ಶಾಲೆಗಳ ಆರಂಭ ಅಕ್ಟೋಬರ್ 10ರ ನಂತರ ನಿರ್ಧಾರ: ಸಚಿವ ಸುರೇಶ್ ಕುಮಾರ್

By Kannadaprabha News  |  First Published Oct 2, 2020, 7:58 AM IST

ಸರ್ಕಾರಕ್ಕೂ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆಯೇ ಮೊದಲ ಆದ್ಯತೆ. ತರಾತುರಿಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸುವುದಿಲ್ಲ. ಈ ಬಗ್ಗೆ ಬಗ್ಗೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಪೋಷಕರು ಅಭಿಪ್ರಾಯ ಪಡೆದು ತೀರ್ಮಾನಿಸಬೇಕಿದೆ. ಒಟ್ಟಾರೆ ಈ ಬಗ್ಗೆ ಅಕ್ಟೋಬರ್‌ ಎರಡನೇ ವಾರ ಬಗ್ಗೆ ಸ್ಷಷ್ಟ ಚಿತ್ರಣ ಹೊರಬೀಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು(ಅ.02): ರಾಜ್ಯದಲ್ಲಿ ಶಾಲೆ ಆರಂಭ ಕುರಿತು ಅಕ್ಟೋಬರ್‌ 10ಕ್ಕೆ ಸ್ಪಷ್ಟ ಚಿತ್ರಣ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳನ್ನು ಆರಂಭಿಸುವ ವಿಚಾರ ಕುರಿತು ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರ ಸಂಘಟನೆಗಳ ಜಿಲ್ಲಾ ಪ್ರತಿನಿಧಿಗಳೊಂದಿಗೆ ಗುರುವಾರ ವೆಬಿನಾರ್‌ ಸಂವಾದ ನಡೆಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

Tap to resize

Latest Videos

ಸರ್ಕಾರಕ್ಕೂ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆಯೇ ಮೊದಲ ಆದ್ಯತೆ. ತರಾತುರಿಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸುವುದಿಲ್ಲ. ಈ ಬಗ್ಗೆ ಬಗ್ಗೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಪೋಷಕರು ಅಭಿಪ್ರಾಯ ಪಡೆದು ತೀರ್ಮಾನಿಸಬೇಕಿದೆ. ಒಟ್ಟಾರೆ ಈ ಬಗ್ಗೆ ಅಕ್ಟೋಬರ್‌ ಎರಡನೇ ವಾರ ಅಂದರೆ ಅಕ್ಟೋಬರ್‌ 10ರೊಳಗೆ ಸ್ಪಷ್ಟಚಿತ್ರಣ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರ ಶಾಲೆಗಳನ್ನು ಆರಂಭಿಸುವ ವಿಚಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ಸ್ಥಿತಿ ಇಲ್ಲ. ಮಕ್ಕಳ ಆರೋಗ್ಯ, ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ನಾನೊಬ್ಬ ಸಚಿವ ಎಂಬುದಕ್ಕಿಂತ ಪೋಷಕನೂ ಆಗಿದ್ದೇನೆ. ಎಲ್ಲ ಪೋಷಕರಂತೆ ನನಗೂ ಆತಂಕ ಇದ್ದೇ ಇದೆ. ಹಾಗಾಗಿ ಸಾರ್ವಜನಿಕ ಅಭಿಪ್ರಾಯ ಪಡೆದುಕೊಂಡೇ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶೀಘ್ರ ಶಾಲೆಗಳು ಆರಂಭವಾಗುತ್ತಾ..?

ಈ ನಿಟ್ಟಿನಲ್ಲಿ ಇಂದಿನ ಸಂವಾದದಲ್ಲಿ ಶಿಕ್ಷಕರು, ಉಪನ್ಯಾಸಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಂಡಿದ್ದೇನೆ. ಶೀಘ್ರದಲ್ಲೇ ಶಿಕ್ಷಣ ತಜ್ಞರು, ಖಾಸಗಿ ಶಾಲೆಗಳು, ಶಿಕ್ಷಣ ಪ್ರೇಮಿಗಳು, ಜನಪ್ರತಿನಿಧಿಗಳು, ಪೋಷಕರು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲ ಪಾಲುದಾರರೊಂದಿಗೂ ಸಮರ್ಪಕ ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಲೆಗಳನ್ನು ಆರಂಭಿಸಬೇಕೆಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾದರೆ, ಯಾವ ತರಗತಿಗಳನ್ನು ಮೊದಲು ಆರಂಭಿಸಬೇಕು, ನಂತರ ಯಾವ ತರಗತಿಗಳನ್ನು ಆರಂಭಿಸಬೇಕು, ಕೋವಿಡ್‌ ನಿಯಂತ್ರಣ ದೃಷ್ಟಿಯಿಂದ ಶಾಲೆಗಳಲ್ಲಿ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಈ ಎಲ್ಲದರ ಬಗ್ಗೆಯೂ ಅಧಿಕಾರಿಗಳು, ತಜ್ಞರು ಹಾಗೂ ಸಂಬಂಧಪಟ್ಟ ಇತರರೊಂದಿಗೆ ಚರ್ಚಿಸುತ್ತೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎಲ್ಲರ ಅಭಿಪ್ರಾಯ ಪಡೆದು ಅಕ್ಟೋಬರ್‌ ಎರಡನೇ ವಾರ ಅಥವಾ ಅ.10ರ ನಂತರ ಒಂದು ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಮುಂದೆ ಶಾಲೆಗಳನ್ನು ಆರಂಭಿಸಬೇಕಾಗಬಹುದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೆಲವು ಮಾರ್ಗಸೂಚಿಗಳನ್ನು (ಎಸ್‌ಒಪಿ) ನಮ್ಮ ಇಲಾಖೆ ಸಿದ್ಧಪಡಿಸಿಕೊಂಡಿದೆ. ಆದರೆ, ಇದು ಈಗಲೇ ಶಾಲೆ ಆರಂಭಿಸುವ ಸಿದ್ಧತೆಯಲ್ಲ. ಯಾರೂ ತಪ್ಪಾಗಿ ಭಾವಿಸಬಾರದು. ತರಾತುರಿಯಲ್ಲಿ ಶಾಲೆ ಆರಂಭಿಸುವ ಧಾವಂತ ಸರ್ಕಾರಕ್ಕಿಲ್ಲ. ಮಕ್ಕಳ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ಎಲ್ಲರ ಅಭಿಪ್ರಾಯ ಪಡೆದು ಅಕ್ಟೋಬರ್‌ ಎರಡನೇ ವಾರ ಅಥವಾ ಅ.10ರ ನಂತರ ಒಂದು ಸ್ಪಷ್ಟಚಿತ್ರಣ ನೀಡುತ್ತೇವೆ. - ಎಸ್‌.ಸುರೇಶಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
 

click me!