
ಬೆಂಗಳೂರು(ಏ.12): ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ದಾಳಿ ನಡೆಸಿ ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಚ್ ಸ್ಪಷ್ಟಪಡಿಸಿದೆ. ಹಬ್ಬದ ಪ್ರಯುಕ್ತ ಜನರಿಗೆ ವಿತರಿಸಲು ದಾಸ್ತಾನು ಮಾಡಲಾಗಿದ್ದ 530 ಅಕ್ಕಿ ಮೂಟೆಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ಅದನ್ನು ಹಿಂದಿರುಗಿಸಲು ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಶಿವಾಜಿನಗರದ ನಿವಾಸಿ ಇಷ್ತಿಯಾಕ್ ಅಹ್ಮದ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿ, ಅಕ್ಕಿ ಮೂಟೆಗಳನ್ನು ವಾಪಸ್ ನೀಡುವಂತೆ ನಿರ್ದೇಶಿಸಿದೆ.
ಪ್ರಕರಣದಲ್ಲಿ ಬಿಬಿಎಂಪಿ ಚುನಾವಣಾಧಿಕಾರಿ ಮತ್ತು ಶಿವಾಜಿನಗರ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಆದರೆ, ಚುನಾವಣೆಗೆ ದಿನಾಂಕ ಘೋಷಣೆ ಮುನ್ನವೇ ಮಾ.19ರಂದು ದಾಳಿ ನಡೆಸಲಾಗಿದೆ. ಆದರೆ ಮಾ.29ಕ್ಕೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾಧಿಕಾರಿಗಳು ಅಥವಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಚುನಾವಣೆ ಘೋಷಣೆಗೂ ಮುಂಚೆ ಯಾವುದೇ ವಸ್ತುಗಳ ಶೋಧ ನಡೆಸುವುದು, ಜಪ್ತಿ ಮಾಡುವ ಅಧಿಕಾರ ಹೊಂದಿರುವುದಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಅಕ್ರಮ ಎಸಗಿದ ಎಸ್‌ಐ ಅಭ್ಯರ್ಥಿಗಳ ಪಟ್ಟಿ ನೀಡಿ: ಹೈಕೋರ್ಟ್
ಚುನಾವಣಾ ಪ್ರಕ್ರಿಯೆ ನಡೆಸುವ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಮಾತ್ರಕ್ಕೆ ಚುನಾವಣೆ ಘೋಷಣೆಗೂ ಮೊದಲೇ ಅವರು ಆ ಅಧಿಕಾರವನ್ನು ಚಲಾಯಿಸುವಂತಿಲ್ಲ. ಇನ್ನೂ ‘ಅಗತ್ಯ ವಸ್ತುಗಳ ಕಾಯ್ದೆ-1955’ರಡಿ ಪ್ರಕಾರ ಸಾಮಾನ್ಯ ಸಂದರ್ಭಗಳಲ್ಲಿ ಶೋಧ ನಡೆಸಿ ಜಪ್ತಿ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಸರ್ಕಾರದ ಪ್ರಾಧಿಕಾರ ಮತ್ತು ಅಧಿಕಾರಿಗಳಿಗೆ ನೀಡಲಾಗಿದೆ. ಆ ಅಧಿಕಾರವನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಚಲಾಯಿಸುವುದು ಕಾನೂನು ಬಾಹಿರವಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 530 ಅಕ್ಕಿ ಮೂಟೆಗಳನ್ನು ಅರ್ಜಿದಾರಿಗೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹಿಂದಿರುಗಿಸಬೇಕು. ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳು ತಮ್ಮ ಸುಪರ್ದಿಗೆ ಬಂದ ಮೇಲೆ ಅವುಗಳನ್ನು ಅರ್ಜಿದಾರರು ಸಾರ್ವಜನಿಕರಿಗೆ ಹಂಚಿಕೆ ಮಾಡಬಾರದು. ಈ ಷರತ್ತು ಉಲ್ಲಂಘಿಸಿ ಅರ್ಜಿದಾರರು ಅಕ್ಕಿಯನ್ನು ವಿತರಿಸಿದ್ದು ಗಮನಕ್ಕೆ ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಮುಕ್ತರಾಗಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಶಿವಾಜಿ ನಗರದ ನಿವಾಸಿ ಇಷ್ತಿಯಾಕ್ ಅಹ್ಮದ್ ಬಡವರಿಗೆ ಹಂಚಲು ತಲಾ 25 ಕೆ.ಜಿ. ತೂಕದ ಒಟ್ಟು 530 ಅಕ್ಕಿಯ ಮೂಟೆಗಳನ್ನು ದಾಸ್ತಾನು ಮಾಡಿದ್ದರು. ಮಾ.19ರಂದು ಬಿಬಿಎಂಪಿ ಚುನಾವಣಾಧಿಕಾರಿಗಳು ಮತ್ತು ಶಿವಾಜಿನಗರ ಠಾಣಾ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದರು. ಆ ಕುರಿತು ವಿವರಣೆ ಕೇಳಿ ಇಷ್ತಿಯಾಕ್‌ಗೂ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ಅವರು, ಕಳೆದ 15 ವರ್ಷಗಳಿಂದ ಬಡವರಿಗೆ ಹಬ್ಬದ ದಿನಗಳಲ್ಲಿ ಬಟ್ಟೆಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ವಿತರಣೆ ಮಾಡಲು ಸಂಗ್ರಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿ, ಅಕ್ಕಿ ಖರೀದಿಯ ರಸೀದಿಗಳನ್ನು ಸಲ್ಲಿಸಿದ್ದರು. ಅದಕ್ಕೆ ಚುನಾವಣಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಇಷ್ತಿಯಾಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಜನರು ಸಲ್ಲಿಸುವ ದೂರಿನ ಬಗ್ಗೆ ಎಚ್ಚರ: ಹೈಕೋರ್ಟ್
ವಿಚಾರಣೆ ಅರ್ಜಿದಾರರ ಪರ ವಕೀಲರು, ಇಷ್ತಿಯಾಕ್ ಸಾಮಾಜಿಕ ಕಾರ್ಯಕರ್ತರಾಗಿದ್ದು, ಕಳೆದ 15 ವರ್ಷಗಳಿಂದ ಯುಗಾದಿ, ರಂಜಾನ್, ದಸರಾ, ಕ್ರಿಸ್‌ಮಸ್ ಮತ್ತಿತರ ಹಬ್ಬಗಳಿಗೆ ಬಡವರಿಗೆ ಅಕ್ಕಿ ಮತ್ತು ಬಟ್ಟೆವಿತರಿಸುತ್ತಾರೆ. ಆದರೆ, ಚುನಾವಣಾಧಿಕಾರಿಗಳು ಮತ್ತು ಶಿವಾಜಿನಗರ ಪೊಲೀಸರು ಮಾ.19ರಂದು ಅರ್ಜಿದಾರರು ಅಕ್ಕಿ ಮೂಟೆ ದಾಸ್ತಾನು ಮಾಡಿದ್ದ ಜಾಗದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಅಕ್ಕಿಯ ಮೂಟೆಗಳನ್ನು ಬಿಡುಗಡೆಗೊಳಿಸಲು ನಿರ್ದೇಶಿಸುವಂತೆ ಕೋರಿದರು.
ಚುನಾವಣಾ ಆಯೋಗದ ಪರ ವಕೀಲರು, ಅರ್ಜಿದಾರರು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿದ್ದಾರೆ ಎಂದರು. ಆದರೆ, ಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುನ್ನವೇ ದಾಳಿ ನಡೆಸಿ ಜಪ್ತಿ ಮಾಡಿಕೊಳ್ಳುವ ಅಧಿಕಾರ ಚುನಾವಣಾಧಿಕಾರಿ ಅಥವಾ ಪೊಲೀಸರಿಗೆ ಇಲ್ಲ ಎಂದು ಒಪ್ಪಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ