- ಒಂದು ತಿಂಗಳಲ್ಲಿಯೇ 350 ಮಂದಿಗೆ ಡೆಂಘೀ ದೃಢ
- ಉಡುಪಿ, ಮೈಸೂರು, ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಜಾಸ್ತಿ
- ಮಳೆ ಸುರಿಯುತ್ತಿರುವ ಪರಿಣಾಮ ಸೊಳ್ಳೆ ಉತ್ಪತ್ತಿ ಹೆಚ್ಚಳ
ವರದಿ: ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಮೇ.16): ಪೂರ್ವ ಮುಂಗಾರು ಮತ್ತು ಅಕಾಲಿಕ ಮಳೆಗೆ ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚಳವಾಗಿದ್ದು, ಕಳೆದ ನಾಲ್ಕು ವಾರದಲ್ಲಿ 350 ಮಂದಿಯಲ್ಲಿ ಡೆಂಘೀ ದೃಢಪಟ್ಟಿದೆ. ಅದರಲ್ಲೂ, ಉಡುಪಿಯಲ್ಲಿ ಒಂದೇ ತಿಂಗಳಲ್ಲಿ ಪ್ರಕರಣಗಳು ದುಪ್ಪಟ್ಟಾಗಿದ್ದು, ಮೈಸೂರು, ಬೆಂಗಳೂರು ಸೇರಿ ಎಂಟು ಜಿಲ್ಲೆಗಳಲ್ಲಿ ಡೆಂಘೀ ಕಾಟ ಹೆಚ್ಚಿದೆ.
ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದಲ್ಲಿ (ಜೂನ್-ಅಕ್ಟೋಬರ್) ಹೆಚ್ಚಿನ ಕಡೆ ನೀರುನಿಂತು ಸೊಳ್ಳೆ ಹಾವಳಿಯಿಂದ ಡೆಂಘೀ ಜ್ವರ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ, ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಚಂಡಮಾರುಗಳ ಅಕಾಲಿಕದಿಂದ ಮಳೆ ಸುರಿಯುತ್ತಿರುವ ಪರಿಣಾಮ ಸೊಳ್ಳೆ ಉತ್ಪತ್ತಿ ಹೆಚ್ಚಳವಾಗಿದೆ. ಹೀಗಾಗಿಯೇ, ಡೆಂಘೀ ಜ್ವರ ದಿಢೀರ್ ಏರಿಕೆ ಕಂಡಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಜನವರಿ 1 ರಿಂದ ಏಪ್ರಿಲ್ 15ವರೆಗೂ 998 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಏ.15 ರಿಂದ ಮೇ 13ವರೆಗೂ ನಾಲ್ಕು ವಾರಗಳಲ್ಲಿ 355 ಮಂದಿಗೆ ಡೆಂಘೀ ತಗುಲಿದ್ದು ದೃಢಪಟ್ಟಿದೆ. ಈ ನಡುವೆ ತೀವ್ರ ಜ್ವರಕ್ಕೀಡಾದ 8,300 ಮಂದಿಯನ್ನು ಶಂಕಿತರ ಡೆಂಘೀ ಪ್ರಕರಣಗಳು ಎಂದು ಗುರುತಿಸಲಾಗಿದೆ. ಅಲ್ಲದೆ, ಇಲಾಖೆಗೆ ಲಭ್ಯವಾಗದಂತೆ ಸಾವಿರಾರು ಮಂದಿ ಜ್ವರಕ್ಕೀಡಾಗಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೊರೋನಾ ಬಳಿಕ ಬೆಂಗ್ಳೂರಲ್ಲಿ ಮತ್ತೆರಡು ರೋಗಗಳ ಕಾಟ: ಎಚ್ಚರದಿಂದರಲು ಸೂಚನೆ
ಉಡುಪಿ ದುಪ್ಪಟ್ಟು- 8 ಜಿಲ್ಲೆ ಹೆಚ್ಚು:
ಉಡುಪಿಯಲ್ಲಿ ವರ್ಷಾರಂಭದಿಂದ ಏ.15ವರೆಗೂ 75 ಮಂದಿಯಲ್ಲಿ ಡೆಂಘೀ ಕಾಣಿಡಿಕೊಂಡಿತ್ತು. ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳು 150ಕ್ಕೆ ಹೆಚ್ಚಿವೆ. ಏ.15 ರಿಂದ ಮೇ 13 ನಡುವೆ ಬೆಂಗಳೂರಿನಲ್ಲಿ 102, ಮೈಸೂರಿನಲ್ಲಿ 35, ಕೊಪ್ಪಳ 21, ವಿಜಯಪುರ 20, ದಕ್ಷಿಣ ಕನ್ನಡ 12, ಚಿತ್ರದುರ್ಗ 12, ದಾವಣಗೆರೆ 13 ಮಂದಿ ಡೆಂಘೀ ದೃಢಪಟ್ಟಿದೆ. ನಾಲ್ಕು ವಾರದಲ್ಲಿ ಹೊಸದಾಗಿ 12 ತಾಲೂಕು, 120 ಹಳ್ಳಿಗಳಿಗೆ ಡೆಂಘೀ ಕಾಣಿಡಿಕೊಂಡಿದ್ದು, ರಾಜ್ಯದ 71 ತಾಲೂಕು, 720 ಹಳ್ಳಿಗಳನ್ನು ಡೆಂಘೀ ಪೀಡಿತ ಎಂದು ಗುರುತಿಸಲಾಗಿದೆ. ಸೊಳ್ಳೆ ನಿಯಂತ್ರಣ, ಲಾರ್ವ ನಾಶ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಆದರೆ, ಜ್ವರ ಕಾಣಿಸಿಕೊಂಡವರ ಸಂಖ್ಯೆ, ಡೆಂಘೀ ಪ್ರಕರಣ ಗಣನೀಯವಾಗಿ ಏರುತ್ತಿರುವುದು ಅಂಕಿಸಂಖ್ಯೆಗಳಿಂದ ಸ್ಪಷ್ಟವಾಗಿದ್ದು, ಆತಂಕ ಹೆಚ್ಚಿಸಿದೆ.
ಡೆಂಘೀ ಹೆಚ್ಚಿದರೆ ಸ್ಥಳೀಯರ ವಿರುದ್ಧ ಕೇಸ್
ಸಾಕಷ್ಟುಮುಂಜಾಗ್ರತಾ ಕ್ರಮದ ನಡುವೆಯೂ ಡೆಂಘೀ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಕೆಲ ಜಿಲ್ಲಾಡಳಿತಗಳು ಸಾರ್ವಜನಿಕರಿಗೆ ಸ್ವಚ್ಛತಾ ಬಗ್ಗೆ ಕ್ರಮಕೈಗೊಳ್ಳದಿದ್ದ ಕಾನೂನು ಕ್ರಮ ಎಚ್ಚರಿಕೆ ನೀಡಿವೆ. ‘ಅನುತ್ಪಾದಕ ವಸ್ತುಗಳು ಬಿದ್ದಿರುವ ಕಡೆ ಸೊಳ್ಳೆಗಳು ಆಶ್ರಯ ಪಡೆಯದಂತೆ ಆ ಸ್ಥಳವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕಾಗಿರುವುದು ಸಾರ್ವಜನಿಕರ ಕರ್ತವ್ಯ. ಒಂದು ನಿಗದಿತ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಕೇಸುಗಳು ಬಂದರೆ ಆ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವವರ ವಿರುದ್ಧ ಐಪಿಸಿ ಸೆಕ್ಷನ್ 270 ರ ಅಡಿ ಕೇಸು ದಾಖಲಿಸಲಾಗುವುದು’ ಎಂದು ದಾವಣಗೆರೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Summer Tips : ಸೊಳ್ಳೆ ನಿಮ್ಮನೆ ಕಡೆ ತಿರುಗಿಯೂ ನೋಡ್ಬಾರದು ಅಂದ್ರೆ ಹೀಗೆ ಮಾಡಿ
ಅವಧಿ ಪೂರ್ವದ ಮಳೆಯಿಂದ ಏಪ್ರಿಲ್, ಮೇನಲ್ಲಿಯೇ ಡೆಂಘೀ ಪ್ರಕರಣಗಳು ಏರಿಕೆಯಾಗಿವೆ. ಹೆಚ್ಚು ಪ್ರಕರಣಗಳಿರುವ ಕಡೆ ನಿಯಂತ್ರಣಕ್ಕೆ ಕಠಿಣ ಕ್ರಮಗಳಿಗೆ ಜಿಲ್ಲಾಡಳಿತಗಳು ಮುಂದಾಗಿವೆ. ಸಾರ್ವಜನಿಕರು ಕೂಡಾ ತಮ್ಮ ಮನೆ ಸುತ್ತಮುತ್ತ ಸ್ವಚ್ಛತೆ ಕಡೆ ಗಮನ ಹರಿಸಿ, ಸೊಳ್ಳೆಗಳು ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೇ.16ರಂದು ರಾಜ್ಯಾದ್ಯಂತ ಡೆಂಘೀ ಜಾಗೃತ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
- ಡಿ.ರಂದೀಪ್, ಆಯುಕ್ತರು, ರಾಜ್ಯ ಆರೋಗ್ಯ ಇಲಾಖೆ