RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ

Kannadaprabha News   | Kannada Prabha
Published : Jun 18, 2026, 08:35 AM IST
RSS Registration of private organizations is not mandatory

ಸಾರಾಂಶ

ಭಾರತೀಯ ಸಂವಿಧಾನವು ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ನೀಡಿದೆ. ಈ ಸಂಸ್ಥೆಗಳ ನೋಂದಣಿಯು ಕಡ್ಡಾಯವಲ್ಲ, ಬದಲಾಗಿ ಐಚ್ಛಿಕವಾಗಿದ್ದು, ಸರ್ಕಾರಿ ಸವಲತ್ತುಗಳು ಮತ್ತು ಕಾನೂನಾತ್ಮಕ ವ್ಯಕ್ತಿತ್ವ ಪಡೆಯಲು ಮಾತ್ರ ನೋಂದಣಿ ಅವಶ್ಯಕವಾಗಿದೆ.

ಡಾ।। ಅರುಣ ಶ್ಯಾಮ್.ಎಂ

ಹಿರಿಯ ವಕೀಲರು ಮತ್ತು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಇಲ್ಲಿ ಪ್ರಜೆಗಳೇ ಪ್ರಭುಗಳು, ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಸರ್ಕಾರದ ವ್ಯವಸ್ಥೆ ರೂಪಿಸಲಾಗಿದೆ. ಇಡೀ ದೇಶದ ವ್ಯವಸ್ಥೆ ಡಾ.ಬಿ.ಆರ್‌.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಚೌಕಟ್ಟಿನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂವಿಧಾನದ ಆಶೋತ್ತರಕ್ಕೆ ವಿರುದ್ಧವಾಗಿ ಯಾವುದೇ ಸಂಗತಿಗಳು ನಡೆಯುವಂತಿಲ್ಲ. ದೇಶದಲ್ಲಿ ಕಾನೂನು ಕೂಡ ಈ ವ್ಯಾಪ್ತಿಯಲ್ಲಿಯೇ ಇರಬೇಕಾಗುತ್ತದೆ. ವ್ಯಾಪ್ತಿ ಮೀರಿದ ಕಾನೂನು ಕೂಡ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ಅಸಿಂಧು ಅಥವಾ ಸಂವಿಧಾನ ವಿರೋಧಿ ಎಂದೇ ಘೋಷಿಸಲ್ಪಡುವುದು.

ಈ ದೇಶದ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಬಂದಂತಹ ಮೂಲಭೂತ ಹಕ್ಕುಗಳಲ್ಲಿ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ಸಂಘ, ಒಕ್ಕೂಟ ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸುವ, ನಡೆಸುವ ಅಥವಾ ಅಂತಹ ಸ್ಥಾಪಿತವಾದ ಸಂಘ-ಸಂಸ್ಥೆ, ಒಕ್ಕೂಟಗಳ ವ್ಯವಹಾರಗಳನ್ನು ಮುಕ್ತಾಯಗೊಳಿಸುವ ಹಕ್ಕುಗಳು ತನ್ನಿಂದ ತಾನೇ ಅಸ್ತಿತ್ವದಲ್ಲಿವೆ. ಸಂವಿಧಾನ ಕೇವಲ ಈ ಹಕ್ಕನ್ನು ನೀಡಿ ಒಕ್ಕೂಟಗಳನ್ನು ಸ್ಥಾಪಿಸುವ ಅಥವಾ ನಡೆಸುವ ಹಕ್ಕನ್ನು ನೀಡಿದೆಯೇ ಹೊರತು, ಎಲ್ಲಿಯೂ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ನೋಂದಣಿ ಎನ್ನುವುದು ಐಚ್ಛಿಕ ವಿಷಯವಾಗಿಯೇ ಉಳಿದುಕೊಂಡಿದೆ. ನ್ಯಾಯಾಲಯಗಳು ಕೂಡ ಹಲವಾರು ಪ್ರಕರಣಗಳಲ್ಲಿ ನೋಂದಣಿ ಕಡ್ಡಾಯವಲ್ಲ ಎಂದೇ ಹೇಳಿವೆ.

ಅಪೇಕ್ಷೆ ಪಟ್ಟರಷ್ಟೇ ನೋಂದಣಿ

ಸಂವಿಧಾನದ ಪರಿಚ್ಛೇದ ೧೯(4)ರ ಪ್ರಕಾರ ಸಂಘ, ಒಕ್ಕೂಟ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ಕೊಟ್ಟ ಸ್ವಾತಂತ್ರ್ಯದಲ್ಲಿ ಕೆಲವೊಂದು ಮಿತಿಗಳನ್ನು ಕಾನೂನು ಮುಖಾಂತರ ಹೇರಲು ಸರ್ಕಾರಕ್ಕೆ ಅವಕಾಶ ಕೊಟ್ಟಿದೆ. ಅವುಗಳಲ್ಲಿ ದೇಶದ ಅಖಂಡತೆ, ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಯ ಆಧಾರದಲ್ಲಿ ಕಾನೂನು ಮುಖಾಂತರ ನಿಯಂತ್ರಿಸಲು ಅವಕಾಶವಿದೆ. ಈ ವಿಷಯಕ್ಕೆ ಬರುವ ಕಾನೂನುಗಳೆಲ್ಲಾ ಸಂವಿಧಾನದ ಚೌಕಟ್ಟು ವ್ಯಾಪ್ತಿಯನ್ನು ಮೀರುವಂತಿಲ್ಲ ಮತ್ತು ಕಾನೂನಿನ ಹೊರತಾಗಿ ಈ ಮೂಲಭೂತ ಹಕ್ಕನ್ನು ನಿಯಂತ್ರಿಸುವ ಅವಕಾಶ ಇಲ್ಲ. ಸಂವಿಧಾನದ ಅನುಚ್ಛೇದ-೭ರಲ್ಲಿ ಪಟ್ಟಿ-೧ರ ಸಂಖ್ಯೆ-೪೪ ರಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಸಂಘ-ಸಂಸ್ಥೆಗಳ ವಿಚಾರಗಳ ಕಾನೂನನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಅನುಚ್ಛೇದ ೭ರ ೨ನೇ ಪಟ್ಟಿಯ ಸಂಖ್ಯೆ ೩೨ರ ಪ್ರಕಾರ ರಾಜ್ಯ ಸರ್ಕಾರಗಳು ಕೂಡ ಆ ರಾಜ್ಯಕ್ಕೆ ಸೀಮಿತವಾದ ಸಂಘ-ಸಂಸ್ಥೆಗಳ ಕಾನೂನು ಹೊಂದಲು ಅವಕಾಶವಿದೆ. ಈ ರೀತಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಗೆ ಬರುವ ಸಂಘ-ಸಂಸ್ಥೆಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಈ ಎಲ್ಲಾ ಕಾನೂನುಗಳಲ್ಲಿ ಕೂಡ ಪ್ರಜೆಗಳಿಗೆ ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ತಾವು ಅಪೇಕ್ಷೆ ಪಟ್ಟರೆ ನೋಂದಣಿ ಮಾಡಿಸಿಕೊಂಡು ಅನ್ವಯವಾಗುವ ಕಾನೂನಿನ ಅಡಿಯಲ್ಲಿ ತಮ್ಮ ಎಲ್ಲಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬಹುದು. ಆದರೆ, ನೋಂದಣಿ ಕೇವಲ ಐಚ್ಛಿಕ ವಿಷಯ ಎನ್ನುವಂಥದ್ದು ಬಹಳ ಮುಖ್ಯವಾದ ಸಂಗತಿ.

ಆದರೆ, ಕಾನೂನಿನ ಅಡಿಯಲ್ಲಿ ಬರುವಂತಹ ಅಥವಾ ಸರ್ಕಾರದ ಕೆಲವೊಂದು ಅನುಕೂಲತೆ ಅಥವಾ ಸವಲತ್ತುಗಳನ್ನು ಪಡೆಯಬೇಕಾದಾಗ ನೋಂದಣಿಯ ಅವಶ್ಯಕತೆ ಬರಬಹುದು. ಹಾಗಾಗಿಯೇ ಅನೇಕ ಖಾಸಗಿ ಸಂಘ-ಸಂಸ್ಥೆಗಳು ನಮ್ಮ ದೇಶದಲ್ಲಿ ಇಂದಿಗೂ ಕೂಡ ನೋಂದಣಿ ಮಾಡಿಸಿಕೊಳ್ಳದೇ ಅಸ್ತಿತ್ವದಲ್ಲಿವೆ. ನೋಂದಣಿಯಾಗದ ಖಾಸಗಿ ಸಂಘ-ಸಂಸ್ಥೆಗಳಿಗೂ ಕೂಡ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಖಾಯಂ ಖಾತೆ ಸಂಖ್ಯೆ (PAN Number) ಹೊಂದಲು ಕೂಡಾ ಅವಕಾಶ ಇದೆ. ಮಾತ್ರವಲ್ಲ, ತಮ್ಮ ವರ್ಷಾವಧಿ ಲೆಕ್ಕ-ಪತ್ರ ಸಲ್ಲಿಸಲೂ ಅವಕಾಶವಿದೆ. ಆದರೆ, ಕಲಂ ೮೦ಉ, ೧೨ಂ ಅಂತಹ ಅಡಿಯಲ್ಲಿ ಬರುವಂತಹ ಮಾನ್ಯತೆ ಅಥವಾ ವಿನಾಯಿತಿ ಪಡೆಯಲು ಬೇಕಾದಲ್ಲಿ ನೋಂದಣಿ ಅವಶ್ಯಕತೆ ಬರುತ್ತದೆ. ವ್ಯಕ್ತಿಗಳ ಸಮೂಹ (Body of Individuals) ಆಗಿ ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ ಎಂದು ದೇಶದ ನ್ಯಾಯಾಲಯಗಳು ಬೇರೆ ಬೇರೆ ಪ್ರಕರಣಗಲ್ಲಿ ಹೇಳಿವೆ.

ಲೆಕ್ಕ-ಪತ್ರ, ವ್ಯವಹಾರ ಮಾಡಲು ಅವಕಾಶ

ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಆರ್‌ಎಸ್ಎಸ್ ಸಂಗ್ರಹಿಸುವ ಗುರುದಕ್ಷಿಣೆ ತೆರಿಗೆ ಮೌಲ್ಯಮಾಪನದಿಂದ ವಿನಾಯಿತಿ ಹೊಂದಿದೆ ಎಂದು ಪಟನಾ ಉಚ್ಚ ನ್ಯಾಯಾಲಯವು ‘February 22, 1994 Commissioner of Income Tax, Bihar Vs. Rashtriya Swayam Sevak Sangh\B’ ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಖಾಸಗಿ ಸಂಘ-ಸಂಸ್ಥೆಗಳಿಗೆ ಸ್ವಯಂ ಪ್ರೇರಿತವಾಗಿ ನೀಡುವಂತಹ ದಕ್ಷಿಣೆ ತೆರಿಗೆಯಿಂದ ವಿನಾಯಿತಿ ಹೊಂದಿದೆ ಎನ್ನುವುದು ಉಲ್ಲೇಖನೀಯ ಸಂಗತಿ. ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸಂಪರ್ಕ, ಸಂವಾದ, ಅಭ್ಯಾಸ, ವರ್ಗ, ಕಾರ್ಯಾಗಾರ, ವಿಕಾಸ ವರ್ಗ ಇತ್ಯಾದಿಗಳನ್ನು ಖಾಸಗಿ ಸಂಘ, ಸಂಸ್ಥೆ, ಒಕ್ಕೂಟ ನಡೆಸಲು ಸ್ವಾತಂತ್ರ್ಯವನ್ನು ಹೊಂದಿದೆ. ಆದರೆ, ಆಸ್ತಿ-ಪಾಸ್ತಿ ಅಥವಾ ಕೆಲವೊಂದು ಕಾನೂನಿನಡಿಯಲ್ಲಿ ವ್ಯವಹಾರ ನಡೆಸಲು ನ್ಯಾಸ ಕಾಯ್ದೆ-೧೮೮೨, ಸಂಘಗಳ ನೋಂದಣಿ ಕಾಯ್ದೆ-೧೮೬೦, ಸಹಕಾರಿ ಸಂಘಗಳ ಕಾಯ್ದೆ, ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ ಇತ್ಯಾದಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆಗಳ ಮುಖಾಂತರವೇ ಹೊಂದಬೇಕಾಗುತ್ತದೆ. ಈ ರೀತಿ ಆಸ್ತಿ-ಪಾಸ್ತಿ ಹೊಂದಿದ ಸಂಘ-ಸಂಸ್ಥೆಗಳು ತಮ್ಮ ಸೈದ್ಧಾಂತಿಕ ಅಥವಾ ವೈಚಾರಿಕ ವಿಷಯಗಳ ಪ್ರಚಾರ, ಪ್ರಸಾರ ಇತ್ಯಾದಿಗಳನ್ನು ನೋಂದಣಿ ಇಲ್ಲದಂತಹ ಖಾಸಗಿ ಸಂಘ, ಒಕ್ಕೂಟ, ಸಂಸ್ಥೆಯಾಗಿ ನೋಂದಾವಣಿ ರಹಿತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಥವಾ ಶಾಖಾ ಮಟ್ಟದಲ್ಲಿ ಶಾಶ್ವತ ಖಾತೆ ಸಂಖ್ಯೆ (PAN Number) ಹೊಂದಿ ವಾರ್ಷಿಕ ಲೆಕ್ಕ-ಪತ್ರ, ವ್ಯವಹಾರ ಮಾಡಲು ಕೂಡ ಅವಕಾಶವಿದೆ.

ಸರ್ಕಾರಿ ಸವಲತ್ತು ಬೇಕಿದ್ದಾಗ ನೋಂದಣಿ ಕಡ್ಡಾಯ

ನೋಂದಾಯಿತ ಅಥವಾ ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಒಂದು ಸಂಘ ಅಥವಾ ಸಂಸ್ಥೆ ನೋಂದಣಿ ಆದಾಗ ಅಂತಹ ಸಂಘ ಅಥವಾ ಸಂಸ್ಥೆ ಕಾನೂನಿನ ದೃಷ್ಟಿಯಲ್ಲಿ ಒಂದು ಕಾನೂನಿನ ವ್ಯಕ್ತಿತ್ವವನ್ನು (Legal Entity)) ಪಡೆಯುತ್ತದೆ. ಮಾತ್ರವಲ್ಲ, ಅದರ ಸದಸ್ಯರ ಜವಾಬ್ದಾರಿಗಳು, ನೋಂದಾವಣಿಯಾಗದ ಸಂಘ-ಸಂಸ್ಥೆಗಳ ಸದಸ್ಯರಿಗಿಂತ ಭಿನ್ನವಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜವಾಬ್ದಾರಿ ಕಾನೂನಿನ ಅಡಿಯಲ್ಲಿ ಹೆಚ್ಚಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳು ಕೂಡ ಬ್ಯಾಂಕ್ ಖಾತೆ ಹೊಂದಲು, ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಮತ್ತು ದೇಣಿಗೆ ಸೇರಿದಂತೆ ಆದಾಯ, ಖರ್ಚು-ವೆಚ್ಚ ಇತ್ಯಾದಿಗಳನ್ನು ನಡೆಸಲು ಕೂಡ ಅಧಿಕಾರವನ್ನು ಹೊಂದಿವೆ. ಆದರೆ, ವಿದೇಶಿ ಮೂಲಕ ಹಣಕಾಸು ಲೇವಾದೇವಿ, ಭಾರತೀಯ ಹಣಕಾಸು ಇತ್ಯಾದಿ ಹಣಕಾಸು ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ‘F.C.R.A’ ಅನುಮತಿ ಪಡೆಯಲು ನೋಂದಣಿ ಅವಶ್ಯಕತೆ ಇದೆ. ನೋಂದಣಿಯಾಗದ ಸಂಘ-ಸಂಸ್ಥೆ, ಒಕ್ಕೂಟ, ವ್ಯಕ್ತಿಗಳ ಸಮೂಹ ಸಂವಿಧಾನದತ್ತವಾದ ಇತರೆ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಹಕ್ಕು ಹೊಂದಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಆಯುಧ ರಹಿತವಾಗಿ ಒಂದೆಡೆ ಒಗ್ಗೂಡುವ ಸ್ವಾತಂತ್ರ್ಯ, ದೇಶದಾದ್ಯಂತ ಓಡಾಡುವ ಸ್ವಾತಂತ್ರ್ಯ,ದೇಶದ ಯಾವುದೇ ಭಾಗದಲ್ಲಿ ನೆಲೆಸುವ ಮತ್ತು ವೃತ್ತಿ, ವ್ಯಾಪಾರ, ವಹಿವಾಟು ಇತ್ಯಾದಿಗಳನ್ನು ನಡೆಸುವಾಗ ಕೂಡ ಜೊತೆಯಾಗಿ ನಡೆಸಲು ಅಡ್ಡಿಯಿಲ್ಲ. ಕೇವಲ ಸರ್ಕಾರಿ ಸವಲತ್ತು, ಮಾನ್ಯತೆಗಳು ಬೇಕಾದಾಗ ನೋಂದಣಿ ಕಡ್ಡಾಯ.

ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನ, ಪಾರ್ಕ್ ಇತ್ಯಾದಿಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ತೆರೆದಿಟ್ಟಂತಹ ಜಾಗಗಳಲ್ಲಿ ಇಂತಹ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಚಟುವಟಿಕೆ ನಡೆಸಲು ಕೂಡ ಅವಕಾಶ ಇದೆ. ಆದರೆ, ನಿರ್ಬಂಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಚಟುವಟಿಕೆ ನಡೆಸಬೇಕಾಗುತ್ತದೆ. ನೋಂದಣಿ ಕಡ್ಡಾಯ ಮಾಡುವಂತಹ ಕಾನೂನು ತರಲು ಸಾಧ್ಯವಿಲ್ಲ ಮತ್ತು ತಂದರೂ ನ್ಯಾಯಾಲಯಗಳಲ್ಲಿ ಅದರ ಸಿಂಧುತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: RSS Registration issue - ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ
'ತಾತನಿಂದ ಬಂದ ಆಸ್ತಿ ತಂದೆಯ ವೈಯಕ್ತಿಕ ಆಸ್ತಿ, ಮೊಮ್ಮಕ್ಕಳಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!