ಖ್ಯಾತ ವೈಮಾನಿಕ ವಿಜ್ಞಾನಿ ರೊದ್ದಂ ನರಸಿಂಹಗೆ ಸರ್ಕಾರಿ ಗೌರವ

By Kannadaprabha NewsFirst Published Dec 16, 2020, 10:21 AM IST
Highlights

ಸಿಎಂ ಯಡಿಯೂರಪ್ಪರಿಂದ ಅಂತಿಮ ದರ್ಶನ| ಬೆಂಗಳೂರಿನ ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ| ರೊದ್ದಂ ನರಸಿಂಹ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಂತಾಪ| 
 

ಬೆಂಗಳೂರು(ಡಿ.16): ತೀವ್ರ ಅನಾರೋಗ್ಯದಿಂದ ನಿಧನರಾದ ಖ್ಯಾತ ವೈಮಾನಿಕ ವಿಜ್ಞಾನಿ, ಪದ್ಮ ವಿಭೂಷಣ ಪ್ರೊ.ರೊದ್ದಂ ನರಸಿಂಹ(88) ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ನಡೆಯಿತು. 

ನಗರದ ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. ಸರ್ಕಾರದ ಪ್ರತಿನಿಧಿಯಾಗಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್‌, ಇಸ್ರೋ ಅಧ್ಯಕ್ಷ ಕೆ. ಶಿವನ್‌ ಸೇರಿದಂತೆ ಅನೇಕ ಗಣ್ಯರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. 

ರೊದ್ದಂ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಏರೋಸ್ಪೇಸ್‌ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ಅವರ ಕೊಡುಗೆ ಮಹತ್ವಪೂರ್ಣವಾದುದು. ರೊದ್ದಂ ನರಸಿಂಹ ಅವರ ನಿಧನದಿಂದ ದೇಶ ಶ್ರೇಷ್ಠ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಶೋಕಿಸಿದರು. ಮೆದುಳು ರಕ್ತಸ್ರಾವ ಹಾಗೂ ಪಾಶ್ರ್ವವಾಯು ಸಮಸ್ಯೆಯಿಂದ ಕೋಮಾಸ್ಥಿತಿಯಲ್ಲಿ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೊದ್ದಂ ನರಸಿಂಹ ಅವರು ಸೋಮವಾರ ರಾತ್ರಿ 9.30ರ ವೇಳೆಗೆ ನಿಧನರಾಗಿದ್ದರು.

ಮಾಜಿ ಸಚಿವೆ ರೇಣುಕಾ ರಾಜೇಂದ್ರನ್‌ ಇನ್ನಿಲ್ಲ

ರೊದ್ದಂ ನರಸಿಂಹ ಅವರು ಭಾರತದ ಸಾಂಪ್ರದಾಯಿಕ ಜ್ಞಾನ ಮತ್ತು ಸಂಶೋಧನೆಯ ಪ್ರತಿರೂಪದಂತಿದ್ದರು. ಭಾರತದ ಪ್ರಗತಿಗಾಗಿ ವಿಜ್ಞಾನ ಮತ್ತು ನಾವೀನ್ಯತೆಯನ್ನು ಮೈಗೂಡಿಸಿಕೊಂಡ ಅತ್ಯುತ್ತಮ ವಿಜ್ಞಾನಿ ಅವರಾಗಿದ್ದರು. ಅವರ ಅಗಲಿಕೆಯಿಂದ ಅತೀವ ದುಃಖವಾಗಿದೆ. ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ರೊದ್ದಂ ನರಸಿಂಹ ಅವರ ನಿಧನ ವಿಜ್ಞಾನ ಜಗತ್ತು ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅತಿದೊಡ್ಡ ನಷ್ಟ. ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದ್ದಾರೆ. 
 

click me!