
ಬೆಂಗಳೂರು [ಜ.18]: ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ, ಮೂಲಭೂತವಾದಿ ಚಟುವಟಿಕೆ, ಕೋಮು ಹಿಂಸೆ ಕುಮ್ಮಕ್ಕು ಮತ್ತಿತರ ಆರೋಪಗಳನ್ನು ಎದುರಿಸುತ್ತಿರುವ ಪಿಎಫ್‌ಐ, ಎಸ್‌ಡಿಪಿಐನಂತಹ ಸಂಘಟನೆಗಳಿಗೆ ನಿಷೇಧ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ವೇಳೆ, ಈ ಸಂಘಟನೆಗಳನ್ನು ದೇಶವ್ಯಾಪಿ ನಿಷೇಧಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ನಾಯಕರು ಪ್ರಯತ್ನ ಆರಂಭಿಸಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿದ್ದ ವಿಷಯ ಬಯಲಾಗುತ್ತಿದ್ದಂತೆ ಆ ಸಂಘಟನೆಗೆ ನಿಷೇಧ ಹೇರಬೇಕು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಬಿ. ಶ್ರೀರಾಮುಲು, ಆರ್. ಅಶೋಕ್, ಸುರೇಶ್ ಕುಮಾರ್, ಸಿ.ಟಿ. ರವಿ ಮತ್ತಿತರರು ಗಂಭೀರವಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನಿಷೇಧ ಸಂಬಂಧ ಮಾಹಿತಿ ಸಂಗ್ರಹ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರನ್ನು ಭೇಟಿಯಾಗಿ ಪಿಎಫ್‌ಐ, ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಮನವಿ ಮಾಡಲಾಗುವುದು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೇಂದ್ರಕ್ಕೆ ಮಾಹಿತಿ ಕೊಡಬೇಕು:
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪಿಎಫ್‌ಐ, ಎಸ್‌ಡಿಪಿಐನಂತಹ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ಪ್ರತಿ ಮಾಹಿತಿಯನ್ನೂ ಕ್ರೋಢೀಕರಿಸಿದ ಬಳಿಕ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಕೇಂದ್ರಕ್ಕೂ ಮಾಹಿತಿ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಸಂಘಟನೆಗಳ ನಿಷೇಧಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ತೇಜಸ್ವಿ ಸೂರ್ಯ-ಸೂಲಿಬೆಲೆ ಹತ್ಯೆಗೆ ಸಂಚು: 'ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು'
ಹಿಂದಿನ ಕಾಂಗ್ರೆಸ್ ಸರ್ಕಾರವು ಈ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿತು. ಪರಿಣಾಮ ಹಿಂಸಾತ್ಮಕ ಚಟುವಟಿಕೆಗಳನ್ನು ಮಾಡಲು ಉತ್ತೇಜನ ನೀಡಿದಂತಾಯಿತು. ಇದು ಆತಂಕಕಾರಿ ವಿಚಾರವಾಗಿದೆ. ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ವರ್ಷಗಳಿಂದ ಹಿಂಸಾತ್ಮಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇತ್ತೀಚಿನ ಘಟನೆಗಳನ್ನು ಪರಿಶೀಲನೆ ನಡೆಸಿದಾಗ ತೀವ್ರತರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಪಿಎಫ್‌ಐ, ಎಸ್‌ಡಿಪಿಐನಂತಹ ಸಂಘಟನೆಗಳ ನಿಷೇಧಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರವು ಸಹ ಸಂಘಟನೆಗಳ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಬೇಕಾಗಿರುವ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ನಿಷೇಧಿಸುವ ಮುನ್ನ ಕೆಲವು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾಗಿ ಸಂಘಟನೆಗಳ ಮೇಲೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ, ದೂರುಗಳು, ಕಾನೂನು ವಿಚಾರಣೆ, ಶಿಕ್ಷೆ, ಯಾವ ಸಂಘಟನೆಗಳ ಜತೆ ಸಂಪರ್ಕ ಇದೆ ಎಂಬುದೆಲ್ಲಾ ಮಾಹಿತಿಯನ್ನು ಕ್ರೋಢೀಕರಿಸಬೇಕು. ಪೊಲೀಸ್ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯ ಮುಖವಾಡ ಹಾಕಿಕೊಂಡು ಹಿಂಸಾತ್ಮಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಹಲವು ಹೆಸರುಗಳನ್ನು ಬದಲಿಸಿಕೊಂಡು ಸಂಘಟನೆಗಳನ್ನು ರಚಿಸಿ ಹಿಂಸಾತ್ಮಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಹೆಸರು ಬದಲಿಸಿಕೊಂಡು ಕುಕೃತ್ಯ ಎಸಗುವ ಎಲ್ಲಾ ಸಂಘಟನೆಗಳ ಮಾಹಿತಿಯನ್ನು ಕಲೆ ಹಾಕಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ತಮಿಳುನಾಡಿನಲ್ಲಿ ಹಿಂಸಾತ್ಮಕ ಕೃತ್ಯ ಎಸಗಿದ ನಾಲ್ಕು ಮಂದಿಯನ್ನು ರಾಜ್ಯದ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಕೇಂದ್ರ, ತಮಿಳುನಾಡು ಸರ್ಕಾರದ ಸಹಕಾರವನ್ನು ಪಡೆದು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂದು ಗೃಹ ಸಚಿವರು ವಿವರಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರತಿಭಟನೆ ಬಳಿಕ ವರುಣ್ ಎಂಬಾತ ಹತ್ಯೆಗೆ ಸಂಚು ರೂಪಿಸಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗಿದೆ. ತನಿಖೆ ವೇಳೆ ಹಲವು ಮಹತ್ವದ ವಿಚಾರಗಳು ಬಹಿರಂಗೊಂಡಿವೆ. ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳಿಗೆ ಆಸ್ಪದ ಕೊಡುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ