ಡಿಜಿಪಿ ಅಲೋಕ್ ಮೋಹನ್ ಅಧಿಕಾರಾವಧಿ ವಿಸ್ತರಣೆ? ಪೊಲೀಸ್ ಇಲಾಖೆಯಲ್ಲಿ ಸಂಚಲನ

Published : Mar 02, 2025, 12:25 PM ISTUpdated : Mar 02, 2025, 12:26 PM IST
ಡಿಜಿಪಿ ಅಲೋಕ್ ಮೋಹನ್ ಅಧಿಕಾರಾವಧಿ ವಿಸ್ತರಣೆ? ಪೊಲೀಸ್ ಇಲಾಖೆಯಲ್ಲಿ ಸಂಚಲನ

ಸಾರಾಂಶ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರಾವಧಿ ನಾಲ್ಕು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ ಆದೇಶದಂತೆ, ಕನಿಷ್ಠ ಎರಡು ವರ್ಷಗಳ ಅಧಿಕಾರಾವಧಿ ಹೊಂದಿರಬೇಕೆಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿದೆ. ವಿಸ್ತರಣೆಯಾದರೆ, ಅಲೋಕ್ ಕುಮಾರ್ ಮುಂಬಡ್ತಿ ವಿಳಂಬವಾಗಲಿದೆ. ಈ ವಿಷಯಕ್ಕೆ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.2): ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರ ಅಧಿಕಾರಾವಧಿ 4 ತಿಂಗಳು ವಿಸ್ತರಣೆಯಾಗಲಿದೆ ಎಂಬ ವಿಷಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಇದೇ ವರ್ಷ ಏ.30ಕ್ಕೆ ಅಲೋಕ್‌ ಮೋಹನ್‌ ಸೇವಾ ನಿವೃತ್ತಿ ಹೊಂದಬೇಕಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದನ್ವಯ ಅವರ ಅಧಿಕಾರಾವಧಿ ಆಗಸ್ಟ್‌ ವರೆಗೆ ವಿಸ್ತರಣೆಯಾಗಲಿದೆ ಎಂಬ ಚರ್ಚೆ ನಡೆದಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಿದ್ದು, ಕೇಂದ್ರ ಸಮ್ಮತಿಸಿದರೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೊದಲ ಬಾರಿಗೆ ಡಿಜಿ-ಐಜಿಪಿ ಅಧಿಕಾರಾವಧಿ ವಿಸ್ತರಣೆಯಾದಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ನಿವೃತ್ತಿಗೂ 3 ತಿಂಗಳ ಮುನ್ನ ಗೃಹ ಇಲಾಖೆಗೆ ಸಲ್ಲಿಕೆಯಾದ ಐಪಿಎಸ್ ಅಧಿಕಾರಿಗಳ ಹೆಸರಿನ ಪಟ್ಟಿಯಲ್ಲಿ ಅಲೋಕ್ ಮೋಹನ್‌ ಅವರ ಹೆಸರು ಉಲ್ಲೇಖವಾಗಿಲ್ಲ ಎಂದು ಮೂಲಗಳು ಹೇಳಿವೆ.

ಅಪರಾಧ ಹಾಗೂ ರೌಡಿ ಚಟುವಟಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಅಲೋಕ್‌ ಮೋಹನ್‌

ಯಾಕೆ ವಿಸ್ತರಣೆ?: ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕನಿಷ್ಠ 2 ವರ್ಷಗಳ ಅಧಿಕಾರಾವಧಿ ಹೊಂದಿರಬೇಕು ಎಂದು ಸುಪ್ರೀಂ ಆದೇಶವಿದೆ. ಈ ಆದೇಶ ಮುಂದಿಟ್ಟು ತಮಗೆ 4 ತಿಂಗಳು ಅಧಿಕಾರಾವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಅಲೋಕ್ ಮೋಹನ್‌ ಕೋರಿಕೆ ಸಲ್ಲಿಸಿದ್ದಾರೆ. ಈ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿ ಪ್ರವೀಣ್ ಸೂದ್‌ ಅವರು ತೆರಳಿದ ಬಳಿಕ ಅವರಿಂದ ತೆರವಾದ ಡಿಜಿಪಿ ಹುದ್ದೆಗೆ 2023ರ ಮೇ.23ರಂದು ಸೇವಾ ಹಿರಿತನದ ಆಧಾರದ ಮೇರೆಗೆ ಅಲೋಕ್ ಮೋಹನ್ ನೇಮಕಗೊಂಡರು. ಆದರೆ ಮೊದಲು ಪ್ರಭಾರ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ 4 ತಿಂಗಳ ಬಳಿಕ ಹುದ್ದೆ ಕಾಯಂಗೊಂಡಿತು. ಈಗ 4 ತಿಂಗಳು ಪ್ರಭಾರ ಅವಧಿಯನ್ನು ಪರಿಗಣಿಸದೆ ಕಾಯಂ ಅವಧಿ ಮಾತ್ರ ಪರಿಗಣಿಸುವಂತೆ ಡಿಜಿಪಿ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ನಿವೃತ್ತಿಯಾಗಬೇಕಿದ್ದ ಅವರಿಗೆ ಬೋನಸ್ ಆಗಿ ನಾಲ್ಕು ತಿಂಗಳು ಅಧಿಕಾರ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಬೆಂಗಳೂರು-ಚೆನೈ ಹೈವೇ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್: ಅಪಘಾತಗಳು ತಡೆಯಲು ಸೂಚನೆ

ಅಲೋಕ್‌ ಕುಮಾರ್‌ ಮುಂಬಡ್ತಿ ವಿಳಂಬ
ಡಿಜಿಪಿ ಅಧಿಕಾರಾವಧಿ ವಿಸ್ತರಣೆಯಾದರೆ ಸೇವಾ ಹಿರಿತನ ಮೇರೆಗೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ಸಹ 3 ತಿಂಗಳು ವಿಳಂಬವಾಗಲಿದೆ. ಅಲೋಕ್ ಮೋಹನ್‌ ನಿವೃತ್ತಿಯಾದರೆ ಅವರಿಂದ ತೆರವಾದ ಸ್ಥಾನಕ್ಕೆ ಡಿಜಿಪಿ ಹುದ್ದೆಗೆ ಅಲೋಕ್ ಕುಮಾರ್‌ ಅವರು ಪದೋನ್ನತಿ ಪಡೆಯಬೇಕಿದೆ. ಆದರೆ ಡಿಜಿ-ಐಜಿ ಅಧಿಕಾರಾವಧಿ ವಿಸ್ತರಣೆಯಾದರೆ ಇವರಿಗೆ ಸಹ ಮುಂಬಡ್ತಿ ಪಡೆಯುವುದು ತಡವಾಗಲಿದೆ. ಇದೇ ವರ್ಷದ ಜುಲೈನಲ್ಲಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ನಿವೃತ್ತಿ ಬಳಿಕ ಅಲೋಕ್ ಕುಮಾರ್ ಅವರಿಗೆ ಹುದ್ದೆ ಒಲಿಯಲಿದೆ. ಅದೇ ರೀತಿ ಅಲೋಕ್ ಮೋಹನ್ ಅವರ ನಿರ್ಗಮನ ಬಳಿಕ ಡಿಜಿಪಿ ಹುದ್ದೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್‌ ಮುಂಬಡ್ತಿ ಪಡೆಯಲಿದ್ದಾರೆ.

ವಿಸ್ತರಣೆಗೆ ಅಧಿಕಾರಿಗಳ ಅತೃಪ್ತಿ
ಡಿಜಿ-ಐಜಿಪಿರವರ ಅಧಿಕಾರವಧಿ ವಿಸ್ತರಣೆಗೆ ಇಲಾಖೆಯಲ್ಲಿ ಕೆಲ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಡಿಜಿಪಿ ಹುದ್ದೆಯಲ್ಲಿ ಪ್ರಭಾರವಾಗಿದ್ದರೂ ನಾಲ್ಕು ತಿಂಗಳು ಕಾಲ ಅವರು ಸಂಪೂರ್ಣವಾಗಿ ಅಧಿಕಾರ ನಡೆಸಿದ್ದಾರೆ. ಹೀಗಿರುವಾಗ ವಿಸ್ತರಣೆ ಅಗತ್ಯವೇನಿದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌