ಗೋಕರ್ಣ ಮಹಾಬಲೇಶ್ವರ ವಿವಾದ: ನ್ಯಾ. ಬಿ. ಎನ್. ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ!

By Suvarna NewsFirst Published Apr 19, 2021, 12:55 PM IST
Highlights

ಗೋಕರ್ಣ ಮಹಾಬಲೇಶ್ವರ ದೇವಾಲಯ ವಿಚಾರ| ಸುಪ್ರೀಂ ಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ| ನ್ಯಾ.ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ| ಮಧ್ಯಂತರ ವ್ಯವಸ್ಥೆ ಮಾಡುವ ಸಲುವಾಗಿ ಸಮಿತಿ ರಚನೆ

ಕಾರವಾರ(ಏ.10): ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಸರ್ಕಾರ ಹೊಸನಗರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಪ್ರಕರಣ ಸಂಬಂಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ದೇವಾಲಯದ ಆಡಳಿತ ನೋಡಿಕೊಳ್ಳಲು ಸುಪ್ರಿಂ ಕೋರ್ಟ್‌ ತನ್ನ ನಿವೃತ್ತ ನ್ಯಾಯಾಧೀಶ ನ್ಯಾ.ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ರಚಿಸುವಂತೆ ಆದೇಶಿಸಿದೆ.

ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸಿಜೆಐ ಬೊಬ್ಡೆ ನೇತೃತ್ವದ ಪೀಠ ಈ ವಿವಾದ ಸಂಬಂಧ ಮಧ್ಯಂತರ ವ್ಯವಸ್ಥೆ ಮಾಡುವ ಸಲುವಾಗಿ ನ್ಯಾ.ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ರಚಿಸಿ, ಗೋಕರ್ಣ ಮಹಾಬಲೇಶ್ವರ ದೇವಾಲಯ ಆಡಳಿತದ ಉಸ್ತುವಾರಿಯನ್ನು ಸಮಿತಿಗೆ ವಹಿಸಿದೆ. 

ವಿವಾದವೇನು?: 

ಈ ದೇವಸ್ಥಾನವು ಹಿಂದೆ ಮುಜರಾಯಿ ಇಲಾಖೆಯ ಆಡಳಿತದಲ್ಲಿತ್ತು. 2004ರಲ್ಲಿ ಆಗಿನ ಟ್ರಸ್ಟಿ ವಿ.ಡಿ.ದೀಕ್ಷಿತ್ ನಿಧನರಾದರು. 2004ರಿಂದ 2008ರ ಆ.14ರವರೆಗೆ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿಕೊಂಡು ಬರುತ್ತಿದ್ದರು. ಟ್ರಸ್ಟಿಗಳ ಹುದ್ದೆ ಖಾಲಿ ಇದ್ದ ಕಾರಣ 2008ರ ಮೇ ತಿಂಗಳಿನಲ್ಲಿ ಹೊಸನಗರದ ರಾಮಚಂದ್ರಾಪುರ ಮಠದವರು ಈ ದೇವಸ್ಥಾನ ಪುರಾತನ ಕಾಲದಲ್ಲಿ ತಮ್ಮದಾಗಿತ್ತು. ಈಗ ಪುನಃ ಆಡಳಿತದ ನಿರ್ವಹಣೆಯನ್ನು ತಮಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 

ಅದರಂತೆ 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಲಾಯಿತು. ಇದನ್ನು ವಿರೋಧಿಸಿ ಬಾಲಚಂದ್ರ ದೀಕ್ಷಿತ ಹಾಗೂ ಇತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳ ಕಾಲ ವಿಚಾರಣೆ ನಡೆದು 2018 ಆ.10ರಂದು ಹೈಕೋರ್ಟ್ ವಿಭಾಗೀಯ ಪೀಠವು ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು ನೀಡಿತ್ತು. 

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ರಾಮಚಂದ್ರಾಪುರ ಮಠವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೀಗಿರುವಾಗ 2018ರ ಆ.10ರಂದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. 

ಬಳಿಕ ಸರಕಾರ ದೇವಸ್ಥಾನವನ್ನು ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು. ಆದರೀಗ ಈ ವಿವಾದಕ್ಕೆ ಸುಪ್ರೀಂ ಕೋರ್ಟ್‌ ಸಮಿತಿ ರಚಿಸಿ ಈ ಕಲಹಕ್ಕೆ ವಿರಾಮ ನೀಡಿದೆ. 

click me!