ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ ಡ್ರೈವ್‌ನಲ್ಲಿ ಕಾಪಿ ಮಾಡಿ ವಿತರಿಸುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರು (ಜೂ.12): ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ ಡ್ರೈವ್‌ನಲ್ಲಿ ಕಾಪಿ ಮಾಡಿ ವಿತರಿಸುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ ಡ್ರೈವ್ ಮಾಡಿ ಹಂಚಿಕೆ ಮಾಡಿದ ಆರೋಪದಲ್ಲಿ ತನ್ನ ವಿರುದ್ಧ ಹಾಸನದ ಸಿಇಎನ್ ಪೊಲೀಸರು ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಪ್ರಮುಖ ಆರೋಪಿ ಎನ್ನಲಾದ ಹಾಸನದ ರವೀಂದ್ರ ನಗರದ ನಿವಾಸಿ ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ, ಆರೋಪಿ ತನಿಖಾಧಿಕಾರಿ ಮುಂದೆ ಹಾಜರಾಗುವವರೆಗೆ ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಅರ್ಜಿದಾರರು ಕೃತ್ಯ ಎಸಗಿರಬಹುದು ಅಥವಾ ಇಲ್ಲದೇ ಇರಬಹುದು. ಆದರೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ ಡ್ರೈವ್‌ನಲ್ಲಿ ಕಾಪಿ ಮಾಡಿ ವಿತರಿಸುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ. ಇಂತಹ ವಿಚಾರಗಳಲ್ಲಿ ಪುರುಷ ಏನೂ ಕಳೆದುಕೊಳ್ಳುವುದಿಲ್ಲ. ಮಹಿಳೆಯನ್ನು ಕೆಟ್ಟದಾಗಿ ಚಿತ್ರಿಸಿ ಮಂದ ಬೆಳಕಿನಲ್ಲಿ ಇರಿಸಿದಂತಾಗುತ್ತದೆ. ಇದರಿಂದ ಮಹಿಳೆ ತೀವ್ರ ಅಪಮಾನಕ್ಕೆ ಒಳಗಾಗುತ್ತಾರೆ. ಅಂತಹ ಕೃತ್ಯವನ್ನು ಯಾರೂ ಮಾಡಬಾರದು ಎಂದು ಬೇಸರದಿಂದ ನ್ಯಾಯಪೀಠ ನುಡಿಯಿತು.
ಜಾತಿ ಪ್ರಮಾಣಪತ್ರ ರದ್ದು ಅಧಿಕಾರ ತಹಶೀಲ್ದಾರ್‌ಗಿಲ್ಲ: ಹೈಕೋರ್ಟ್ ಆದೇಶ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಅವರಿಂದ ಯಾವುದೇ ಒಂದು ಸಣ್ಣ ವಸ್ತುವನ್ನೂ ವಶಪಡಿಸಿಕೊಂಡಿಲ್ಲ. ರಾಜಕೀಯ ದ್ವೇಷ ಹಾಗೂ ದುರುದ್ದೇಶದಿಂದ ಅರ್ಜಿದಾರರನ್ನು ಗುರಿ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ವಿಚಾರಣೆಗೆ ಹಾಜರಾಗಲು ಅರ್ಜಿದಾರರು ಸಿದ್ಧರಿದ್ದಾರೆ. ಅವರನ್ನು ಬಂಧಿಸದಂತೆ ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸದ್ಯದ ಮಟ್ಟಿಗೆ ಪ್ರಕರಣದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಆರೋಪಿ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿ. ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಲಾಗದು.
ಬಂಧನ ಭೀತಿಯಿದ್ದರೆ ಅರ್ಜಿದಾರರು ನಿರೀಕ್ಷಣಾ ಜಾಮೀನು ಅಥವಾ ಇನ್ನಿತರ ರೀತಿಯ ಜಾಮೀನನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಪಡೆದುಕೊಳ್ಳಬಹುದು. ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕೋರಿದ ಅರ್ಜಿಗಳನ್ನು ಈ ಕೋರ್ಟ್ ವಿಚಾರಣೆ ನಡೆಸಲಿದೆ. ಜಾಮೀನು ಅಥವಾ ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸುವಂತೆ ಕೋರುವ ಮೂಲಕ ಈ ನ್ಯಾಯಾಲಯವನ್ನು ಜಾಮೀನು ಕೋರ್ಟ್ ಆಗಿ ಪರಿವರ್ತಿಸಬೇಡಿ. ತನಿಖಾಧಿಕಾರಿ ಮುಂದೆ ಹಾಜರಾಗಿ. ಅಲ್ಲಿಯವರೆಗೆ ನಾನು ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ. ಇನ್ನೂ ಪ್ರಕರಣದಲ್ಲಿ ಯಾರು ಇದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಲಿ ಎಂದು ಸ್ಪಷ್ಟವಾಗಿ ನುಡಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.
ಬಿಟ್ಕಾಯಿನ್ ಪ್ರಕರಣ: ಡಿವೈಎಸ್ಪಿ ಬಂಧಿಸದಂತೆ ಸಿಐಡಿಗೆ ಹೈಕೋರ್ಟ್ ಸೂಚನೆ
ಇದಕ್ಕೂ ಮುನ್ನ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್, ಪ್ರಕರಣದಲ್ಲಿ ಶರತ್ ಅವರ ಪಾತ್ರವಿದೆ. ಅರ್ಜಿದಾರರ ಜಾಗದಲ್ಲೇ ಪೆನ್‌ಡ್ರೈವ್ ತಯಾರಿಸಿ, ಅವರು ಮೂಲಕ ಹಂಚಿಕೆ ಸಹ ಆಗಿದೆ. ಶರತ್‌ಗೆ ಸೇರಿದ ಜಾಗದಲ್ಲಿ ಎಸ್‌ಐಟಿ ತಂಡ ವಶಪಡಿಸಿಕೊಂಡಿರುವ ಡಿವಿಆರ್ ಜತೆ ಟ್ಯಾಬ್ಲೆಟ್ ಮತ್ತು ಹಲವು ಸಿಡಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಅವರಿಗೆ ಯಾವುದೇ ಪರಿಹಾರ ನೀಡಬಾರದು ಎಂದು ಕೋರಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಶರತ್ ಕುರಿತು ಕೇವಲ ಮಾಹಿತಿ ಇದೆ ಎಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗದು. ಆರೋಪಿ ವಿರುದ್ಧ ಕಳೆದ 30 ದಿನಗಳಿಂದ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋದ ನಂತರ ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಪ್ರತಿಪಾದಿಸಿದರು.