Karnataka highcourt: ಪುತ್ರಿಗೆ ತಂದೆಯಿಂದಲೇ ಲೈಂಗಿಕ ಕಿರುಕುಳ: ಹೊಸ ತನಿಖಾಧಿಕಾರಿ ನೇಮಕಕ್ಕೆ ‘ಹೈ’ ಸೂಚನೆ

By Kannadaprabha NewsFirst Published Jul 14, 2023, 5:24 AM IST
Highlights

ನಾಲ್ಕು ವರ್ಷದ ಪುತ್ರಿಗೆ ಸ್ವತಃ ತಂದೆಯೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸದ ಕೋರಮಂಗಲ ಠಾಣಾ ಪೊಲೀಸರ ವಿರುದ್ಧ ಕಿಡಿಕಾರಿರುವ ಹೈಕೋರ್ಚ್‌, ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿದೆ.

ಬೆಂಗಳೂರು (ಜು.14):  ನಾಲ್ಕು ವರ್ಷದ ಪುತ್ರಿಗೆ ಸ್ವತಃ ತಂದೆಯೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸದ ಕೋರಮಂಗಲ ಠಾಣಾ ಪೊಲೀಸರ ವಿರುದ್ಧ ಕಿಡಿಕಾರಿರುವ ಹೈಕೋರ್ಟ್, ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿದೆ.

ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತೆಯ ತಾಯಿ (ಆರೋಪಿಯ ಪತ್ನಿ) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಕೋರಮಂಗಲ ಠಾಣಾ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಹಲವು ದೋಷಗಳನ್ನು ಗಮನಿಸಿ, ಬೇರೊಬ್ಬರ ತನಿಖಾಧಿಕಾರಿ ನೇಮಕಕ್ಕೆ ಆದೇಶಿಸಿತು.

Latest Videos

 

'ಕೆಎಎಸ್‌ ನೇಮಕ ನೀತಿ ಪಿಎಸ್‌ಐಗೂ ಬರಲಿ' ಹೈಕೋರ್ಟ್‌ನಲ್ಲಿ ಪ್ರಬಲ ವಾದ

ಹೊಸದಾಗಿ ನೇಮಕಗೊಳ್ಳುವ ತನಿಖಾಧಿಕಾರಿ ಹತ್ತು ವಾರದಲ್ಲಿ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಬೇಕು. ಅಲ್ಲಿಯವರೆಗೆ ಈ ಮೊದಲು ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ಕುರಿತು ವಿಚಾರಣಾ ನ್ಯಾಯಾಲಯ ಯಾವುದೇ ಕ್ರಮಕ್ಕೆ ಮುಂದಾಗಬಾರದು. ಹೆಚ್ಚಿನ ತನಿಖೆ ನಡೆಸಿ ದೋಷಾರೋಪಪಟ್ಟಿಸಲ್ಲಿಕೆಯಾದ ನಂತರವೇ ಸಂಬಂಧಪಟ್ಟನ್ಯಾಯಾಲಯ ಕಾನೂನು ಪ್ರಕಾರ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪುತ್ರಿಯೊಂದಿಗೆ ಬೆತ್ತಲೆ ಸ್ನಾನ

ಪ್ರಕರಣದಲ್ಲಿ ದಂಪತಿಯು 2014ರಲ್ಲಿ ಮದುವೆಯಾಗಿತ್ತು. ಅವರಿಗೆ ಹೆಣ್ಣು ಮಗುವಿತ್ತು. ಆದರೆ, 2022ರ ಆ.24ರಂದು ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪತ್ನಿ ದೂರು ಸಲ್ಲಿಸಿದ್ದರು. ‘ನಾಲ್ಕು ವರ್ಷದ ಮಗಳನ್ನು ನಗ್ನಗೊಳಿಸಿ, ಆಕೆಯೊಂದಿಗೆ ಪತಿಯೂ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದರು. ಮಗುವಿನ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿದ್ದರು. ಮಗುವಿನ ಸಮ್ಮುಖದಲ್ಲೇ ಲೈಂಗಿಕ ಕ್ರಿಯೆ ನಡೆಸಲು ನನ್ನನ್ನು ಒತ್ತಾಯಿಸುತ್ತಿದ್ದರು. ಮಗು ಬಳಸುತ್ತಿದ್ದ ಐಪ್ಯಾಡ್‌ನಲ್ಲಿ ಮಕ್ಕಳ ಆಶ್ಲೀಲ ಚಿತ್ರಗಳನ್ನು ಡೌನ್‌ಲೋಡ್‌ ಮಾಡಿ ಅವುಗಳನ್ನು ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು. ಆದ್ದರಿಂದ, ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಪತ್ನಿ ಕೋರಿದ್ದರು.

ದೂರು ಆಧರಿಸಿ ಪತಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ 2022ರ ಅಕ್ಟೋಬರ್‌ನಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ತನಿಖೆಯಲ್ಲಿ ಹಲವು ಲೋಪಗಳಿದ್ದು, ಹೆಚ್ಚಿನ ತನಿಖೆ ನಡೆಸಲು ಸಂಬಂಧಪಟ್ಟಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಆಕೆ ಹೈಕೋರ್ಚ್‌ ಮೆಟ್ಟಿಲೇರಿದ್ದರು.

ತನಿಖೆ ಕಳಪೆ: ಪ್ರಕರಣ ಸಂಬಂಧ ಕೋರಮಂಗಲ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿನ ಹಲವು ದೋಷಗಳನ್ನು ಗಮನಿಸಿದ ಪೀಠ, ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿಚಾರಣೆಗೆ ಅಗತ್ಯವಿರುವ ಹಲವು ದಾಖಲೆ ಸಂಗ್ರಹಿಸಿಲ್ಲ. ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ದಾಖಲೆ ಸಂಗ್ರಹಿಸಲು ನಿರಾಕರಿಸಿದ್ದು, ತನಿಖೆ ಕಳಪೆಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

 

ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್

ಸಂತ್ರಸ್ತೆಯ ಹೇಳಿಕೆಯಲ್ಲಿ ಆರೋಪಿಯ ಹೆಸರನ್ನು ಉಲ್ಲೇಖಿಸಿದ್ದು, ಈ ಅಂಶವನ್ನು ಆರೋಪ ಪಟ್ಟಿಯಲ್ಲಿ ಸೇರಿಸಿಲ್ಲ. ವೈದ್ಯರ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆ ದಾಖಲಿಸಿಲ್ಲ. ಸಂತ್ರಸ್ತೆಯ ತಾಯಿಯನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಲ್ಲ. ಅಶ್ಲೀಲ ವಿಡಿಯೋಗಳಿದ್ದ ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಫೋನ್‌ ವಶಕ್ಕೆ ಪಡೆದಿಲ್ಲ. ಅವುಗಳ ಬಳಕೆಯ ಸ್ಥಳ ಉಲ್ಲೇಖಿಸಿಲ್ಲ. ಆರೋಪಿಯ ವಿಕೃತ ವರ್ತನೆಯ ಬಗ್ಗೆ ಸಂಬಂಧಿಕರ ಹೇಳಿಕೆ ಪಡೆದಿಲ್ಲ. ಮಗು ಅನುಭವಿಸಿರುವ ಮಾನಸಿಕ ಹಿಂಸೆಗೆ ಸಂಬಂಧಿಸಿದಂತೆ ಮನೋಶಾಸ್ತ್ರಜ್ಞರ ಹೇಳಿಕೆಯನ್ನೂ ದೋಷಾರೋಪಪಟ್ಟಿಯಲ್ಲಿ ಸೇರಿಸಿಲ್ಲ. ಉದ್ದೇಶಪೂರ್ವಕವಾಗಿ ಆರೋಪಿಯ ವಿರುದ್ಧ ದೋಷಾರೋಪಣೆ ಮಾಡಲು ನಿರ್ಲಕ್ಷಿಸಲಾಗಿದೆ. ಐಪ್ಯಾಡ್‌ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಈವರೆಗೂ ಲಭ್ಯವಾಗಿಲ್ಲ. ಹೀಗಿದ್ದರೂ, ಅಂತಿಮ ಆರೋಪ ಪಟ್ಟಿಸಲ್ಲಿಸಲಾಗಿದೆ ಎಂದು ಹೈಕೋರ್ಚ್‌ ಆದೇಶದಲ್ಲಿ ಕಿಡಿಕಾರಿದೆ.

click me!