ಮಲೆನಾಡು-ಕರಾವಳಿ ರೈಲ್ವೆ ಯೋಜನೆ ಶೀಘ್ರ ಜಾರಿಗೆ ಮನವಿ

By Kannadaprabha News  |  First Published Jul 3, 2024, 5:26 PM IST

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಲವಾರು ರೈಲ್ವೆ ಯೋಜನೆಗಳ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಯೋಜನೆಗಳ ಶೀಘ್ರ ಅನುಷ್ಠಾನ ಮಾಡುವಂತೆ ಮನವಿ ಮಾಡಿದರು.


ಶಿವಮೊಗ್ಗ (ಜು.3): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಲವಾರು ರೈಲ್ವೆ ಯೋಜನೆಗಳ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಯೋಜನೆಗಳ ಶೀಘ್ರ ಅನುಷ್ಠಾನ ಮಾಡುವಂತೆ ಮನವಿ ಮಾಡಿದರು.

ಮಂಗಳವಾರ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದರು, ಈ ಯೋಜನೆಗಳ ಅನುಷ್ಠಾನಕ್ಕಾಗಿ ಶಿವಮೊಗ್ಗ-ಬೆಂಗಳೂರು ನಡುವಿನ ರೈಲ್ವೆ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಬೇಕಾಗಿದ್ದು, ಈ ಕುರಿತು ಗಮನಹರಿಸುವಂತೆ ಕೋರಿದರು.

Tap to resize

Latest Videos

undefined

ರಕ್ಷಿಸುವ ಹೊಣೆ ಹೊತ್ತ ಗುತ್ತಿಗೆದಾರನಿಂದಲೇ ಪಾರ್ಕ್‌ನ ಮರಕ್ಕೆ ಕೊಡಲಿ, 25 ಸಾವಿರ ರು. ದಂಡ

ಶಿವಮೊಗ್ಗ ಸಮೀಪದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆಯಾದರೂ, ಕಾಮಗಾರಿಯ ವೇಗ ತೃಪ್ತಿಕರವಾಗಿಲ್ಲ. ಇದರ ನಡುವೆ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಸೌಲಭ್ಯಗಳೊಂದಿಗೆ ಈ ಕೋಚಿಂಗ್ ಡಿಪೋವನ್ನು ನಿರ್ಮಿಸಲು ಈ ಹಿಂದೆಯೇ ಕೋರಿಕೆ ಸಲ್ಲಿಸಿದ್ದು, ತಕ್ಷಣವೇ ಪ್ರಮುಖ ಮೂಲ ಸೌಕರ್ಯ ಸೌಲಭ್ಯವನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಮಂಜೂರಾತಿ ನೀಡಬೇಕು. ಈಗಾಗಲೇ ರೈಲ್ವೆ ಮಂಡಳಿಯು ಈ ಮಾರ್ಗದ ಸಮೀಕ್ಷೆಗೆ ಮಂಜೂರಾತಿ ನೀಡಿ, ಅದನ್ನು ಪೂರ್ಣಗೊಳಿಸಿ ಅದರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಈ ಹೊಸ ರೈಲು ಮಾರ್ಗ ಯೋಜನೆಯು ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ನಡುವೆ ರೈಲ್ವೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಕಾಮಗಾರಿಯನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೇ ಮಂಜೂರಾದ ಶಿವಮೊಗ್ಗ-ಬೀರೂರು ಡಬ್ಲಿಂಗ್ ಕಾಮಗಾರಿಯನ್ನು ಕಾರಣಾಂತರದಿಂದ ಸ್ಥಗಿತಗೊಳಿಸಲಾಗಿತ್ತು. ಆದರೀಗ ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣದಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹಲವು ಪಟ್ಟು ಹೆಚ್ಚಾಗಲಿದೆ. ಆದ್ದರಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಮಂಜೂರಾತಿ ನೀಡಬೇಕು.

ಬೆಂಗಳೂರಿನ ಕಾಲೇಜುವೊಂದರಲ್ಲಿ ವಿದ್ಯಾರ್ಥಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಭೀಕರ ಹತ್ಯೆ!

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲುಮಾರ್ಗ ನಿರ್ಮಾಣ ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲು ಯೋಚಿಸಲಾಗಿದ್ದು, ಇದರಂತೆ ಮೊದಲ ಹಂತದ ಕಾಮಗಾರಿಗೆ ವೇಗ ನೀಡಬೇಕು ಮತ್ತು ಎರಡನೇ ಹಂತದ ಕಾಮಗಾರಿಗೆ ಮುಂದಿನ ಬಜೆಟ್‌ನಲ್ಲಿ ಹಣ ನಿಗದಿಗೊಳಿಸಬೇಕು. ಇದೇ ರೀತಿ ದಶಕದ ಹಿಂದೆ ಯೇ ಶಿವಮೊಗ್ಗ,-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿದ್ದು, ಮುಂಬರುವ ಬಜೆಟ್‌ನಲ್ಲಿ ಸರ್ವೇ ಕಾರ್ಯಕ್ಕೆ ಹಣ ಒದಗಿಸಬೇಕು. ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿಯನ್ನು ಅಮೃತ್‌ ಯೋಜನೆಯಡಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿವರಿಸಿ ಹೇಳಿದರು.

ಸ್ಥಗಿತಗೊಂಡಿರುವ ಶಿವಮೊಗ್ಗ ರೇಣಿಗುಂಟ (ತಿರುಪತಿ) ಚೆನ್ನೈ ರೈಲನ್ನು ಮರುಚಾಲನೆಗೊಳಿಸುವ ಮೂಲಕ ಸಾವಿರಾರು ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸಬೇಕು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರವು ಒಂದಾಗಿದ್ದು, ಯಶವಂತಪುರದಿಂದ ಶಿವಮೊಗ್ಗಕ್ಕೆ ‘ವಂದೇ ಭಾರತ್’ ರೈಲು ಪರಿಚಯಿಸಬೇಕು. ಇದರಿಂದ ಮಲೆನಾಡು ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಇದೇ ವೇಳೆ ಆಗ್ರಹಪಡಿಸಿದ್ದಾರೆ.

ನಿತ್ಯ ಸಂಚಾರಕ್ಕೆ ವಿಸ್ತರಣೆ: ರೈಲು ಸಂಖ್ಯೆ 16581/16582 ಬೆಂಗಳೂರು-ಶಿವಮೊಗ್ಗ ವಿಶೇಷ ರೈಲು ಕಳೆದ 4 ವರ್ಷಗಳಿಂದ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದು, ಇದನ್ನು ಪ್ರತಿದಿನವೂ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಮನವಿ ಮಾಡಿದರು.

ಹಾರನಹಳ್ಳಿ ಮತ್ತು ಇತರ ಅಕ್ಕಪಕ್ಕದ ಹಳ್ಳಿಗಳ ಪ್ರಯಾಣಿಕರಿಗೆ ನೇರವಾಗಿ ಬೆಂಗಳೂರಿಗೆ ಪ್ರಯಾಣಿಸಲು ರೈಲು ನಿಲುಗಡೆ ಇರುವುದಿಲ್ಲವಾದ ಕಾರಣ ರೈಲು ಸಂಖ್ಯೆ- 16227/16228 ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಹಾರನಹಳ್ಳಿಯಲ್ಲಿ ನಿಲುಗಡೆ ನೀಡುವಂತೆ ವಿನಂತಿಸಿದರು.

ಬೈಂದೂರಿನಲ್ಲಿ ನಿಲುಗಡೆ: ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಭಕ್ತಾದಿಗಳಿಗೆ ರೈಲ್ವೆ ಸೇವೆ ಸಲ್ಲಿಸಲು ಅವಕಾಶವಿದ್ದು, ರೈಲಿಗೆ ಬೈಂದೂರಿನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಸೇನಾಪುರದಲ್ಲಿ ರೈಲು ನಿಲುಗಡೆ: ಸೇನಾಪುರ ರೈಲು ನಿಲ್ದಾಣವು ಉಡುಪಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣದಲ್ಲಿ ಮಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ರೈಲು ಸಂಖ್ಯೆ 12619/20 ಮತ್ಸ್ಯಗಂಧ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಹಾಗೂ ಮತ್ತು ಕಾರವಾರ ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ:16595/96 ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಸೇನಾಪುರದಲ್ಲಿ ನಿಲುಗಡೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬೆಂಗಳೂರು-ಶಿವಮೊಗ್ಗ, ನಡುವಿನ ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ:16227/16228 ತಾಳಗುಪ್ಪ-ಮೈಸೂರು ನಡುವಿನ ಎಕ್ಸ್‌ಪ್ರೆಸ್ ರೈಲುಗಳ ಸಾಮಾನ್ಯ ಕೋಚ್ ಗಳು ಹಾಗೂ ಎ.ಸಿ. ಕೋಚ್ ಗಳು ತುಂಬಾ ಹಳೆಯದಾಗಿದ್ದು. ನಿರ್ವಹಣೆಯು ಸಾಕಾಗುತ್ತಿಲ್ಲ. ಈ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಕೋಚ್ ಗಳ ಅವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರುಗಳನ್ನು ನೀಡಿರುವುದರಿಂದ ಹೊಸ ಕೋಚ್‌ಗಳನ್ನು ಒದಗಿಸುವಂತೆ ಸಚಿವರನ್ನು ಕೋರಿದರು. ಈ ಎಲ್ಲ ಮನವಿಗಳ ಬಗ್ಗೆ ಕೇಂದ್ರ ರೈಲ್ವೇ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

click me!