RSS Registration row: ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಅಲ್ಲ; ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಸಂಘಕ್ಕೆ ಪ್ರಮಾಣ ಪತ್ರ ಬೇಕಿಲ್ಲ

Kannadaprabha News   | Kannada Prabha
Published : Jun 18, 2026, 10:13 AM IST
Senior Supreme Court lawyer Mahesh Jethmalani column on the RSS registration controversy

ಸಾರಾಂಶ

ಪ್ರಿಯಾಂಕ್‌ ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ, ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆಗೆ ಸೂಚಿಸುವ ಅಧಿಕಾರವನ್ನಲ್ಲ. 

ಮಹೇಶ್‌ ಜೇಠ್ಮಲಾನಿ

- ಸುಪ್ರೀಂಕೋರ್ಟ್‌ನ ಹಿರಿಯ ವಕೀಲ

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ(Karnataka Home Minister Priyank kharge) ಅವರು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌(RSS Chief Mohan bhagwat) ಅ‍ವರಿಗೆ ಬರೆದ ಪತ್ರ, ಕೇವಲ ಒಂದು ಸಾಂವಿಧಾನಿಕ ವಿಚಾರಣೆ ಅಷ್ಟೇ ಆಗಿಲ್ಲ, ಬದಲಾಗಿ ಅದರ ಹಿಂದೆ ಲೆಕ್ಕಾಚಾರದ ರಾಜಕೀಯ ಪ್ರಚೋದನೆಯ ಉದ್ದೇಶವೂ ಅಡಗಿದೆ. ಆರೆಸ್ಸೆಸ್‌(RSS) ಬಗ್ಗೆ ಅವರು ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಕಾನೂನಿನ ಮಾನ್ಯತೆಯಾಗಲಿ, ಪ್ರಮಾಣವಾಗಲಿ ಇಲ್ಲ. ಕೇವಲ ಊಹೆಗಳ ಮೇಲೆ ಬರೆಯಲಾದ ಈ ಪತ್ರ ಕುಟುಂಬ ರಾಜಕಾರಣದ ಅಹಂಕಾರ ಪ್ರದರ್ಶನವಾಗಿದೆ.

ಸುಮಾರು ನೂರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಕ್ತವಾಗಿ, ಸಾರ್ವಜನಿಕರ ಕಣ್ಣೆದುರೇ ದೇಶ ಸೇವೆ ಮಾಡಿದೆ. ಸರ್ಕಾರದ ಬೆಂಬಲವಿಲ್ಲದೆ ಚಾರಿತ್ರ್ಯ ನಿರ್ಮಾಣ, ಶಿಸ್ತು ಬೆಳೆಸುವುದು, ಸಾಮಾಜಿಕ ಸಾಮರಸ್ಯ ಬಲಪಡಿಸುವಂಥ ಕಾರ್ಯ ಮಾಡಿಕೊಂಡು ಬಂದಿದೆ. ಆದರೆ ಕೆಲ ಕಾಂಗ್ರೆಸ್‌ ನಾಯಕರು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಸಂದೇಹಾಸ್ಪದ ರಾಜತಾಂತ್ರಿಕತೆ ಕಾಯ್ದುಕೊಂಡು ಬಂದಿದ್ದಾರೆ. ಅವರು ಚೀನಾದ ಕಮ್ಯುನಿಸ್ಟ್‌ ಪಕ್ಷದ ಜತೆಗೆ ತಿಳಿವಳಿಕೆಯ ಜ್ಞಾಪನಾ ಪತ್ರಕ್ಕೆ ಸಹಿಹಾಕಲು ಚೀನಾಗೆ ತೆರಳುತ್ತಾರೆ. ರಾಜಕೀಯ ಟೀಕೆಗಳಿಗೆ ಹೆದರಿ ಈ ವಿಚಾರದಲ್ಲಿ ರಹಸ್ಯ ಕಾಯ್ದುಕೊಳ್ಳುತ್ತಾರೆ. ಆರೆಸ್ಸೆಸ್‌ ಮತ್ತು ಕಾಂಗ್ರೆಸ್‌ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಒಬ್ಬರು ಭಾರತದ ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ 100 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಮತ್ತೊಬ್ಬರು ವಿದೇಶಿ ನೆರಳಿನಲ್ಲಿ ಕೂತಿದ್ದಾರೆ.

ಸಂಘ ರಚಿಸುವ ಅಧಿಕಾರ ಸರ್ಕಾರ ನೀಡಿದ್ದಲ್ಲ:

ಸಂವಿಧಾನದ 19(1)(ಸಿ)ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಸಂಘ, ಒಕ್ಕೂಟ ಅಥವಾ ಸಹಕಾರಿ ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕು ಖಾತರಿಪಡಿಸುತ್ತದೆ. ಇದು ಸಂವಿಧಾನದತ್ತ ಸ್ವಾತಂತ್ರ್ಯವೇ ಹೊರತು ಸರ್ಕಾರ ನೀಡಿದ ಅಧಿಕಾರವಲ್ಲ. ಇನ್ನು 19(4)ನೇ ವಿಧಿಯು ಈ ಸ್ವಾತಂತ್ರ್ಯಗಳಿಗೆ ನಿರ್ದಿಷ್ಟ ಸಾಂವಿಧಾನಿಕ ಹಾಗೂ ಕಾನೂನು ಆಧಾರದ ಮೇಲೆ ಮಾತ್ರ ನ್ಯಾಯಯುತ ನಿರ್ಬಂಧಗಳನ್ನು ಹೇರಲು ಅವಕಾಶ ನೀಡುತ್ತದೆ. ಪ್ರತಿಯೊಂದು ಸ್ವಯಂಸೇವಾ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಅಥವಾ ಕಾರ್ಯಾಚರಣೆ ಆರಂಭಿಸುವ ಮೊದಲು ನೋಂದಣಿ ಆಗುವುದು ಕಡ್ಡಾಯ ಎಂದು ಸಂವಿಧಾನದಲ್ಲೆಲ್ಲೂ ಹೇಳಿಲ್ಲ.

ಆರೆಸ್ಸೆಸ್‌ ಒಂದು ಸಮಾನ ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಆಲೋಚನೆಯ ನಾಗರಿಕರ ಸ್ವಯಂಸೇವಾ ಸಂಘಟನೆಯಾಗಿದೆ. ಈ ಸಂಘಟನೆಗೆ ಯಾವುದೇ ಸಚಿವನ ಅಸ್ವಿತ್ವದ ಪ್ರಮಾಣ ಪತ್ರವಾಗಲಿ, ಕುಟುಂಬ ರಾಜಕಾರಣದ ನಾಯಕನ ರಾಜಕೀಯ ಅನುಮತಿ ಪತ್ರವಾಗಲಿ ಬೇಕಿಲ್ಲ. ಕಾಂಗ್ರೆಸ್ ನಾಯಕನೊಬ್ಬ ವಿವಾದ ಸೃಷ್ಟಿಗೆ ಹೊರಟಿದ್ದಾನೆಂಬ ಮಾತ್ರಕ್ಕೆ ಈ ಸಂಘಟನೆಗೆ ಯಾವುದೇ ನೋಂದಣಿಯ ಅಗತ್ಯವೂ ಇಲ್ಲ.

ಆರೆಸ್ಸೆಸ್‌ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಅದರ ಅಸ್ತಿತ್ವ ಸಾಬೀತುಪಡಿಸಬೇಕೆಂಬ ಪ್ರಿಯಾಂಕ್‌ ಖರ್ಗೆ ಅವರ ಬೇಡಿಕೆಗೆ ಸಾಂವಿಧಾನಿಕ ಪಠ್ಯದಲ್ಲಾಗಲಿ, ಕಾನೂನು ಬಾಧ್ಯತೆ ಅಥವಾ ಒಪ್ಪಿತ ತತ್ವಗಳಲ್ಲಾಗಲಿ ಮಾನ್ಯತೆ ಇಲ್ಲ. ಪ್ರಿಯಾಂಕ್‌ ಖರ್ಗೆ ಅವರದ್ದು ಕಾನೂನು ಮಾನ್ಯತೆಯಿಲ್ಲದ ತರ್ಕಕ್ಕೆ ನಿಲುಕದ ಬೇಡಿಕೆ.

ಸಂವಿಧಾನಕ್ಕಿಂತ ಪ್ರಿಯಾಂಕ್‌ ಖರ್ಗೆ ದೊಡ್ಡವರಲ್ಲ:

ಕಾನೂನು ಮೂಲಕ ನಡೆಸಲ್ಪಡುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ, ಆತ ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ಸರಿ, ಕೇವಲ ತಾನು ಸಾರ್ವಜನಿಕ ಹುದ್ದೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಯಾವುದೇ ಆದೇಶಗಳನ್ನು ನೀಡುವುದಾಗಲಿ ಮತ್ತು ಅದನ್ನು ಪಾಲನೆ ಮಾಡಬೇಕೆಂದು ಬಯಸುವುದಾಗಲಿ ಮಾಡುವಂತಿಲ್ಲ. ಪ್ರಿಯಾಂಕ್‌ ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ ಅಥವಾ ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನಲ್ಲ.

ಪ್ರಿಯಾಂಕ್‌ ಖರ್ಗೆ ಅವರ ಕಾನೂನುಬದ್ಧವಲ್ಲದ ಇಂಥ ಯಾವುದೇ ಬೇಡಿಕೆಗಳಿಗೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮಾನ್ಯತೆ ಇಲ್ಲ. ಕುಟುಂಬ ರಾಜಕಾರಣದ ಮೂಲಕ ಅಧಿಕಾರ ಪಡೆದಿರುವ ವ್ಯಕ್ತಿಯು ಸಚಿವ ಸ್ಥಾನದಲ್ಲಿದ್ದಾನೆ ಎಂಬ ಮಾತ್ರಕ್ಕೆ ಆತ ಸಂವಿಧಾನಕ್ಕಿಂತ ದೊಡ್ಡವನಾಗುವುದೂ ಇಲ್ಲ.

ಅಧಿಕಾರವೆಂಬುದು ಶಾಶ್ವತವಲ್ಲ. ಇದನ್ನು ಮನಗಾಣಿಯೇ ಥೋಮಸ್‌ ಫುಲ್ಲರ್‌ ಅ‍ವರು, ‘ನೀವು ಎಷ್ಟೇ ಎತ್ತರದಲ್ಲಿದ್ದರೂ ಕಾನೂನು ನಿಮಗಿಂತ ಮೇಲೆಯೇ ಇರುತ್ತದೆ’ ಎಂದಿದ್ದಾರೆ. ಈ ಮಾತುಗಳನ್ನು ನಂತರ ಲಾರ್ಡ್‌ ಡೆನ್ನಿಂಗ್‌ ಅವರು ‘ದಿ ಡ್ಯು ಪ್ರೊಸೆಸ್‌ ಆಫ್‌ ಲಾ’ದಲ್ಲಿ ಶಾಶ್ವತಗೊಳಿಸಿದ್ದಾರೆ. ಈ ಮಾತು ಪ್ರಿಯಾಂಕ್‌ ಖರ್ಗೆ ಅವರ ಬೇಡಿಕೆ ವಿಚಾರದಲ್ಲೂ ಅನ್ವಯ ಆಗುತ್ತದೆ.

ಕೋರ್ಟ್‌ ತೀರ್ಪುಗಳ ಉದ್ದೇಶಪೂರ್ವಕ ನಿರ್ಲಕ್ಷ್ಯ:

ಆರೆಸ್ಸೆಸ್‌ ತನ್ನ ದೇಣಿಗೆಯ ಮೂಲ, ಖರ್ಚು-ವೆಚ್ಚ, ಆಸ್ತಿಗಳು ಮತ್ತು ತೆರಿಗೆಯ ಮಾಹಿತಿ ಬಹಿರಂಗಪಡಿಸಬೇಕೆನ್ನುವ ಪ್ರಿಯಾಂಕ್‌ ಖರ್ಗೆ ಅವರ ಒತ್ತಾಯವು ಈಗಾಗಲೇ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ. ಇನ್ನು ಗುರುದಕ್ಷಿಣೆ ಮೇಲಿನ ತೆರಿಗೆಯ ವಿಚಾರಕ್ಕೆ ಬಂದರೆ, ಆರೆಸ್ಸೆಸ್‌ ತನ್ನ ಸದಸ್ಯರಿಂದ ಸ್ವಯಂಪ್ರೇರಿತವಾಗಿ ಪಡೆಯುವ ದೇಣಿಗೆಯು ಸಾಂವಿಧಾನಿಕ ನ್ಯಾಯಾಲಯದಿಂದ ಈಗಾಗಲೇ ಪರಿಶೀಲನೆಗೂ ಒಳಪಟ್ಟಿದೆ. ಆದಾಯ ತೆರಿಗೆ ಕಮಿಷನರ್‌ ಮತ್ತು ಆರೆಸ್ಸೆಸ್‌ ನಡುವಿನ ಪ್ರಕರಣದಲ್ಲಿ ಪಟ್ನಾ ಹೈಕೋರ್ಟ್‌ ‘ಪರಸ್ಪರ ಸಹಕಾರ’ದ ತತ್ವವನ್ನು ಎತ್ತಿಹಿಡಿದಿದ್ದು, ಗುರುದಕ್ಷಿಣೆಯು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.

ಆರೆಸ್ಸೆಸ್‌ ಯಾವತ್ತೂ ಕಾನೂನಿನ ವಿನಾಯ್ತಿಯನ್ನು ಕೇಳಿಯೇ ಇಲ್ಲ ಆದರೆ, ಕಾನೂನು ಹೇರದ ಬಾಧ್ಯತೆಗಳ ಒತ್ತಾಯಪೂರ್ವಕ ಹೇರಿಕೆಯನ್ನು ವಿರೋಧಿಸಿದೆ ಅಷ್ಟೆ.

ನೂರು ವರ್ಷಗಳ ಕಾಲ ಸಂಘವು ಮುಕ್ತವಾಗಿ ಕಾರ್ಯನಿರ್ವಹಿಸಿದೆ, ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. ನಿರ್ಬಂಧಗಳು, ರಾಜಕೀಯ ವಿರೋಧ ಮತ್ತು ಮಾನ್ಯತೆ ರದ್ದು ಮಾಡುವ ಸಂಬಂಧ ಕಾಂಗ್ರೆಸ್‌ ಸರ್ಕಾರಗಳು ಮಾಡಿದ ಹಲವು ಪ್ರಯತ್ನಗಳನ್ನು ಎದುರಿಸಿ ನಿಂತಿದೆ. ಇದನ್ನೆಲ್ಲ ತೆರಿಗೆದಾರರ ಹಣದಿಂದಾಗಲಿ ಹಾಗೂ ವಿದೇಶಿ ದೇಣಿಗೆಯ ನೆರವಿಲ್ಲದೆ ಸಾಧಿಸಿದೆ.

ಜೂನಿಯರ್‌ ಖರ್ಗೆ ಅವರು ಭಾಗವತ್‌ ಅವರನ್ನುದ್ದೇಶಿಸಿ ಉತ್ತರದಾಯಿತ್ವದ ಹೆಸರಿನಲ್ಲಿ ಬರೆದ ಪತ್ರವು ಕಾನೂನಿನ ತಪ್ಪುಗ್ರಹಿಕೆ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ರೀತಿಯ ಬೇಡಿಕೆ ಪತ್ರವು ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಗೂ ಮತ್ತು ತಾವು ರಕ್ಷಿಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿರುವ ಪ್ರಜಾತಾಂತ್ರದ ಸಂಪ್ರದಾಯ ಎರಡಕ್ಕೂ ಸರಿಹೊಂದುವುದಿಲ್ಲ.

ಕುಟುಂಬ ರಾಜಕಾರಣಕ್ಕೆ ಸೇರಿದ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿಯೇ ಇರಲಿ, ಅಂಥ ವ್ಯಕ್ತಿಯಿಂದ ಆರೆಸ್ಸೆಸ್‌ಗೆ ಉತ್ತಮ ನಡತೆಯ ಪ್ರಮಾಣ ಪತ್ರ ಬೇಕಿಲ್ಲ. ಕಾನೂನು ಎಲ್ಲರಿಗಿಂತಲೂ ದೊಡ್ಡದು. ಅದೇ ರೀತಿ ಜೂನಿಯರ್‌ ಖರ್ಗೆ ಅವರ ಅಹಂಕಾರದ ಹಾಗೂ ಅನಗತ್ಯ ಬೇಡಿಕೆಗಳು ಕಾನೂನಿನ ಮುಂದೆ ಯಾವುದೇ ಮೌಲ್ಯ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ
Karnataka News Live: RSS Registration row - ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಅಲ್ಲ; ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಸಂಘಕ್ಕೆ ಪ್ರಮಾಣ ಪತ್ರ ಬೇಕಿಲ್ಲ