ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್!| ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಬಸವನಗುಡಿಯ ಶೇಖರ್ ಆಸ್ಪತ್ರೆ ಬಂದ್| ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್
ಬೆಂಗಳೂರು(ಮೇ.11): ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಮತ್ತೊಂದು ಖಾಸಗಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಬಂದ್ ಮಾಡಿದೆ.
ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದ ನಾಥ್‌ರ್ ಹಾಸ್ಪಿಟಲನ್ನು ಶನಿವಾರ ಬಂದ್ ಮಾಡಿದ ಬೆನ್ನಲ್ಲೇ, ಬಸವನಗುಡಿಯ ಶೇಖರ್ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ಮುಂದಿನ ಆದೇಶದವರೆಗೂ ಬಂದ್ ಮಾಡಿದ್ದಾರೆ. ಆ ಆಸ್ಪತ್ರೆಯ ರೋಗಿಗಳನ್ನು ಬೇರೊಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಚಿಕಿತ್ಸೆ ನೀಡಿದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ತಬ್ಲೀಘಿ ಆಯ್ತು, ಈಗ ಅಜ್ಮೇರ್ ಕಂಟಕ: 31 ಜನಕ್ಕೆ ಸೋಂಕು ದೃಢ!
ಅನಾರೋಗ್ಯ ಹಿನ್ನೆಲೆಯಲ್ಲಿ ಶೇಖರ್ ಆಸ್ಪತ್ರೆಗೆ ಇತ್ತೀಚೆಗೆ 60 ವರ್ಷದ ವ್ಯಕ್ತಿಯೊಬ್ಬರು ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯವರು ಮುಂಜಾಗ್ರತಾ ಕ್ರಮವಾಗಿ ಆ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಪಡೆದು ಖಾಸಗಿ ಲ್ಯಾಬ್‌ವೊಂದಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಅದು ಪಾಸಿಟಿವ್ ವರದಿ ಬಂದಿದ್ದು, ಆ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರೋಗಿಯನ್ನು ನಿಗದಿತ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗೆ ವರ್ಗಾಯಿಸಿ ಆಸ್ಪತ್ರೆಯನ್ನು ಮುಂದಿನ ಆದೇಶದ ವರೆಗೂ ಬಂದ್ ಮಾಡಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿಲ್ಸನ್‌ಗಾರ್ಡನ್ ಅಗಡಿ ಆಸ್ಪತ್ರೆ, ಕುರುಬರಹಳ್ಳಿಯ ಲೋಟಸ್ ಆಸ್ಪತ್ರೆ, ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆ ಬಳಿಕ ನಾಥ್‌ರ್ ಹಾಸ್ಪಿಟಲ್ ಬಂದ್ ಮಾಡಲಾಗಿದ್ದು, ಇದೀಗ ಮತ್ತೊಂದು ಖಾಸಗಿ ಆಸ್ಪತ್ರೆ ಬಂದ್ ಆಗಿದೆ.
ನಗರದಲ್ಲಿ 3 ಹೊಸ ಪ್ರಕರಣ.
ನಗರದಲ್ಲಿ ಸೋಂಕಿತ ಪ್ರಕರಣಗಳ ಪ್ರಮಾಣ ಭಾನುವಾರ ಕೊಂಚ ಇಳಿಕೆಯಾಗಿದೆ. ಹೊಸದಾಗಿ ಕೇವಲ ಮೂರು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಸೋಂಕಿತೆ ಸಾವು ಬಚ್ಚಿಟ್ಟ ಖಾಸಗಿ ಆಸ್ಪತ್ರೆ ಈಗ ಸೀಲ್‌ಡೌನ್!
ಪಾದರಾಯನಪುರದ ಕಂಟೈನ್ಮೆಂಟ್ ವಲಯದಲ್ಲಿ ಪಿ.135ನೇ ರೋಗಿಯ ಸಂಪರ್ಕದಿಂದ 29 ವರ್ಷದ ಮತ್ತೊಬ್ಬ ಯುವಕನಿಗೆ ಸೋಂಕು ಹರಡಿದೆ. ಇನ್ನೆರಡು ಪ್ರಕರಣದಲ್ಲಿ ತೀವ್ರ ಉಸಿರಾಟ ತೊದರೆಯಿಂದ ಬಳಲುತ್ತಿರುವ 56 ವರ್ಷದ ಮಹಿಳೆ ಮತ್ತು ಇನ್‌ಫ್ಲ್ಯುಯೆನ್ಜಾ ಜ್ವರ ತಗುಲಿರುವ 60 ವರ್ಷದ ಪುರುಷ ಬೇರೆ ಬೇರೆ ಆಸ್ಪತ್ರೆಗೆ ದಾಖಲಾದಾಗ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ 56 ವರ್ಷದ ಮಹಿಳೆ ನಗರದ ನಾಥ್‌ರ್ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿಯೇ ಮೃತಪಟ್ಟಿದ್ದರು. ಆದರೆ, ಇದನ್ನು ಆರೋಗ್ಯ ಇಲಾಖೆ ಭಾನುವಾರ ಅಧಿಕೃತವಾಗಿ ಪ್ರಕಟಿಸಿದೆ. ಜತೆಗೆ ಖಾಸಗಿ ಆಸ್ಪತ್ರೆಯನ್ನು ಈಗಾಗಲೇ 15 ದಿನ ಬಂದ್ ಮಾಡಿದ್ದಾರೆ.
ಇನ್ನು ನಗರದಲ್ಲಿ ಇದುವರೆಗೆ ಪತ್ತೆಯಾಗಿರುವ 177 ಪ್ರಕರಣಗಳ ಪೈಕಿ, ಇದುವರೆಗೂ 86 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು 83 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಆತ್ಮಹತ್ಯೆ ಮಾಡಿಕೊಂಡ ಸೋಂಕಿತ ಸೇರಿ ಉಳಿದ 8 ಜನ ಮೃತಪಟ್ಟಿದ್ದಾರೆ.