ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ಇರುವ 200 ರು. ದಂಡವನ್ನು ನಗರ ಪ್ರದೇಶದಲ್ಲಿ 1 ಸಾವಿರ ರು.ಹಾಗೂ ಗ್ರಾಮೀಣ ಭಾಗದಲ್ಲಿ 500 ರು.ಗೆ ಹೆಚ್ಚಳ ಮಾಡುವ ಪ್ರಸ್ತಾಪವಿದೆ. ಇಂದು ಆ ನಿಯಮ ಅಧಿಕೃತ ಜಾರಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಅ.02): ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1 ಸಾವಿರ ರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರು.ಗೆ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಬಹುತೇಕ ಗಾಂಧಿಜಯಂತಿ ದಿನವಾದ ಶುಕ್ರವಾರ ಈ ಕುರಿತ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಸಚಿವ ಸಂಪುಟ ಸಭೆಯ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಾ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೊಳಿಸುವ ಅಗತ್ಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನದಟ್ಟು ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈ ಕಠಿಣ ಕ್ರಮಗಳಿಗೆ ಹಸಿರು ನಿಶಾನೆ ನೀಡಿದ್ದಾರೆ. ಅಧಿಕಾರಿಗಳು ದಂಡ ಮೊತ್ತ ಹೆಚ್ಚಳ ಸೇರಿದಂತೆ ವಿವಿಧ ನಿಯಮಗಳ ಕರಡು ಪ್ರತಿ ಸಿದ್ಧಪಡಿಸುತ್ತಿದ್ದು, ಬಹುತೇಕ ಶುಕ್ರವಾರ ಆದೇಶ ಹೊರಬೀಳಲಿದೆ ಎಂದು ತಿಳಿದು ಬಂದಿದೆ.
ಏನಿದು ಪರಿಷ್ಕೃತ ನಿಯಮ:
ರಾಜ್ಯದಲ್ಲಿ ಅನ್‌ಲಾಕ್ ಬಳಿಕ ಕೊರೋನಾ ಸೋಂಕು ಇಲ್ಲವೇನೋ ಎಂಬಂತೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪರಿಣಾಮ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ಇರುವ 200 ರು. ದಂಡವನ್ನು ನಗರ ಪ್ರದೇಶದಲ್ಲಿ 1 ಸಾವಿರ ರು.ಹಾಗೂ ಗ್ರಾಮೀಣ ಭಾಗದಲ್ಲಿ 500 ರು.ಗೆ ಹೆಚ್ಚಳ ಮಾಡುವ ಪ್ರಸ್ತಾಪವಿದೆ. ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ಕಚೇರಿಗೆ ಪ್ರವೇಶ ನೀಡುವುದಿಲ್ಲ ಎಂಬ ನಿಯಮವಿದೆ.
ಸಾರ್ವಜನಿಕರೇ, ಮಾಸ್ಕ್ ಹಾಕದೇ ಓಡಾಡಬೇಡಿ, ಬೀಳುತ್ತೆ ಭಾರೀ ದಂಡ!
ಜತೆಗೆ, ಯಾವುದೇ ಸಭೆ-ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರಿದರೆ ಆಯೋಜಕರು ಹಾಗೂ ಸಂಸ್ಥೆಯ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ. ಸಾರಿಗೆ ಬಸ್ಸುಗಳಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಬೇಕಾಗುತ್ತದೆ.
ಮಾರುಕಟ್ಟೆ, ಮಾಲ್, ಪಾರ್ಕ್ ಇತರೆ ಸಾರ್ವಜನಿಕ ಸ್ಥಳದಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡಿ ನಿಲ್ಲುವಂತಿಲ್ಲ. ಇವರ ನಡುವೆ ಸಹ ಕನಿಷ್ಠ 6 ಅಡಿ ಅಂತರವಿರಬೇಕು. ಈ ನಿಯಮ ಪಾಲನೆಯಾಗದಿದ್ದರೆ ಯಾವ ತಾಣದಲ್ಲಿ ಇಂತಹ ಉಲ್ಲಂಘನೆಯಾಗುತ್ತದೆಯೋ ಆ ತಾಣದ ಮಾಲಿಕರ ಮೇಲೆ ದಂಡ ಪ್ರಯೋಗ ಮಾಡಲಾಗುವುದು. ಇಂತಹ ಉಲ್ಲಂಘನೆ ಪುನರಾವರ್ತನೆಯಾದರೆ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಳ್ಳುವ ಪ್ರಸ್ತಾಪವಿದ್ದು, ಇದಕ್ಕೆ ಮುಖ್ಯಮಂತ್ರಿ ಸಮ್ಮತಿ ದೊರಕಿದೆ ಎಂದು ಮೂಲಗಳು ಹೇಳಿವೆ.
ರಾಜ್ಯಾದಂತ ದಂಡ ವಸೂಲಿ ಆರಂಭ
ಮಾಸ್ಕ್ ಧರಿಸದವರಿಂದ ದಂಡ ವಸೂಲು ಪ್ರಕ್ರಿಯೆ ರಾಜ್ಯಾದ್ಯಂತ ಗುರುವಾರ ಆರಂಭವಾಗಿದೆ. ಸದ್ಯಕ್ಕೆ ಹಳೆಯ ನಿಯಮದಂತೆ 200 ರು. ದಂಡ ವಸೂಲು ಮಾಡಲಾಗುತ್ತಿದೆ. ಹೊಸ ಆದೇಶ ಬಂದ ಬಳಿಕ 1000 ರು. ದಂಡ ವಸೂಲು ಮಾಡಲಾಗುವುದು. ಹೀಗಾಗಿ ಜನರೇ ದಂಡದ ಭಯದಿಂದಾದರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮ ಪಾಲಿಸಿ ಕೊರೋನಾ ತಡೆಗೆ ಸಹಕರಿಸಿ.