರಿನಿಂದ ಪ್ರಚೋದನೆ, ರಾಗಿಗುಡ್ಡ ಹಿಂಸಾಚಾರ ಕುರಿತು ಶಾಸಕರ ಹೇಳಿಕೆ!

By Suvarna News  |  First Published Oct 1, 2023, 9:05 PM IST

ಶಿವಮೊಗ್ಗದ ರಾಗಿಗುಡ್ಡದಲ್ಲಿ ಆಯೋಜಿಸಿದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲುತೂರಾಟ ನಡೆದಿದೆ. ಹಿಂಸಾಚಾರ ಹತ್ತಿಕ್ಕಲು ಪೊಲೀಸರು ರಾಠಿ ಪ್ರಹಾರ ನಡೆಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದಾರೆ. ಈ ವೇಳೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.


ಶಿವಮೊಗ್ಗ(ಅ.01) ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ, ಹಿಂಸಾಚಾರ ನಡೆದಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ. ಎರಡು ಕೋಮಿನ ನಡುವೆ ನಡೆದ ಘರ್ಷಣೆಯಿಂದ ಭಾರಿ ಹಿಂಸಾಚಾರವೇ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದೀಗ ಘಟನಾ ಸ್ಥಳಕ್ಕೆ ಶಿವಮೊಗ್ಗ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದಾರೆ. ಈ ವೇಳೆ ರಾಗಿ ಗುಡ್ಡದಲ್ಲಿ ಈ ರೀತಿಯ ಕಿಡಿಗೇಡಿಗಳ ಕೃತ್ಯ ನಡೆಯುತ್ತಲೇ ಇದೆ. ಇದಕ್ಕೆ ಉರಿ ಗೌಡ, ನಂಜೇಗೌಡ ಹೆಸರು ಬರೆದು ಪ್ರಚೋದನೆ ಮಾಡಲಾಗಿದೆ. ಇಷ್ಟಾದಾರೂ ಶಾಂತಿಯುತವಾಗಿ ಸಾಗುತ್ತಿದ್ದ ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಚನ್ನಬಸಪ್ಪ ಹೇಳಿದ್ದಾರೆ.

ಈ ಭಾಗದಲ್ಲಿ ಪ್ರಚೋದನಕಾರಿ ಕಟೌಟ್ ಹಾಕಲಾಗುತ್ತಿದೆ. ಉರಿ ಗೌಡ, ನಂಜೇಗೌಡ ಹೆಸರು ಬರೆದು ಪ್ರಚೋದನೆ ಮಾಡಲಾಗಿತ್ತು. ಆದರೆ ಪೊಲೀಸರು ಕಟೌಟ್‌ಗೆ ಬಣ್ಣ ಬಳಿದು ಪರಿಸ್ಥಿತಿ ನಿಯಂತ್ರಣ ಮಾಡಿದ್ದರು. ಹೀಗಿದ್ದರೂ ಸಂಜೆ ಮೆರವಣಿಗೆ ವೇಳೆ ಯಾರು ಕಲ್ಲು ತೂರಾಟ ನಡೆಸಿದರೆಂದು ಮೆರವಣಿಗೆ ಹೋದವರು ವಾಪಸ್ ಬಂದು ಗಲಾಟೆ ಮಾಡಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.

Tap to resize

Latest Videos

ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ: 144 ಸೆಕ್ಷನ್‌ ಜಾರಿ

ಮನೆಗಳ ಕಿಟಕಿ ಗಾಜು ಬೈಕು ಕಾರುಗಳಿಗೆ ಜಖಂ ಆಗಿದೆ. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕನೆ ಮಾಡಲು ಘಟನಾ ಸ್ಥಳಕ್ಕೆ ಆಗಮಿಸಿದ್ದೇನೆ. ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಜೊತೆ ಮಾತನಾಡಿ ಘಟನೆಯ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಘಟನಾ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ ಎಂದು ಚನ್ನಬಸಪ್ಪ ಹೇಳಿದ್ದಾರೆ.

ಶಾಂತಿನಗರ ರಾಗಿ ಗುಡ್ಡದಲ್ಲಿ ನಡೆದ ಗಲಾಟೆ ಶಿವಮೊಗ್ಗದ ಇತರೆ ಭಾಗಗಳಲ್ಲಿ ಹಬ್ಬುವುದಿಲ್ಲ ಎಂದು ಚನ್ನಬಸಪ್ಪ ಹೇಳಿದ್ದಾರೆ. ಇದೀಗ ರಾಗಿಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡೆಸಲಾಗಿದೆ. ಇತರ ಭಾಗದ ಕೋಮುಸೌಹಾರ್ಧತೆ ಕದಡದಂತೆ ಎಚ್ಚರವಹಿಸಲಾಗಿದೆ.

 ಘಟನೆ ಸಂಬಂಧ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ. 

click me!