ರಂಗ ಮಂದಿರ, ಗ್ರಂಥಾಲಯದಲ್ಲಿ ಶಾಸಕ ಹ್ಯಾರಿಸ್ ಕಚೇರಿ: ಬೀಗ ಹಾಕಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಡೆ!

By Suvarna NewsFirst Published May 16, 2022, 4:44 AM IST
Highlights

* ರಂಗ ಮಂದಿರದಲ್ಲಿ ಶಾಸಕರ ಕಚೇರಿ: ಅಸಮಾಧಾನ

* ದೊಮ್ಮಲೂರಿನಲ್ಲಿರುವ ಬಯಲು ರಂಗ ಮಂದಿರ, ಗ್ರಂಥಾಲಯ

* ಶಾಸಕರ ಕಚೇರಿಯ ನಾಮಫಲಕ, ಮುಚ್ಚಿದ ಸ್ಥಿತಿಯಲ್ಲಿರುವ ಜಾಗ

* 30 ವರ್ಷದ ಹಿಂದೆ ದಿ.ಶ್ರೀನಿವಾಸರೆಡ್ಡಿ ನಿರ್ಮಿಸಿದ್ದ ರಂಗ ಮಂದಿರ

ಬೆಂಗಳೂರು(ಮೇ.16): ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆಯಾಗಿ ನಿರ್ಮಾಣಗೊಂಡಿರುವ ದೊಮ್ಮಲೂರಿನ ಶಿವಕುಮಾರ ಸ್ವಾಮೀಜಿ ಬಯಲು ರಂಗಮಂದಿರ ಕಟ್ಟಡ ಹಾಗೂ ಗ್ರಂಥಾಲಯ ಜಾಗವನ್ನು ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಕಚೇರಿಯಾಗಿ ಬದಲಿಸಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ದೊಮ್ಮಲೂರು ಬಸ್‌ ನಿಲ್ದಾಣದ ಹಿಂಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಬಯಲು ರಂಗ ಮಂದಿರ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿತ್ತು. ರಂಗಮಂದಿರದ ಮೊದಲ ಮಹಡಿಯನ್ನು ಗ್ರಂಥಾಲಯವಾಗಿ ಮಾರ್ಪಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿತ್ತು. ಒಟ್ಟಾರೆ ರಂಗಮಂದಿರ ನವೀಕರಣ ಮತ್ತಿತರ ಕಾಮಗಾರಿಗಳಿಗಾಗಿ ಬಿಬಿಎಂಪಿ .3.1 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿತ್ತು. ಜತೆಗೆ ರಂಗಮಂದಿರದ ಮುಂಭಾಗದಲ್ಲಿನ ಖಾಲಿ ಮೈದಾನ ಹತ್ತಾರು ವರ್ಷದಿಂದ ಮಕ್ಕಳು ಆಟ ಆಡಲು ಬಳಕೆಯಾಗುತ್ತಿತ್ತು.

Latest Videos

ಹೀಗಿರುವಾಗ ಏಕಾಏಕಿ ರಂಗಮಂದಿರ ಕಟ್ಟಡದಲ್ಲಿ ಎನ್‌.ಎ.ಹ್ಯಾರಿಸ್‌ ಅವರ ಶಾಸಕರ ಕಚೇರಿಯನ್ನು ತೆರೆಯಲಾಗಿದೆ. ಈಗಾಗಲೇ ಎನ್‌.ಎ.ಹ್ಯಾರಿಸ್‌ ಅವರ ಶಾಸಕರ ಕಚೇರಿ ಬೇರೆಡೆ ಇದೆ. ಆದರೂ ಈ ವಾರ್ಡ್‌ನಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಜಾಗದಲ್ಲಿ ಹೊಸದಾಗಿ ಕಚೇರಿ ಮಾಡಲಾಗಿದೆ. ಕಚೇರಿ ಮಾಡಿದ ದಿನದಿಂದಲೂ ಬಹುತೇಕ ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಇದ್ದು, ಕಾಂಪೌಂಡ್‌ ಗೇಟ್‌ಗೆ ಸಹ ಬೀಗ ಹಾಕಲಾಗಿದೆ. ಹೀಗಾಗಿ ರಂಗಮಂದಿರದ ಖಾಲಿ ಜಾಗದಲ್ಲಿ ಮಕ್ಕಳು ಆಟ ಆಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

30 ವರ್ಷಗಳ ಹಿಂದೆ ದಿವಂಗತ ಪಟೇಲ್‌ ಶ್ರೀನಿವಾಸರೆಡ್ಡಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುವಾಗಲು ಬಯಲು ರಂಗಮಂದಿರ ನಿರ್ಮಿಸಿದ್ದರು. ಶಂಕರ್‌ನಾಗ್‌ ಹೆಸರಿನಲ್ಲಿದ್ದ ರಂಗಮಂದಿರಕ್ಕೆ ಇತ್ತೀಚೆಗೆ ಶಿವಕುಮಾರ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಬಿಬಿಎಂಪಿ ಕಚೇರಿ ನೀಡಿದೆ: ಶಾಸಕ ಹ್ಯಾರಿಸ್‌ ಸ್ಪಷ್ಟನೆ

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಹ್ಯಾರಿಸ್‌, ಬಿಬಿಎಂಪಿಯು ಶಾಸಕರ ಕಚೇರಿಯನ್ನು ಮಾಡಿ ನಮಗೆ ಹಸ್ತಾಂತರಿಸಿದ್ದಾರೆ. ಏನೇ ಆಕ್ಷೇಪಣೆಗಳಿದ್ದರೂ ಬಿಬಿಎಂಪಿಗೆ ಕೇಳಬೇಕು. ಇಷ್ಟಕ್ಕೂ ಜನರ ಅಹವಾಲು ಸ್ವೀಕರಿಸಿ ಸರ್ಕಾರಿ ಕೆಲಸ ಮಾಡಲು ಶಾಸಕರ ಕಚೇರಿ ತೆರೆಯಲಾಗಿದೆ. ಬಿಬಿಎಂಪಿಗೆ ಸೇರಿದ ಸ್ಥಳದಲ್ಲಿ ಶಾಸಕರ ಕಚೇರಿ ತೆರೆಯುವುದು ತಪ್ಪೇನೂ ಅಲ್ಲ. ಅದು ಸ್ಥಳೀಯರ ಅನುಕೂಲಕ್ಕಾಗಿ ಅನಿವಾರ್ಯ. ಆದರೆ ಕೆಲವು ಕಿಡಿಗೇಡಿಗಳು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದರು.

click me!